– ಗಂಟು ಮೂಟೆ ಸಹಿತ ಸಚಿವರಲ್ಲಿಗೆ ಬಂದ ಗರ್ಭಿಣಿ
ರಾಯಚೂರು: ಕೊರೊನಾ ಭೀತಿ ಸಂದರ್ಭದಲ್ಲಿ ಅಧಿಕಾರಿಗಳು ಏಕಾಏಕಿ ಮನೆಗಳನ್ನ ನೆಲಸಮ ಮಾಡಿದ್ದರಿಂದ ರಾಯಚೂರಿನ ದೇವದುರ್ಗದ ಎಚ್.ಸಿದ್ದಾಪುರ ಪುನರ್ವಸತಿ ಗ್ರಾಮದ 50 ಕುಟುಂಬಗಳು ಬೀದಿಗೆ ಬಿದ್ದಿವೆ. ಹೀಗಾಗಿ ಗರ್ಭಿಣಿ, ಚಿಕ್ಕ ಮಕ್ಕಳು ಸೇರಿದಂತೆ ಸಂತ್ರಸ್ತರೆಲ್ಲಾ ನಗರದ ಜಿಲ್ಲಾ ಪಂಚಾಯತಿ ಕಚೇರಿಗೆ ಗಂಟು ಮೂಟೆ ಸಹಿತ ಬಂದು ನ್ಯಾಯಕ್ಕೆ ಆಗ್ರಹಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಕಾಲಿಗೆ ಬಿದ್ದು ಸೂರು ಒದಗಿಸುವಂತೆ ಮನವಿ ಮಾಡಿದ್ದಾರೆ.
Advertisement
2009 ರ ಪ್ರವಾಹದಲ್ಲಿ ಮನೆ ಕಳೆದುಕೊಂಡ 110 ಕುಟುಂಬಗಳನ್ನ ಗುರುತಿಸಿ ಫಲಾನುಭವಿಗಳಿಗೆ ಮನೆ ಕಟ್ಟಿಸಿಕೊಡಲು ಬೆಂಗಳೂರಿನ ಮೆಟ್ರೋ ಕಾರ್ಪೋರೇಷನ್ ಹಾಗೂ ಈಗಿನ ಕೆ.ಆರ್.ಐ.ಡಿ.ಎಲ್ ಗೆ ವಹಿಸಿಕೊಡಲಾಗಿತ್ತು. ಆದ್ರೆ ಏಜೆನ್ಸಿಗಳು ಕೇವಲ 60 ಮನೆಗಳನ್ನ ನಿರ್ಮಿಸಿ ಉಳಿದ 50 ಫಲಾನುಭವಿಗಳಿಗೆ ಮನೆ ನಿರ್ಮಿಸಿಕೊಡದೆ ಹಾಗೇ ಉಳಿಸಿದ್ದವು. ನಿಗದಿಯಾದ ಜಾಗದಲ್ಲಿ ಉಳಿದ 50 ಕುಟುಂಬಗಳು ತಾವೇ ಸ್ವಂತ ಖರ್ಚಿನಲ್ಲಿ ಟಿನ್ ಶಡ್ ಹಾಕಿಕೊಂಡು ಜೀವನ ನಡೆಸುತ್ತಿದ್ದವು.
Advertisement
Advertisement
ಆದ್ರೆ ಈಗ ಅದೇ ಜಾಗದಲ್ಲಿ ಗ್ರಾಮದ ಶಾಲೆಯ ಕಟ್ಟಡ ಮಂಜೂರಾಗಿರುವುದರಿಂದ ಸಂತ್ರಸ್ತರನ್ನ ಖಾಲಿ ಮಾಡಿಸಲಾಗುತ್ತಿದೆ. ಹೀಗಾಗಿ 50 ಕುಟುಂಬಗಳು ಬೀದಿಗೆ ಬಂದಿವೆ. ಫಲಾನುಭವಿಗಳಾಗಿರುವ ವೃದ್ಧರು, ಗರ್ಭಿಣಿ, ಮಕ್ಕಳೆನ್ನದೇ ಅಧಿಕಾರಿಗಳು ಟಿನ್ ಶಡ್, ಗುಡಿಸಲುಗಳನ್ನ ನೆಲಸಮ ಮಾಡಿದ್ದಾರೆ. ನಮಗೆ ಸರ್ಕಾರವೇ ನ್ಯಾಯ ಕೊಡಿಸಬೇಕು ಅಂತ ಸಂತ್ರಸ್ತರು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿಗೆ ಮನವಿ ಮಾಡಿದ್ದಾರೆ. ಪರಿಶೀಲಿಸಿ ಕ್ರಮ ಕೈಗೊಳ್ಳುವುದಾಗಿ ಸಚಿವರು ಭರವಸೆ ಕೊಟ್ಟಿದ್ದಾರೆ.
Advertisement