ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಿನ್ನರ ಗ್ರಾಮದಲ್ಲಿ ಮಂಗಗಳು ಊರಿನ ಜನರ ಮೇಲೆ ದಾಳಿ ಇಡುತ್ತಿದ್ದು, ಮಂಗನ ದಾಳಿಯಿಂದಾಗಿ ಗ್ರಾಮದ ಹತ್ತಕ್ಕೂ ಹೆಚ್ಚು ಜನರು ಇದೀಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.
ಇಡೀ ಕಿನ್ನರ ಗ್ರಾಮದ ರಸ್ತೆಗಳಲ್ಲಿ ಜನರು ಓಡಾಡಿದರೆ ಮಂಗಗಳು ಮರದಿಂದ ಹಾರಿ ಬಂದು ಜನರ ಮೇಲೆ ಎರಗುತಗತ್ತಿವೆ. ಹಲವರಿಗೆ ಕಾಲು, ಕೈಗಳಿಗೆ ಕಚ್ಚಿ ಗಾಸಿ ಮಾಡಿದರೆ, ಇನ್ನೂ ಕೆಲವರಿಗೆ ಗಂಭೀರ ಸ್ವರೂಪದ ಗಾಯ ಮಾಡಿವೆ. ಈ ಮಂಗಗಳ ವಿಚಿತ್ರ ವರ್ತನೆಗೆ ಬೆದರಿದ ಗ್ರಾಮಸ್ಥರು, ಕಾರವಾರದ ಅರಣ್ಯ ಇಲಾಖೆಗೆ ದೂರು ನೀಡಿದ್ದು, ಮಂಗಗಳನ್ನು ಹಿಡಿದು ಬೇರೆಡೆ ಬಿಡುವಂತೆ ಒತ್ತಾಯಿಸಿದ್ದಾರೆ. ಇನ್ನು ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಮಂಗನ ಹಿಡಿಯಲು ಬೋನ್ ಇಟ್ಟಿದ್ದು, ಕಾರ್ಯಾಚರಣೆಗೆ ಇಳಿದಿದ್ದಾರೆ.
Advertisement
Advertisement
ಏಕಾ ಏಕಿ ಮಂಗಗಳ ದಾಳಿಗೆ ಕಾರಣವೇನು?
ಕಿನ್ನರ ಗ್ರಾಮದ ಭಾಗದಲ್ಲಿ ಒಂದುಕಡೆ ಕಾಳಿ ನದಿ ಹರಿಯುತ್ತದೆ, ಮತ್ತೊಂದು ಕಡೆ ದಟ್ಟ ಅರಣ್ಯವಿದ್ದು, ಕಾಡುಪ್ರಾಣಿಗಳ ವಾಸ ಸ್ಥಳವಾಗಿದೆ. ಇದು ಕಪ್ಪು ಹಾಗೂ ಕೆಂಪು ಮಂಗಗಳ ಆವಾಸ ಸ್ಥಾನ ಕೂಡ. ಹೀಗಾಗಿ ಈ ಭಾಗದ ಅರಣ್ಯ ಭಾಗದಲ್ಲಿ ಮಂಗಗಳು ಸಾಮಾನ್ಯ. ಇನ್ನು ಮಳೆಗಾಲವಾದ್ದರಿಂದ ಕಾಡಿನಿಂದ ಅಲ್ಲಿಯೇ ಇರುವ ಅಕ್ಕ ಪಕ್ಕದ ಗ್ರಾಮಗಳಿಗೆ ಮಂಗಗಳು ಆಹಾರ ಅರಸಿ ಬರುತ್ತವೆ. ಹೀಗಿರುವಾಗ ಮಂಗಗಳ ದಾಳಿ ತಪ್ಪಿಸಲು ಮನೆಯಲ್ಲಿ ನಾಯಿಗಳನ್ನು ಸಾಕುತ್ತಾರೆ. ಮಂಗಗಳು ಬಂದಾಗ ನಾಯಿಗಳನ್ನು ಬಿಟ್ಟು ಓಡಿಸುವುದು ಸಾಮಾನ್ಯ.
Advertisement
Advertisement
ಕಳೆದ ಕೆಲವು ದಿನಗಳ ಹಿಂದೆ ಹೀಗೆ ಆಹಾರ ಅರಸಿ ಗ್ರಾಮದ ಕಡೆ ಬಂದಿದ್ದ ಮಂಗಗಳ ಗುಂಪೊಂದರಲ್ಲಿ ಮಂಗನ ಮರಿಗಳನ್ನು ನಾಯಿಗಳು ಬೇಟೆಯಾಡಿವೆ. ತಮ್ಮ ಕರುಳು ಬಳ್ಳಿಯನ್ನು ಕಣ್ಣೆದುರೇ ಕಳೆದುಕೊಂಡ ಮಂಗಗಳು ಇದೀಗ ಗ್ರಾಮದಲ್ಲಿ ಯಾರೇ ಓಡಾಡಿದರೂ ದಾಳಿ ಇಡುತ್ತಿದ್ದು, ಹಲವರಿಗೆ ಗಾಯ ಮಾಡಿವೆ. ಇದರಿಂದಾಗಿ ಇದೀಗ ಗ್ರಾಮದ ಜನರು ಮಂಗಗಳು ಎಂದರೆ ಭಯ ಪಡುವಂತಾಗಿದೆ. ಸದ್ಯ ಗ್ರಾಮದಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಮಂಗಗಳನ್ನು ಹಿಡಿದು ಬೇರೆಡೆ ಬಿಡಲು ಹರಸಾಹಸ ಪಡುತಿದ್ದಾರೆ.