ಕಲಬುರಗಿ: ಜಿಲ್ಲೆಯಲ್ಲಿ ಇಸ್ರೇಲ್ ಮಾದರಿಯ ಕೃಷಿ ಬಳಕೆ ನಿಟ್ಟಿನಲ್ಲಿ ಇಸ್ರೇಲ್‍ನ ದಕ್ಷಿಣ ಭಾರತದ ಕಾನ್ಸುಲೇಟ್ ಜನರಲ್ ಜೊನಾಥನ್ ಜಡ್ಕಾ ಅವರನ್ನು ಸಂಪರ್ಕಿಸಿದ್ದು, ಶೀಘ್ರದಲ್ಲೇ ಅವರ ನೇತೃತ್ವದ ತಂಡ ಕಲಬುರಗಿಗೆ ಬಂದು ಅಧ್ಯಯನ ಮಾಡಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ ತಿಳಿಸಿದರು.
ಶನಿವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಮಳೆಯಿಂದಾಗಿರುವ ಹಾನಿ ಮತ್ತು ಕೈಗೊಂಡ ಪರಿಹಾರ ಕ್ರಮಗಳ ಕುರಿತು ಜಿಲ್ಲೆಯ ಜನಪ್ರತಿನಿಧಿಗಳು ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಲಬುರಗಿ ವಿಶನ್-2050 ಭಾಗವಾಗಿ ಜಿಲ್ಲೆಯ ಮಣ್ಣಿನ ಗುಣಮಟ್ಟ, ಇಲ್ಲಿನ ಹವಾಗುಣ ಮತ್ತು ನೀರಿನ ಲಭ್ಯತೆ ಕುರಿತು ಅಧ್ಯಯನ ಮಾಡಿ ಅಗತ್ಯ ಸಲಹೆ ನೀಡಲು ಕಾನ್ಸುಲೇಟ್ ಜನರಲ್ ಜೊನಾಥನ್ ಜಡ್ಕಾ ಅವರನ್ನು ಸಂಪರ್ಕಿಸಿದಾಗ ಅವರು ಹಿಂದುಳಿದ ಈ ಪ್ರದೇಶಕ್ಕೆ ತಾವೇ ಖುದ್ದಾಗಿ ಬರಲು ಉತ್ಸುಕರಾಗಿದ್ದಾರೆ. ಹೀಗಾಗಿ ಅವರ ಪ್ರವಾಸದ ಸಂದರ್ಭದಲ್ಲಿ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅವರೊಂದಿಗೆ ಇಡೀ ಜಿಲ್ಲೆ ಸಂಚರಿಸಿ ಅಧ್ಯಯನಕ್ಕೆ ಅಗತ್ಯ ಸಹಕಾರ ನೀಡಬೇಕು ಎಂದು ಅಧಿಕಾರಿಗಳಿಗೆ ಸಚಿವ ಮುರುಗೇಶ ನಿರಾಣಿ ನಿರ್ದೇಶಿಸಿದರು.
ಈ ಮೂಲಕ ಕಲದಯಾಣ ಕರ್ನಾಟಕದ ಕೇಂದ್ರ ಸ್ಥಾನ ಕಲಬುರಗಿಯಿಂದಲೇ ಕೃಷಿಯಲ್ಲಿ ಕ್ರಾಂತಿ ಮಾಡಲು ರಾಜ್ಯ ಸರ್ಕಾರ ಇದೀಗ ಮುಂದಾಗಿದೆ. ಇನ್ನು ಕಲಬುರಗಿ ಜಿಲ್ಲೆಯನ್ನು ತೊಗರಿ ಕಣಜ ಎಂದು ಕರೆಯಲ್ಪಡುತ್ತಿತ್ತು. ಇದರ ಹೆಚ್ಚಿನ ಉತ್ಪಾದನೆಗೂ ಸಹ ಇಸ್ರೇಲ್ ಕೃಷಿ ಪದ್ಧತಿ ಸಹಾಯವಾಗಲಿದೆ ಎಂದಿದ್ದಾರೆ.