– ನಿರ್ಬಂಧದ ನಡುವೆ ಅಡ್ಡ ಪಲ್ಲಕ್ಕಿ ಉತ್ಸವ
– ಪೊಲೀಸ್ ವಾಹನಕ್ಕೂ ಡಿಕ್ಕಿ
ಕೊಪ್ಪಳ: ನಿರ್ಬಂಧದ ನಡುವೆಯೂ ಅಡ್ಡಪಲ್ಲಕ್ಕಿ ಉತ್ಸವವನ್ನು ಆಚರಣೆ ಮಾಡಿದ್ದು, ಪರಿಣಾಮ 50ಕ್ಕೂ ಅಧಿಕ ಮಂದಿಯನ್ನು ಪೊಲೀಸರು ಬಂಧಿಸಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಜಿಲ್ಲೆಯ ಕುಷ್ಟಗಿ ತಾಲೂಕಿನ ದೋಟಿಹಾಳ ಗ್ರಾಮದ ಶ್ರೀಅವಧೂತ ಶುಕಮುನಿ ದೇವರ ಆರಾಧನೆ ಮಹೋತ್ಸವ ನಿಮಿತ್ತ ಪ್ರತಿ ವರ್ಷ ಅಡ್ಡಪಲ್ಲಕ್ಕಿ ಉತ್ಸವ ಅದ್ಧೂರಿಯಾಗಿ ಆಚರಿಸಲಾಗುತ್ತಿತ್ತು. ಆದರೆ ಬಾರಿ ಕೊರೊನಾ ಭೀತಿಯಿಂದ ತಲತಲಾಂತರದಿಂದ ಆಚರಿಸಿಕೊಂಡು ಬಂದಂತಹ ಅಡ್ಡಪಲ್ಲಕ್ಕಿ ಉತ್ಸವವನ್ನು ಸರಳವಾಗಿ ದೇವಸ್ಥಾನದ ಆವರಣದಲ್ಲಿ ಆಚರಿಸಲು ದೇವಸ್ಥಾನದ ಆಡಳಿತ ಮಂಡಳಿ ನಿರ್ಧರಿಸಿತ್ತು.
Advertisement
Advertisement
ಅಡ್ಡಪಲ್ಲಕ್ಕಿ ಉತ್ಸವ ಮೆರವಣಿಗೆ ಆರಂಭವಾಗುತ್ತಿದಂತೆ ಏಕಾಏಕಿ ಪಲ್ಲಕ್ಕಿ ಹೊತ್ತ ಭಕ್ತರು ದೇವಸ್ಥಾನದ ಮುಖ್ಯದ್ವಾರದ ಬಾಗಿಲು ಒಡೆಯಲು ಆರಂಭಿಸಿದರು. ಕೊನೆಗೆ ದೇವಸ್ಥಾನದ ಶಟರ್ ಧ್ವಂಸಗೊಳಿಸಿ ಪಲ್ಲಕ್ಕಿಯನ್ನು ಹೊರ ತಂದು ಗ್ರಾಮದಲ್ಲಿ ಮೆರವಣಿಗೆ ಮಾಡಲಾಯಿತು. ಈ ಮಧ್ಯೆ ಪಲ್ಲಕ್ಕಿ ಹೊರಬರುತ್ತಿದಂತೆ ಅಲ್ಲೆ ನಿಲ್ಲಿಸಿದ್ದ ಪೊಲೀಸ್ ವಾಹನಕ್ಕೆ ಡಿಕ್ಕಿ ಹೊಡೆದಿದ್ದು, ಪೊಲೀಸ್ ವಾಹನದ ಗಾಜು ಪುಡಿ ಪುಡಿಯಾಗಿದೆ.
Advertisement
Advertisement
ಅಡ್ಡಪಲ್ಲಕ್ಕಿ ಉತ್ಸವಕ್ಕೆ ತಹಶೀಲ್ದಾರರು ನಿರ್ಬಂಧ ಹೇರಿದರೂ ಕೂಡ ಸಾವಿರಾರು ಜನಜಂಗುಳಿ ಮಧ್ಯೆ ಪಲ್ಲಕ್ಕಿ ಉತ್ಸವ ಆಚರಣೆ ಮಾಡಿದ್ದಾರೆ. ಅಲ್ಲದೇ ನಾನಾ ಅವಾಂತರಕ್ಕೂ ಕಾರಣವಾಯಿತು. ಸ್ಥಳದಲ್ಲಿ ಬೀಡು ಬಿಟ್ಟಿದ್ದ ಕುಷ್ಟಗಿ ತಹಶೀಲ್ದಾರ್ ಎಂ.ಸಿದ್ದೇಶ ಸೇರಿದಂತೆ ಪೊಲೀಸ್ ಅಧಿಕಾರಿಗಳ ಮಾತಿಗೂ ಜನರು ಕ್ಯಾರೆ ಮಾಡಲಿಲ್ಲ. ಕೊನೆಗೆ ಪೊಲೀಸರು ಮತ್ತು ಜನರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಪೊಲೀಸರು ಜನ್ರು ಮೇಲೆ ಲಾಠಿ ಕೂಡ ಬೀಸಿದರು.
ಒಂದು ಗಂಟೆಗಳ ಕಾಲ ಗ್ರಾಮದ ಮಧ್ಯೆ ಗ್ರಾಮಸ್ಥರು ಪಲ್ಲಕ್ಕಿ ಬಿಟ್ಟು ಹೋಗಿದ್ದರು. ಕೊನೆಗೆ ಪೊಲೀಸರು ಪಲ್ಲಕ್ಕಿ ಹೊತ್ತು ದೇವಸ್ಥಾನಕ್ಕೆ ತಂದಿದ್ದಾರೆ. ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿತ್ತು. ರಾತ್ರಿ ಸ್ಥಳಕ್ಕೆ ಎಸ್‍ಪಿ ಜಿ.ಸಂಗೀತಾ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ಕುಷ್ಟಗಿ ಕಂದಾಯ ನೀರಿಕ್ಷಕ ಮತ್ತು ಪೊಲೀಸ್ ಠಾಣೆ ಸಿಬ್ಬಂದಿಯಿಂದ ಪ್ರತ್ಯೇಕ ದೂರು ದಾಖಲು ಮಾಡಿದ್ದಾರೆ. ಇಬ್ಬರು ದೂರಿನನ್ವಯ ಪೊಲೀಸರು 50ಕ್ಕೂ ಹೆಚ್ಚು ಜನರನ್ನು ಬಂಧಿಸಿದ್ದಾರೆ.