– ನಿಯಮ ಉಲ್ಲಂಘಿಸಿದ್ರೆ 1 ಸಾವಿರ ದಂಡ
ಮೈಸೂರು: ನಗರದಲ್ಲಿ ಕೊರೊನಾ ಭೀತಿ ಕಡಿಮೆಯಾದ ಹಿನ್ನೆಲೆಯಲ್ಲಿ ಮೈಸೂರು ಮೃಗಾಲಯವನ್ನು ತೆರೆಯಲು ಸಿದ್ಧತೆ ನಡೆಸಲಾಗುತ್ತಿದೆ.
ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲು ಕರ್ನಾಟಕ ಮೃಗಾಲಯ ಪ್ರಾಧಿಕಾರ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಅದರಲ್ಲಿ ಮೃಗಾಲಯಕ್ಕೆ ಬರುವ ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ರೀನಿಂಗ್ ಕಡ್ಡಾಯ ಮಾಡಲಾಗಿದೆ. ಅಲ್ಲದೆ ಅವರು ತಮ್ಮೊಂದಿಗೆ ಯಾವುದೇ ವಸ್ತುಗಳನ್ನು ತರುವಂತಿಲ್ಲ. ಮೆಡಿಕೇಟ್ ಫುಟ್ ಮ್ಯಾಟ್ ಮೂಲಕವೇ ಮೃಗಾಲಯದೊಳಕ್ಕೆ ಪ್ರವೇಶಿಸಬೇಕು ಎಂದು ತಿಳಿಸಿದೆ.
65 ವರ್ಷ ಮೇಲ್ಪಟ್ಟವರಿಗೆ ಮೃಗಾಲಯ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಪ್ರತಿಯೊಬ್ಬರ ನಡುವೆ 10 ಅಡಿ ಅಂತರವಿರಬೇಕು. ಮಾಸ್ಕ್ ಧರಿಸುವುದು ಕಡ್ಡಾಯವಾಗಿದೆ. ಮೃಗಾಲಯದ ಆವರಣದೊಳಗೆ ಉಗುಳಬಾರದು. ಪ್ರಾಣಿಗಳಿಗೆ ಆಹಾರ ನೀಡಬಾರದು. ಹೀಗೆ ಮೃಗಾಲಯ ಪ್ರಾಧಿಕಾರ ಹಲವು ಮಾರ್ಗಸೂಚಿಗಳನ್ನು ನೀಡಿದೆ. ಮಾರ್ಗಸೂಚಿ ಉಲ್ಲಂಘಿಸಿದರೆ 1,000 ದಂಡ ವಿಧಿಸುವುದಾಗಿ ಎಚ್ಚರಿಕೆ ಕೂಡ ನೀಡಲಾಗಿದೆ.