– ಬಿಜೆಪಿಯಲ್ಲಿ ಸಿಎಂ ಪರ ಯಾರಿದ್ದಾರೆ, ಯಾರಿಲ್ಲ?
ಬೆಂಗಳೂರು: ಸದನದಲ್ಲಿ ಪ್ರತಿ ಬಾರಿ ಸರ್ಕಾರದ ವಿರುದ್ಧ ವಿರೋಧ ಪಕ್ಷಗಳು ಮಾಡುತ್ತಿದ್ದ ಟೀಕೆಗಳಿಗೆ ಅಡ್ಡಗೋಡೆಯಾಗಿ ಕೆಲ ಶಾಸಕರು ನಿಲ್ಲುತ್ತಿದ್ದರು. ಈ ಬಾರಿ ವಿಪಕ್ಷ ನಾಯಕ ಸಿದ್ದರಾಮಯ್ಯ ಕಟುವಾಗಿ ಟೀಕೆ ಮಾಡಿದ್ರೂ ಕೂಡ ಸಿಎಂ ಪರ ಶಾಸಕರು ನಿಲ್ಲದಿರುವುದು ಎಲ್ಲೋ ಒಂದು ಕಡೆ ಯಡಿಯೂರಪ್ಪ ಅವರ ಆಪ್ತ ವಲಯಗಳು ಅನುಮಾನಕ್ಕೆ ಎಡೆಮಾಡಿಕೊಡ್ತಿವೆ. ಯಡಿಯೂರಪ್ಪನವರು ಮಾಡಿದ ಕೆಲ ಎಡವಟ್ಟುಗಳಿಂದಾಗಿ ಏಕಾಂಗಿಯಾದ್ರಾ ಎಂಬ ಪ್ರಶ್ನೆ ಹುಟ್ಟುಹಾಕಿದೆ.
ಪ್ರತಿ ಬಾರಿಯೂ ವಿರೋಧ ಪಕ್ಷಗಳ ಟೀಕೆಗಳಿಗೆ ತಕ್ಕ ಉತ್ತರ ಕೊಡ್ತಾ ಸರ್ಕಾರಕ್ಕೆ ತಡೆಗೋಡೆಯಾಗಿ ನಿಲ್ಲುತ್ತಿದ್ದ ಸಚಿವ ಮಾಧುಸ್ವಾಮಿ, ಈ ಬಾರಿ ಏನೇ ಟೀಕೆಗಳು ಬಂದರೂ ಕೂಡ ಕಂಡರೂ ಕೇಳದ ಹಾಗೆ ಮೌನವಾಗಿದ್ದು ಈ ಪ್ರಶ್ನೆ ಹುಟ್ಟುಹಾಕಿದೆ. ಮಾಧುಸ್ವಾಮಿಯಿಂದ ಪದೇ ಪದೇ ಖಾತೆ ಕಿತ್ತುಕೊಂಡಿದ್ದಕ್ಕೆ ಅಸಮಾಧಾನದಿಂದ ಮಾಧುಸ್ವಾಮಿ ಮೌನಕ್ಕೆ ಶರಣಾಗಿದ್ದಾರೆ ಎನ್ನಲಾಗ್ತಿದೆ.
ಕೇಸರಿ ಪಾಳಯದಲ್ಲಿ ಮೊದಲಿನಿಂದ ರಾಜಾಹುಲಿ ಮೇಲಿದ್ದ ಭಯ ಇದೀಗ ಶಾಸಕ, ಸಚಿವರಿಗೆ ಇಲ್ಲ. ಯಡಿಯೂರಪ್ಪ ಅವರ ಕಲವೊಂದು ಆತುರದ ನಿರ್ಧಾರಗಳಿಂದಾಗಿ ಬಹುತೇಕ ಸಚಿವರು, ಶಾಸಕರು ಮುನಿಸಿಕೊಂಡಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಇದ್ದ ಬಿಎಸ್‍ವೈ ಆಪ್ತರ ಸಂಖ್ಯೆ ದಿನೇ ದಿನೇ ಗಣನೀಯವಾಗಿ ಕಡಿಮೆ ಆಗುತ್ತಿದೆ ಎಂದು ರಾಜಕೀಯ ಅಂಗಳ ಹೇಳುತ್ತಿದೆ.
ಈ ಹಿಂದಿನ ಅಧಿವೇಶನಗಳಲ್ಲಿ ಬಿಎಸ್‍ವೈ ಆಪ್ತ ಸೇನೆ ಯಾವುದೇ ಸಮಯದಲ್ಲಾಗಲಿ ಬೆನ್ನಿಗೆ ಬೆಂಬಲವಾಗಿ ನಿಲ್ಲುತ್ತಿತ್ತು. ಇದೀಗ ಪರಿಸ್ಥಿತಿ ಸಂಪೂರ್ಣವಾಗಿ ಉಲ್ಟಾ ಆಗಿದೆ. ಬುಧವಾರ ವಿಧಾನಸಭೆಯ ಕಲಾಪದಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಬಿಎಸ್‍ವವೈ ಆಪರೇಷನ್ ಕಮಲದ ಜನಕ, ಅಸಮರ್ಥ ಸಿಎಂ ಅಂತ ತೀಕ್ಷವಾಗಿ ಟೀಕೆ ಮಾಡಿದರು. ಸರ್ಕಾರ ಡಕೋಟ ಎಕ್ಸ್ ಪ್ರೆಸ್ ಗಾಡಿಯಾಗಿದೆ. ಅಕ್ರಮ ಡಿನೋಟಿಫಿಕೇಷನ್ ಪ್ರಕರಣ ಎಳೆ ತಂದ ಸಿದ್ದರಾಮಯ್ಯನವರು ಸಿಎಂ ರಾಜೀನಾಮೆ ಕೊಡಲಿ ಅಂತ ಪರೋಕ್ಷವಾಗಿ ಹೇಳಿ ವಾಗ್ದಾಳಿ ನಡೆಸಿದರು. ವಿಪಕ್ಷ ನಾಯಕರು ಇಷ್ಟೆಲ್ಲ ಟೀಕೆ ಮಾಡುತ್ತಿದ್ದರೂ ಸಿಎಂ ಪರ ಯಾವ ಸಚಿವ, ಶಾಸಕರು ಮಾತನಾಡಲಿಲ್ಲ.
ಯಡಿಯೂರಪ್ಪರ ಬಲಗೈ ಎಡಗೈನಂತಿದ್ದ ಹಾಗೂ ಪ್ರತಿ ಸಲ ಸಿಎಂ ಪರ ನಿಲ್ಲುತ್ತಿದ್ದ ಜೆಸಿ ಮಾಧುಸ್ವಾಮಿ, ರೇಣುಕಾಚಾರ್ಯ ಸೈಲೆಂಟ್ ಆಗಿದ್ದು ಕುತೂಹಲಕ್ಕೆ ಕಾರಣವಾಯ್ತು. ಇನ್ನು ಮಂಬೈ ಮಿತ್ರ ಮಂಡಳಿ ಸಹ ಸಾಥ್ ನೀಡಲಿಲ್ಲ.