ಮಂಡ್ಯ: ಸಕ್ಕರೆ ನಾಡು ಮಂಡ್ಯಗೆ ಮುಂಬೈ ಕೊರೊನಾ ನಂಜು ಬಿಟ್ಟು ಬಿಡದೆ ಕಾಡುತ್ತಿದೆ. ಜಿಲ್ಲೆಯಲ್ಲಿ ಗುರುವಾರ ದೃಢಪಟ್ಟ 4 ಪ್ರಕರಣಗಳು ದೂರದ ಮಹಾರಾಷ್ಟ್ರದ ನಂಟನ್ನು ಹೊಂದಿವೆ.
ಮುಂಬೈನಿಂದ ವಾಪಸ್ಸಾಗಿದ್ದ ನಾಲ್ವರಿಗೆ ಕೊರೊನಾ ದೃಢವಾಗಿದೆ. ಮಂಡ್ಯ ಜಿಲ್ಲೆಯ 36 ಸೋಂಕಿತರ ಪೈಕಿ ಮುಂಬೈನಿಂದ ವಾಪಸ್ ಆಗಿದ್ದ 15 ಮಂದಿಗೆ ಸೋಂಕು ತಗುಲಿದೆ. ಮುಂಬೈ ನಿಂದ ವಾಪಸ್ ಬಂದ ಕೆ.ಆರ್.ಪೇಟೆ ತಾಲೂಕಿನ 10 ಮಂದಿ, ಪಾಂಡವಪುರದ 3, ನಾಗಮಂಗಲದ ಒಬ್ಬ ಹಾಗೂ ಚನ್ನರಾಯಪಟ್ಟಣ ಮೂಲದ ಒಬ್ಬರಿಗೆ ಕೊರೊನಾ ಬಂದಿದೆ.
ಕೆ.ಆರ್.ಪೇಟೆ ತಾಲೂಕಿಗೆ ಮುಂಬೈನಿಂದ ಹೆಚ್ಚು ಜನರು ವಾಪಸ್ ಬಂದಿದ್ದು, ತಾಲೂಕಿನ ಜನರಲ್ಲಿ ಆತಂಕ ಹೆಚ್ಚಿಸಿದೆ. ಮುಂಬೈನಲ್ಲಿ ಬದುಕು ಕಟ್ಟಿಕೊಳ್ಳಲು ಹೋಗಿದ್ದವರು ಸೋಂಕು ಹೊತ್ತು ಜಿಲ್ಲೆಗೆ ವಾಪಸ್ ಆಗಿದ್ದಾರೆ. ಹೀಗಾಗಿ ಮುಂಬೈನಿಂದ ವಾಪಸ್ ಬರುತ್ತಿರುವವರು ಜಿಲ್ಲಾಡಳಿತಕ್ಕೂ ದೊಡ್ಡ ತಲೆನೋವಾಗಿದ್ದಾರೆ. ಆದ್ದರಿಂದ ಜಿಲ್ಲೆಯಲ್ಲಿ ಮುಂಬೈನಿಂದ ಬಂದವರಿಂದಾಗಿ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಹೊರ ರಾಜ್ಯದಿಂದ ಮಂಡ್ಯಕ್ಕೆ ಬರುವವರ ಮೇಲೆ ಜಿಲ್ಲಾಡಳಿತ ತೀವ್ರ ನಿಗಾವಹಿಸಿದೆ. ಬಂದವರನ್ನು ಕ್ವಾರಂಟೈನ್ ಮಾಡಿ ಗಂಟಲು ದ್ರವದ ಮಾದರಿ ಪರೀಕ್ಷೆ ಮಾಡಿಸಲಾಗುತ್ತಿದೆ. ಈ ಪೈಕಿ ಇನ್ನೂ 925 ಜನರ ಪರೀಕ್ಷಾ ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಈ 925 ಪೈಕಿ ಮುಂಬೈನಿಂದ ವಾಪಸ್ಸಾಗಿರುವವರ ಸಂಖ್ಯೆ ಎಷ್ಟು ಅನ್ನೋದನ್ನು ಜಿಲ್ಲಾಡಳಿತ ಬಿಟ್ಟು ಕೊಟ್ಟಿಲ್ಲ.