ಚಿತ್ರದುರ್ಗ: ರಾಜ್ಯದಲ್ಲಿ ಸಚಿವ ಸಂಪುಟ ವಿಸ್ತರಣೆ ವಿಚಾರ ಮತ್ತೆ ಗರಿಗೆದರಿದೆ. ಸರ್ಕಾರ ಬರಲು ಕಾರಣರಾದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಇತರೆ ಶಾಸಕರಿಗೂ ಪ್ರಾತಿನಿಧ್ಯ ನೀಡಲಾಗುವುದು ಎಂದು ಸಚಿವ ಆರ್. ಅಶೋಕ್ ಹೇಳಿದ್ದಾರೆ.
ಹಿರಿಯೂರು ಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಳೆ ಸಿಎಂ ಬಿಎಸ್‍ವೈ ಅವರಿಂದ ನೂತನ ಸಚಿವರ ಪಟ್ಟಿ ಬಿಡುಗಡೆ ಸಾಧ್ಯತೆ ಇದೆ. ಬಿಎಸ್‍ವೈ ಸಿಎಂ ಸ್ಥಾನದಲ್ಲಿ ಮುಂದುವರಿಯಬೇಕೆಂಬುದು ನಮ್ಮ ಆಸೆ. ಶಾಸಕರ ಸಭೆಯಲ್ಲೂ ಈ ಬಗ್ಗೆ ಅಭಿಪ್ರಾಯ ತಿಳಿಸಿದ್ದೇವೆ. ಕೇಂದ್ರದ ನಾಯಕರು ಸಿಎಂ ಬದಲಾವಣೆ ಪ್ರಸ್ತಾಪ ಮಾಡಿಲ್ಲ ಎಂದರು.
ಬಿಜೆಪಿ ಸರ್ಕಾರದ ವಿರುದ್ಧ ಪದ ಬಳಸಿದ ಸಿದ್ದರಾಮಯ್ಯಗೆ ಟಾಂಗ್ ಕೊಟ್ಟ ಸಚಿವರು, ಹಣಕಾಸಿನ ಸಮಸ್ಯೆ ಮಧ್ಯೆ ಕೋವಿಡ್ ಸಮಸ್ಯೆ ನಿಭಾಯಿಸಿದ್ದೇವೆ. ಸಿದ್ದರಾಮಯ್ಯ ಸರ್ಕಾರ ಸುಖದಲ್ಲೇ ಕಾಲ ಕಳೆದಿತ್ತು. ಹೊಟ್ಟೆಕಿಚ್ಚಿನಿಂದ ಕಾಂಗ್ರೆಸ್ ನಾಯಕರಿಂದ ಸರ್ಕಾರದ ಬಗ್ಗೆ ಟೀಕೆ ವ್ಯಕ್ತವಾಗುತ್ತಿದೆ. ಚಟ ತೀರಿಸಿಕೊಳ್ಳಲು ಬಿಜೆಪಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ಗೋಹತ್ಯೆ ನಿಷೇಧ ಮಾಡಿದ್ದೇವೆ, ರಫ್ತು ಬಗ್ಗೆ ಕೇಂದ್ರ ಸರ್ಕಾರ ನಿರ್ಧರಿಸಲಿದೆ. ಗೋಮಾಂಸದ ಬಗ್ಗೆ ಮಾತಾಡಿ ಕಾಂಗ್ರೆಸ್ಸಿನಿಂದ ಮತಬ್ಯಾಂಕ್ ರಾಜಕೀಯ ನಡೆಯುತ್ತಿದೆ ಎಂದರು. ಇದೇ ವೇಳೆ ಆರ್‍ಎಸ್‍ಎಸ್‍ನವರು ಸಗಣಿ, ಗಂಜಲು ಎತ್ತಿಲ್ಲ ಎಂದು ಸಿದ್ದರಾಮಯ್ಯ ಟೀಕೆಗೆ ಗರಂ ಆದ ಸಚಿವರು, ಮಾಜಿ ಸಿಎಂ ಸಿದ್ಧರಾಮಯ್ಯ ಯಾವಾಗ ಆರ್‍ಎಸ್‍ಎಸ್ ಸೇರಿದ್ದರು?, ಸಿದ್ದರಾಮಯ್ಯ ಜೋತಿಷ್ಯ ಹೇಳಲು ಶುರು ಮಾಡಿದ್ದಾರೆ. ಸಿಎಂ ಬದಲಾವಣೆ ಆಗ್ತಾರೆ ಎಂದು ಹೇಳ್ತಾರೆ. ಆರ್‍ಎಸ್‍ಎಸ್‍ನವರು ಸಗಣಿ ಗಂಜಲು ಎತ್ತಿದ್ದಾರಾ ಅನ್ನುತ್ತಾರೆ ಎಂದು ಗರಂ ಆದರು.