ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕು ಆಸ್ಪತ್ರೆಯ ಶೌಚಾಲಯದಲ್ಲಿ ನವಜಾತ ಶಿಶು ಕೊಲೆ ಮಾಡಿರುವ ಅಮಾನವೀಯ ಘಟನೆ ನಡೆದಿದೆ.
ಆಸ್ಪತ್ರೆಯಲ್ಲಿರುವ ಶೌಚಾಲಯದ ಕಿಟಕಿಗೆ ಮಗು ತೂರಿಸಿ ಕುತ್ತಿಗೆಗೆ ದಾರದಿಂದ ನೇಣು ಬಿಗಿದು ಕೊಲೆ ಮಾಡಲಾಗಿದೆ. ಇನ್ನೂ ಕೊಲೆಯಾದ ಮಗು ಹೆಣ್ಣಾಗಿದ್ದು, ಹೆಣ್ಣು ಮಗು ಅಂತಲೇ ಕೊಲೆ ಮಾಡಿದರಾ ಅನ್ನೋ ಅನುಮಾನ ದಟ್ಟವಾಗಿದೆ. ಅಂದಹಾಗೆ ಇಂದು ಬೆಳಗ್ಗೆ 8 ಗಂಟೆ 45 ನಿಮಿಷ ಸುಮಾರಿಗೆ ಆಸ್ಪತ್ರೆಗೆ ಬಂದ ಇಬ್ಬರು ಅಪರಿಚಿತ ಮಹಿಳೆಯರು ಹಾಗೂ ಓರ್ವ ಪುರುಷ ಶೌಚಾಲಯದೊಳಗೆ ಪ್ರವೇಶ ಮಾಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಬೆಳಗ್ಗೆ ಗ್ರೂಪ್ ಡಿ ವೆಂಕಟೇಶಪ್ಪ ಎಂಬಾತ ಶೌಚಾಲಯ ಸ್ವಚ್ಛಗೊಳಿಸಲು ಬಾಗಿಲು ಬಡಿದರೂ ಒಳಗಿದ್ದವರು ಬಾಗಿಲು ತೆಗೆದಿಲ್ಲ. ತದನಂತರ 20 ನಿಮಿಷಗಳ ಬಳಿಕ ವೆಂಕಟೇಶಪ್ಪ ಶೌಚಾಲಯದೊಳಗೆ ಹೋಗಿ ನೋಡಿದಾಗ ನವಜಾತ ಶಿಶು ಕೊಲೆಯಾಗಿರುವ ವಿಚಾರ ಬೆಳಕಿಗೆ ಬಂದಿದೆ. ಕೃತ್ಯ ನಡೆಸಿದವರಿಗಾಗಿ ಹುಡುಕಾಟ ನಡೆಸಿದರೂ ಪತ್ತೆಯಾಗಿಲ್ಲ. ಸದ್ಯ ಈ ಸಂಬಂಧ ಚಿಂತಾಮಣಿ ತಾಲೂಕು ಆಸ್ಪತ್ರೆ ಸಹಾಯಕ ನಿವಾಸಿ ವೈದ್ಯಾಧಿಕಾರಿ ಸಂತೋಷ್ ಹಾಗೂ ತಾಲೂಕು ಆರೋಗ್ಯಾಧಿಕಾರಿ ದೂರಿನ ಮೇರೆಗೆ ಚಿಂತಾಮಣಿ ನಗರ ಪೊಲೀಸ್ ಠಾಣಾ ಸಿಪಿಐ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಆಸ್ಪತ್ರೆಯ ಸಿಸಿಟಿವಿಯಲ್ಲಿ ಇಬ್ಬರು ಅಪರಿಚಿತ ಮಹಿಳೆಯರು ಹಾಗೂ ಓರ್ವ ಪುರುಷ ಶೌಚಾಲಯದ ಬಳಿ ಹೋಗಿ ಬಂದಿರುವುದು ಕಂಡು ಬಂದಿದೆ. ಅವರ ಮೇಲೆ ಪೊಲೀಸರಿಗೆ ಅನುಮಾನ ಮೂಡಿದೆ. ಅನುಮಾನಿತರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಚಿಂತಾಮಣಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮತ್ತೊಂದೆಡ ಆಸ್ಪತ್ರೆ ವೈದ್ಯರು ಮಾಹಿತಿ ಪ್ರಕಾರ ಕಳೆದ 24 ಗಂಟೆಗಳಲ್ಲಿ ತಾಯಿ ಹಾಗೂ ಮಕ್ಕಳ ಆಸ್ಪತ್ರೆಯಲ್ಲಿ 6 ಮಂದಿ ಜನನವಾಗಿದ್ದು, ಅವರೆಲ್ಲರೂ ಸಹ ಆಸ್ಪತ್ರೆಯಲ್ಲೇ ಇದ್ದಾರೆ. ಹೀಗಾಗಿ ಈ ನವಜಾತು ಶಿಶು ಆಸ್ಪತ್ರೆಯಲ್ಲಿ ಜನಿಸಿರುವುದು ಅಲ್ಲ. ಬೇರೆ ಎಲ್ಲೋ ಜನನವಾಗಿರುವ ಮಗುವನ್ನು ತಂದು ಆಸ್ಪತ್ರೆಯಲ್ಲಿ ಈ ರೀತಿ ಮಾಡಿದ್ದಾರೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ. ಪೊಲೀಸರ ತನಿಖೆಯಿಂದ ಕೊಲೆಯ ಸತ್ಯ ಬಯಲಾಗಬೇಕಿದೆ. ಇದನ್ನೂ ಓದಿ : ಕೌಟುಂಬಿಕ ಕಲಹ ಶಂಕೆ – 3 ವರ್ಷದ ಮಗುವಿನೊಂದಿಗೆ ತಾಯಿ ಆತ್ಮಹತ್ಯೆ