ಬೆಂಗಳೂರು: ಖಾಸಗಿ ಶಾಲಾ-ಕಾಲೇಜುಗಳ ಶುಲ್ಕ ನಿಗದಿ ವಿಚಾರ ಪೋಷಕರಿಗೆ ಯಾವುದೇ ಹೊರೆಯಾಗದಂತೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಭರವಸೆ ನೀಡಿದ್ದಾರೆ.
2006 ರಲ್ಲಿ ಟೆಂಟ್ ಶಾಲೆಯಾಗಿ ಪ್ರಾರಂಭವಾದ, ಬೆಂಗಳೂರು ಹೊರವಲಯ ನೆಲಮಂಗಲದ ಅಂಬೇಡ್ಕರ್ ನಗರಕ್ಕೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಭೇಟಿ ನೀಡಿ, ನೂತನ ಶಾಲೆಯನ್ನು ಉದ್ಘಾಟಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಖಾಸಗಿ ಶಾಲಾ ಕಾಲೇಜುಗಳ ಶುಲ್ಕ ನಿಗದಿ ವಿಚಾರ ಚರ್ಚೆಯಲ್ಲಿದೆ. ಮೊನ್ನೆ ಆಯುಕ್ತರ ಸಭೆ ನಡೆದಿದೆ ಅವರು ವಿವರ ಕೊಡುತ್ತಾರೆ. ಪೋಷಕರಿಗೆ ಯಾವುದೇ ಹೊರೆಯಾಗದ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತದೆ. ಖಾಸಗಿ ಶಾಲಾ ಶಿಕ್ಷಕರಿಗೆ ವೇತನ ಸಿಗುವಂತೆ ಹಾಗೂ ಪೋಷಕರಿಗೆ ಮತ್ತು ಖಾಸಗಿ ಶಾಲೆಗಳಿಗೆ ಇಬ್ಬರಿಗೂ ಬ್ಯಾಲೆನ್ಸ್ ಮಾಡುವಂತೆ ನಿರ್ಧಾರ ಕೈಗೊಳ್ಳುಲಾಗುತ್ತದೆ. ರಾಜ್ಯದಲ್ಲಿ ಶಾಲಾ ಕಾಲೇಜು ವಿಧ್ಯಾರ್ಥಿಗಳಿಗೆ ಸೂಕ್ತ ಬಸ್ ವ್ಯವಸ್ಥೆ ಮಾಡಲಾಗುವುದು. ಗ್ರಾಮೀಣ ಪ್ರದೇಶಕ್ಕೂ ಅಗತ್ಯ ಸಾರಿಗೆ ಸೌಲಭ್ಯ ಕಲ್ಪಿಸಲಾಗುವುದು ಎಂದರು.
ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕೊಠಡಿಗಳು, ಧ್ವಜ ಸ್ತಂಭ, ಅಂಗನವಾಡಿ ಕಟ್ಟಡಗಳ ಉದ್ಘಾಟನೆ ಮಾಡಿದ ಸಚಿವರು ನಂತರ ಸಭಾ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ವೇದಿಕೆಯಲ್ಲಿ ತುಮಕೂರಿನ ಸಿದ್ದಗಂಗಾ ಮಠದ ಶ್ರೀ ಶ್ರೀ ಸಿದ್ದಲಿಂಗ ಸ್ವಾಮೀಜಿ, ಶಾಸಕ ಶ್ರೀನಿವಾಸಮೂರ್ತಿ, ಮಾಜಿ ಶಾಸಕ ನಾಗರಾಜು, ಡಿಡಿಪಿಐ ಗಂಗಮಾರೇಗೌಡ ಸೇರಿದಂತೆ, ಇನ್ನಿತರ ಗಣ್ಯರು ಭಾಗಿಯಾಗಿದ್ದರು.