ಸಚಿವಾಲಯದ ಆವರಣದಲ್ಲಿ ಮಸೀದಿ, ಮಂದಿರ, ಚರ್ಚ್ ನಿರ್ಮಾಣ: ತೆಲಂಗಾಣ ಸಿಎಂ

Public TV
3 Min Read
Owaisi KCR

– ಮುಸ್ಲಿಂ ಮುಖಂಡರ ಒತ್ತಡಕ್ಕೆ ಮಣಿದು ನಿರ್ಧಾರ

ಹೈದರಾಬಾದ್: ಮುಸ್ಲಿಂ ಮುಖಂಡರ ಒತ್ತಡಕ್ಕೆ ಮಣಿದು ರಾಜ್ಯ ಸಚಿವಾಲಯದ ಆವರಣದಲ್ಲಿ 2 ಮಸೀದಿ, 1 ದೇವಸ್ಥಾನ, 1 ಚರ್ಚ್ ನಿರ್ಮಿಸುವ ನಿರ್ಧಾರವನ್ನು ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಕೈಗೊಂಡಿದ್ದಾರೆ.

kcr

ಪ್ರಗತಿ ಭವನದಲ್ಲಿ ಮುಸ್ಲಿಂ ಸಮುದಾಯದ ಹಿರಿಯ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಸಿಎಂ ಚಂದ್ರಶೇಖರ್ ರಾವ್ ಈ ನಿರ್ಧಾರ ಕೈಗೊಂಡಿದ್ದಾರೆ. ಗಂಗಾ, ಯಮುನಾ, ತೆಹ್ಜೀಬ್ ಸಂಕೇತವಾಗಿ ಇವುಗಳನ್ನು ನಿರ್ಮಿಸುತ್ತಿರುವುದಾಗಿ ಚಂದ್ರಶೇಖರ್ ರಾವ್ ಹೇಳಿದ್ದಾರೆ. ಎಲ್ಲ ಪೂಜಾ ಸ್ಥಳಗಳಿಗೆ ಒಂದೇ ದಿನ ಅಡಿಪಾಯ ಹಾಕಿ, ಒಂದೇ ದಿನ ನಿರ್ಮಾಣ ಕಾರ್ಯ ಪ್ರಾರಂಭಿಸಿ, ಪೂರ್ಣಗೊಳಿಸಲಾಗುವುದು ಎಂದು ಅವರು ತಿಳಿದ್ದಾರೆ.

ಸಚಿವಾಲಯದ ಹಳೆಯ ಕಟ್ಟಡವನ್ನು ಕೆಡುವುವಾಗ ಒಂದು ದೇವಸ್ಥಾನ, ಎರಡು ಮಸೀದಿಗಳಿಗೆ ಹಾನಿಯಾಗಿತ್ತು, ಈ ಹಿನ್ನೆಲೆ ಮುಸ್ಲಿಂ ಮುಖಂಡರೊಂದಿಗೆ ನಡೆದ ಸಭೆಯಲ್ಲಿ ಚಂದ್ರಶೇಖರ್ ರಾವ್ ಈ ನಿರ್ಧಾರ ಕೈಗೊಂಡಿದ್ದಾರೆ.

ಒಂದು ಇಮಾಮ್ ಕ್ವಾರ್ಟರ್ಸ್ ಸೇರಿ ತಲಾ 750 ಚ.ಅಡಿ ಒಟ್ಟು 1,500 ಚ.ಅಡಿಯಲ್ಲಿ 2 ಮಸೀದಿಗಳನ್ನು ನಿರ್ಮಿಸಲು ಸರ್ಕಾರ ನಿರ್ಧರಿಸಿದೆ. ಈ ಹಿಂದೆ ಮಸೀದಿಗಳಿದ್ದ ಜಾಗದಲ್ಲೇ ಹೊಸ ಕಟ್ಟಡ ನಿರ್ಮಿಸಲು ಕ್ರಮ ಕೈಗೊಳ್ಳಲಾಗಿದೆ. ಹೊಸ ಮಸೀದಿಗಳನ್ನು ನಿರ್ಮಿಸಿದ ಬಳಿಕ ರಾಜ್ಯ ವಕ್ಫ್ ಬೋರ್ಡ್ ಗೆ ಹಸ್ತಾಂತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಸಿಎಂ ತಿಳಿಸಿದ್ದಾರೆ.

ದೇವಸ್ಥಾನವನ್ನು 1,500 ಚ.ಅಡಿ ಜಾಗದಲ್ಲಿ ನಿರ್ಮಿಸಲಾಗುತ್ತಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ಇದನ್ನೂ ಸಹ ಧಾರ್ಮಿಕ ದತ್ತಿ ಇಲಾಖೆಗೆ ಹಸ್ತಾಂತರಿಸಲು ಕ್ರಮ ಕೈಗೊಳ್ಳಲಾಗಿದೆ. ಈ ಎಲ್ಲ ಬೆಳವಣಿಗೆ ನಡೆಯುತ್ತಿರುವಾಗಲೇ ಕ್ರಿಶ್ಚಿಯನ್ ಸಮುದಾಯದವರು ಸಹ ಚರ್ಚ್‍ಗಾಗಿ ಬೇಡಿಕೆ ಇಟ್ಟಿದ್ದಾರೆ. ಹೊಸ ಸಚಿವಾಲಯದ ಕಟ್ಟಡದ ಆವರಣದಲ್ಲಿ ಚರ್ಚ್ ಸಹ ಇರಬೇಕು ಎಂದು ಬೇಡಿಕೆ ಇಟ್ಟಿದೆ. ಹೀಗಾಗಿ ಚರ್ಚ್ ಸಹ ನಿರ್ಮಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.

kcr 2

ರಾಜ್ಯವು ಎಲ್ಲ ಧರ್ಮಗಳನ್ನು ಸಮಾನವಾಗಿ ಪರಿಗಣಿಸುತ್ತದೆ. ತೆಲಂಗಾಣ ಧಾರ್ಮಿಕ ಸಹಿಷ್ಣುತೆಯನ್ನು ಪಾಲಿಸುತ್ತದೆ ಎಂದು ಸಿಎಂ ಕೆಸಿಆರ್ ಹೇಳಿದ್ದಾರೆ. ಈ ಕುರಿತು ತೆಲಂಗಾಣದಲ್ಲಿ ಇದೀಗ ಭಾರೀ ಚರ್ಚೆ ನಡೆಯುತ್ತಿದೆ.

ಅನಾಥ ಮುಸ್ಲಿಂ ಮಕ್ಕಳಿಗಾಗಿ ಆಶ್ರಯ ಕೇಂದ್ರ ನಿರ್ಮಾಣ ಕಾಮಗಾರಿ ಸಹ ಅಂತಿಮ ಹಂತದಲ್ಲಿದ್ದು, ಇನ್ನೂ 18 ಕೋಟಿ ರೂ.ಗಳನ್ನು ಇದೀಗ ಕೆಸಿಆರ್ ಸರ್ಕಾರ ಬಿಡುಗಡೆ ಮಾಡುತ್ತಿದೆ. ಅಲ್ಲದೆ ಹೈದರಾಬಾದ್‍ನಲ್ಲಿ ಅಂತರಾಷ್ಟ್ರೀಯ ಮಟ್ಟದ ಮುಸ್ಲಿಂ ಕೇಂದ್ರವನ್ನು ಸ್ಥಾಪಿಸಲು ಸಹ ಕೆಸಿಆರ್ ಸರ್ಕಾರ ನಿರ್ಧರಿಸಿದೆ. ಇದಕ್ಕಾಗಿ ಜಾಗವನ್ನು ಸಹ ಸರ್ಕಾರ ಗುರುತಿಸಿದೆ.

ಅಲ್ಲದೆ ಮುಸ್ಲಿಂ ಸಮುದಾಯದವರಿಗಾಗಿ ಸಮಾಧಿ ಸ್ಥಳ(ಖಬ್ರಾಸ್ತಾನ್)ಗಳನ್ನು ಸಹ ಗುರುತಿಸಲು ಸರ್ಕಾರ ಮುಂದಾಗಿದ್ದು, ನಗರದ ಹಲವು ಸ್ಥಳಗಳಲ್ಲಿ 150-200 ಖಬ್ರಾಸ್ತಾನ್ ನಿರ್ಮಾಣಕ್ಕೆ ಯೋಜನೆ ರೂಪಿಸಿದೆ. ಇಷ್ಟು ಮಾತ್ರವಲ್ಲದೆ ಉರ್ದುವನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿ ಗುರುತಿಸಲು ಕೆಸಿಆರ್ ಮುಂದಾಗಿದ್ದಾರೆ. ಉರ್ದು ಭಾಷೆಯ ರಕ್ಷಣೆ, ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ಆಯೋಜಿಸಲು ಕೆಸಿಆರ್ ಯೋಜನೆ ರೂಪಿಸಿದ್ದಾರೆ. ಸರ್ಕಾರ ನಡೆಸಿದ ಸಭೆಯಲ್ಲಿ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹಾಗೂ ಇವರ ಸಹೋದರ ಅಕ್ಬರುದ್ದೀನ್ ಓವೈಸಿ ಸಹ ಸಭೆಯಲ್ಲಿ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *