ಬೆಂಗಳೂರು: ಒಂದೇ ವೇಳೆ ಈಗಲೂ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿ ಇರುತ್ತಿದ್ದರೆ ಇಷ್ಟು ಹೊತ್ತಿಗಾಗಲೇ ರಾಜ್ಯದಲ್ಲಿ ಕೊರೊನಾದಿಂದ 50 ಸಾವಿರ ಮಂದಿ ಸಾವನ್ನಪ್ಪುತ್ತಿದ್ರು ಅಂತ ಮಾಜಿ ಸಚಿವ ಹೆಚ್ ವಿಶ್ವನಾಥ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ದೈವ ಭಕ್ತಿ ಇರುವ ಮುಖ್ಯಮಂತ್ರಿ ಸಿಎಂ ಆಗಿರುವುದರಿಂದ ರಾಜ್ಯದಲ್ಲಿ ಕೊರೊನಾ ನಿಯಂತ್ರಣದಲ್ಲಿ ಇದೆ. ಮೈತ್ರಿ ಸರ್ಕಾರ ಇದ್ದಿದ್ದರೆ ಚಪ್ಪಾಳೆ ಹೊಡಿತಾರೆ, ದೀಪ ಹಚ್ಚುತ್ತಾರೆ. ಜಾಗಟೆ ಬಡಿತಾರೆ ಅಂತ ಉಡಾಫೆ ಮಾಡುತ್ತಿದ್ದರು. ಆದರೆ ಈಗಿನ ದೈವ ಭಕ್ತಿಯ ಮುಖ್ಯಮಂತ್ರಿಯಿಂದಾಗಿ ಎಲ್ಲವೂ ನಿಯಂತ್ರಣದಲ್ಲಿದೆ ಎಂದರು.
ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದರೆ ಪ್ರಧಾನಿ ಮೋದಿ ಹೇಳಿದ್ದು ಕೇಳಬೇಕಾ ಎನ್ನುತ್ತಿದ್ದರು. ಕುಮಾರಸ್ವಾಮಿ ಇದ್ದಿದ್ದರೆ ಕೊರೊನಾ ಮೊನ್ನೆ ಸಿಕ್ಕಿದ್ರು ಬ್ರದರ್ ಹೇಳಿದ್ದೀನಿ ಅಂತಿದ್ರು. ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾರಣರಾದ ನಾವು 17 ಜನ ನಿಜವಾದ ಕೊರೊನಾ ವಾರಿಯರ್ಸ್. ರಾಜ್ಯದ ಜನ ನಮಗೆ ಅಭಿನಂದನೆ ಸಲ್ಲಿಸಬೇಕು. ಸಮ್ಮಿಶ್ರ ಸರ್ಕಾರ ಪಥನ ಮಾಡಿ ಕೊರೊನಾ ಟೈಮಲ್ಲಿ ಒಳ್ಳೆಯ ಸರ್ಕಾರ ಬರುವಂತೆ ಮಾಡಿದ್ದೇವೆ ಎಂದು ತಿಳಿಸಿದರು.
ಇಡೀ ಪ್ರಪಂಚದಲ್ಲಿ ನಾಲಿಗೆ ಮಾತಿನ ಮೇಲೆ ನಿಲ್ಲುವ ಏಕೈಕ ನಾಯಕ ಯಡಿಯೂರಪ್ಪ. ಕೊಟ್ಟ ಮಾತು ನೆರವೇರಿಸುವ ಏಕೈಕ ನಾಯಕ.ನಮಗೆ ಏನು ಹೇಳಿದ್ರು ಅದನ್ನ ಮಾಡ್ತಾರೆ. ಅದರಲ್ಲಿ ಸಂಶಯವೇ ಬೇಡ ಎಂದು ಪರೋಕ್ಷವಾಗಿ ಪರಿಷತ್ ಗೆ ನೇಮಕ ಮಾಡ್ತಾರೆ ಅಂತ ಹೇಳಿದರು.