ಶಿವಮೊಗ್ಗ: ಸರ್ಕಾರಿ ನೌಕರರು ಹೊಟ್ಟೆ ಬೆಳೆಸಿಕೊಳ್ಳುವುದು ಕಡಿಮೆ ಮಾಡಿ, ಆರೋಗ್ಯದ ಕಡೆಯೂ ಗಮನ ಹರಿಸಿ ಎಂದು ಸರ್ಕಾರಿ ನೌಕರರ ಕ್ರೀಡಾಕೂಟ ಉದ್ಘಾಟಿಸಿ ಉಸ್ತುವಾರಿ ಸಚಿವ ಈಶ್ವರಪ್ಪ ಅಧಿಕಾರಿಗಳಿಗೆ ಕಿವಿಮಾತು ಹೇಳಿದ್ದಾರೆ.
ಶಿವಮೊಗ್ಗದಲ್ಲಿ ಇಂದು ಜಿಲ್ಲಾ ಸರ್ಕಾರಿ ನೌಕರರ ಕ್ರೀಡಾಕೂಟ ಆಯೋಜಿಸಲಾಗಿತ್ತು. ನಗರದ ನೆಹರು ಕ್ರೀಡಾಂಗಣದಲ್ಲಿ ನಡೆದ ಕ್ರೀಡಾಕೂಟಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಗುಂಡು ಎಸೆಯುವ ಮೂಲಕ ಚಾಲನೆ ನೀಡಿದರು. ಕ್ರೀಡಾಕೂಟದಲ್ಲಿ ಸುಮಾರು 4 ಸಾವಿರಕ್ಕು ಅಧಿಕ ಸರ್ಕಾರಿ ನೌಕರರು ವಿವಿಧ ಕ್ರೀಡೆಯಲ್ಲಿ ಭಾಗವಹಿಸಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸರ್ಕಾರಿ ನೌಕರರು ಸದಾ ಕೆಲಸದಲ್ಲೇ ಬ್ಯುಸಿ ಆಗಿ ಇರುವುದರಿಂದ ಆರೋಗ್ಯದ ಕಡೆ ಗಮನ ಹರಿಸುವುದು ಕಡಿಮೆ. ಬೆಳಗ್ಗಿನಿಂದ ಸಂಜೆಯವರೆಗೆ ನೀವು ಕೆಲಸ ಮಾಡುವುದರಿಂದಾಗಿ ಎಷ್ಟೋ ನೌಕರರು ಹೊಟ್ಟೆ ಬೆಳೆಸಿಕೊಂಡಿರುತ್ತಾರೆ. ಹೊಟ್ಟೆ ಬೆಳೆಸುವುದನ್ನು ಬಿಟ್ಟು ವ್ಯಾಯಾಮ ಮಾಡುವ ಮೂಲಕ ಫಿಟ್ ಆಗಿರಿ, ತಮ್ಮ ಕುಟುಂಬಕ್ಕಾಗಿ ನೀವು ಆರೋಗ್ಯವಾಗಿರಬೇಕು ಎಂಬುದನ್ನು ಗಮನದಲ್ಲಿ ಇಟ್ಟುಕೊಳ್ಳಿ ಎಂದು ಹೇಳಿದ್ದಾರೆ.