ಶಿವಮೊಗ್ಗ: ಎಲ್ಲವನ್ನೂ ಹೈಕಮಾಂಡ್ ತೀರ್ಮಾನ ಮಾಡುತ್ತದೆ, ಶೀಘ್ರದಲ್ಲೇ ಈ ಎಲ್ಲ ಗೊಂದಲಗಳಿಗೆ ತೆರೆ ಬೀಳುತ್ತದೆ. ಅಲ್ಲಿಯವರೆಗೆ ಎಲ್ಲರೂ ಬಾಯಿ ಮುಚ್ಚಿಕೊಂಡಿರಿ ಎಂದು ನಾಯಕತ್ವ ಬದಲಾವಣೆ ಕುರಿತು ಮಾತನಾಡುವವರಿಗೆ ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ತಿರುಗೇಟು ನೀಡಿದ್ದಾರೆ.
ಈ ಕುರಿತು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಣಾಡಿದ ಅವರು, ನಾಯಕತ್ವ ಬದಲಾವಣೆ ಕುರಿತು ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಶೀಘ್ರದಲ್ಲೇ ಎಲ್ಲ ಗೊಂದಲಗಳಿಗೆ ತೆರೆ ಬೀಳಲಿದೆ. ಅಲ್ಲಿಯವರೆಗೆ ಬಾಯಿ ಮುಚ್ಚಿಕೊಂಡಿರಿ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಅವರು ರಾಜ್ಯಕ್ಕೆ ಆಗಮಿಸಿ ಎಲ್ಲರ ಅಭಿಪ್ರಾಯ ಪಡೆದು, ಕೇಂದ್ರಕ್ಕೆ ತಿಳಿಸಿದ ಮೇಲೂ ಈ ರೀತಿ ಮಾತನಾಡುವುದು ಸರಿಯಲ್ಲ. ಕೇಂದ್ರ ನಾಯಕರ ತೋರ್ಮಾನಕ್ಕೆ ನಾವು ಬದ್ಧರಾಗಿದ್ದೇವೆ, ಇದನ್ನು ಸ್ವತಃ ಯಡಿಯೂರಪ್ಪನವರೇ ಹೇಳಿದ್ದಾರೆ ಎಂದು ತಿಳಿಸಿದರು. ಇದನ್ನೂ ಓದಿ: ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಲಿ: ಸಿದ್ದಗಂಗಾ ಶ್ರೀ
ರಾಜ್ಯದಲ್ಲಿ ಏನು ಮಾಡಬೇಕು ಎಂಬ ಅಂಶದ ಬಗ್ಗೆ ರಾಷ್ಟ್ರೀಯ ನಾಯಕರು ಎಲ್ಲ ತೀರ್ಮಾನ ಕೈಗೊಳ್ಳುತ್ತಾರೆ. ಅರುಣ್ ಸಿಂಗ್ ಅವರು ಎಲ್ಲರ ಅಭಿಪ್ರಾಯ ಪಡೆದು ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ. ಹೀಗಿರುವಾಗ ತಲಾ ಒಬ್ಬೊಬ್ಬರು ಒಂದೊಂದು ಮಾತನಾಡುವುದು ಸೂಕ್ತವಲ್ಲ. ಪಕ್ಷಕ್ಕೂ ಒಳ್ಳೆಯದಲ್ಲ, ಸರ್ಕಾರಕ್ಕೂ ಒಳ್ಳೆಯದಲ್ಲ. ಎಲ್ಲರೂ ಬಾಯಿ ಮುಚ್ಚಿಕೊಂಡು ಇರೋದು ಒಳ್ಳೆಯದು. ನಮ್ಮದು ರಾಷ್ಟ್ರೀಯ ಪಕ್ಷ. ನಮ್ಮ ರಾಷ್ಟ್ರೀಯ ನಾಯಕರು ಏನು ತೀರ್ಮಾನ ಕೈಗೊಳ್ಳುತ್ತಾರೋ ಅದಕ್ಕೆ ಬದ್ಧ. ನಿನ್ನೆ ಕೆಲವು ಸ್ವಾಮಿಗಳು ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದರು. ಈ ವೇಳೆ ಯಡಿಯೂರಪ್ಪ ಅವರೇ ಕೇಂದ್ರದ ನಾಯಕರು ತೆಗೆದುಕೊಳ್ಳುವ ತೀರ್ಮಾನಕ್ಕೆ ನಾನು ಬದ್ಧ ಎಂದು ಹೇಳಿದ್ದಾರೆ. ಹೀಗಾಗಿ ಯಾರೂ ಮಾತನಾಡೋಕೆ ಹೋಗಬೇಡಿ. ಎಲ್ಲರೂ ಬಾಯಿ ಮುಚ್ಚಿಕೊಂಡು ಇರಿ. ರಾಜ್ಯದ ಹಿತದೃಷ್ಟಿಯಿಂದ ಒಳ್ಳೆಯದಾಗುತ್ತದೆ ಎಂದರು. ಇದನ್ನೂ ಓದಿ: ಎವರ್‌ಗ್ರೀನ್ ಅನ್ನೋದಕ್ಕೆ ಅನಂತ್‍ನಾಗ್ ಉತ್ತಮ ನಿದರ್ಶನ – ಪದ್ಮ ಪ್ರಶಸ್ತಿ ಅಭಿಯಾನಕ್ಕೆ ಯಶ್ ಬೆಂಬಲ
104 ಸ್ಥಾನವನ್ನು ರಾಜ್ಯದ ಜನ ನಮಗೆ ಕೊಟ್ಟರು. ಪೂರ್ಣ ಬಹುಮತ ಬಂದಿದ್ದರೆ ಈ ರೀತಿಯ ಗೊಂದಲ ಇರುತ್ತಿರಲಿಲ್ಲ. ಇವತ್ತು ಗೊಂದಲ ಮಾಡಿಕೊಳ್ಳುವುದು ಬಿಟ್ಟು, ಮುಂದಿನ ಚುನಾವಣೆಯಲ್ಲಿ ಸಂಘಟನೆಯ ಶಕ್ತಿ ಮೇಲೆ ಪಕ್ಷವನ್ನು ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರಬೇಕು. ಗೊಂದಲ ಪರಿಹಾರ ಆಗದಿದ್ದರೆ 104 ಇರೋದು 108 ಆಗಬಹುದು ಮತ್ತೆ ಈ ಸಮಸ್ಯೆ ಎದುರಾಗುತ್ತದೆ. ಬಿಜೆಪಿ ಅಧಿಕಾರಕ್ಕೆ ಬಂದ ದಿನದಂದ ಪೂರ್ಣ ಬಹುಮತ ಎಂದೂ ಬಂದಿಲ್ಲ. ಹೀಗಾಗಿ ಜೆಡಿಎಸ್ ಜೊತೆ ಕೈ ಜೋಡಿಸಿದ್ದೆವು, ಅವರು ನಮ್ಮನ್ನು ಬಳಸಿಕೊಂಡು ಅಧಿಕಾರ ಅನುಭವಿಸಿ ನಮಗೆ ಕೈಕೊಟ್ಟರು. ನಂತರ ಜನ 104 ಸ್ಥಾನ ಕೊಟ್ಟರು, ಕಾಂಗ್ರೆಸ್ ನಲ್ಲಿ ಅಶಿಸ್ತು ಇದ್ದ ಕಾರಣ ಒಂದಷ್ಟು ಜನ ನಮ್ಮ ಪಕ್ಷಕ್ಕೆ ಬಂದರು. ಅಭಿವೃದ್ಧಿ ದೃಷ್ಟಿಯಿಂದ ಕಾಂಗ್ರೆಸ್, ಜೆಡಿಎಸ್ ಶಾಸಕರು ಆ ಪಕ್ಷಕ್ಕೆ ಛೀಮಾರಿ ಹಾಕಿ ನಮ್ಮ ಪಕ್ಷಕ್ಕೆ ಬಂದರು. ಹೀಗಾಗಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಅಸಮಾಧಾನ ಇರುವ ವ್ಯಕ್ತಿಗಳು ಪಕ್ಷದ ಬಗ್ಗೆ ಗೌರವ ಇದ್ದರೆ, ಒಳ್ಳೆಯ ಸರ್ಕಾರ ಬರಬೇಕು ಎಂಬ ಆಸಕ್ತಿ ಇದ್ದರೆ ಗೊಂದಲ ಉಂಟು ಮಾಡಬೇಡಿ. ವಿಧಾನಸಭೆ ಚುನಾವಣೆ ಯಾವುದೇ ಸಂದರ್ಭದಲ್ಲಿ ಎದುರಾದರೂ ಸ್ವಂತ ಶಕ್ತಿ ಮೇಲೆ ಪಕ್ಷ ಅಧಿಕಾರಕ್ಕೆ ಬರಬೇಕಿದೆ ಎಂದು ಪಕ್ಷದ ನಾಯಕರಿಗೆ ಕಿವಿಮಾತು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದು ಎರಡು ವರ್ಷ ಆಗಿದೆ. ಎರಡು ವರ್ಷದ ಅಧಿಕಾರವಧಿಯ ಸಾಧನೆ ಬಗ್ಗೆ ಕಾರ್ಯಕರ್ತರಿಗೆ ಹಾಗೂ ಜನರಿಗೆ ತುಂಬಾ ಸಂತೋಷವಾಗಿದೆ. ಹಿಂದೆ ಯಾವಾಗಲೂ ಆಗದಿರುವಷ್ಟು ಅಭಿವೃದ್ಧಿ ಕೆಲಸಗಳು ಆಗಿವೆ. ಸ್ವಲ್ಪ ರಾಜಕೀಯ ಗೊಂದಲ ಇರುವ ಕಾರಣ ಅಭಿವೃದ್ಧಿ ಕಾರ್ಯಗಳು ಜನರಿಗೆ ಸ್ವಲ್ಪ ಮರೆತು ಹೋದ ರೀತಿ ಆಗುತ್ತದೆ. ಹೀಗಾಗಿ ಸೋಮವಾರ ಬೆಳಗ್ಗೆ 11ಗಂಟೆಗೆ ಬ್ಯಾಕ್ವೆಂಟ್ ಹಾಲ್ ನಲ್ಲಿ ಕಾರ್ಯಕ್ರಮ ಇದೆ. ಭಾನುವಾರ ಸಂಜೆ ಮುಖ್ಯಮಂತ್ರಿಗಳು ಶಾಸಕರಿಗೆ ಔತಣ ಕೂಟ ಏರ್ಪಡಿಸಿದ್ದಾರೆ ಎಂದರು.
ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಬರುತ್ತಾರೆ ಎಂಬ ಜಿ.ಪರಮೇಶ್ವರ್ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, ಜಿ.ಪರಮೇಶ್ವರ್ ಅವರು ಕಾಂಗ್ರೆಸ್ ನಲ್ಲಿ ಇರುತ್ತಾರಾ ಎಂಬುದು ನನ್ನ ಪ್ರಶ್ನೆ. ಬಿಜೆಪಿ ಶಾಸಕರು ಕಾಂಗ್ರೆಸ್ ಗೆ ಹೋಗಲ್ಲ, ಜಿ.ಪರಮೇಶ್ವರ್ ಅವರನ್ನು ಸೋಲಿಸಿದ್ದು ಸಿದ್ದರಾಮಯ್ಯ ಅವರು, ಸಿದ್ದರಾಮಯ್ಯ ಅವರನ್ನು ಸೋಲಿಸಿದ್ದು ಜಿ.ಪರಮೇಶ್ವರ್. ಹೀಗಿರುವಾಗ ಇಬ್ಬರೂ ಹೊಂದಾಣಿಕೆ ಮಾಡಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು.
ದೇಶದಲ್ಲಿ ಕಾಂಗ್ರೆಸ್ ಮುಳುಗಿ ಹೋಗುತ್ತಿರುವ ಹಡಗು. ಕಾಂಗ್ರೆಸ್ ಎಲ್ಲಿದೆ ಎಂದು ಹುಡಕಬೇಕು ಅಂತಹ ಪರಿಸ್ಥಿತಿ ಇದೆ. ಮುಳುಗಿ ಹೋಗುತ್ತಿರುವ ಹಡಗಿಗೆ ಯಾರಾದರೂ ಹತ್ತಿದರೆ ಆ ಶಾಸಕರು ಮುಳುಗಿ ಸತ್ತು ಹೋಗುತ್ತಾರೆ. ಯಾವ ಶಾಸಕರೂ ಕಾಂಗ್ರೆಸ್ ಸೇರುವಂತಹ ಪರಿಸ್ಥಿತಿ ಉದ್ಭವವಾಗುವುದಿಲ್ಲ. ಯಾರೂ ಬಿಜೆಪಿ ಬಿಟ್ಟು ಹೋಗುವುದಿಲ್ಲ. ಅಂತಹ ಆಸೆ ಇಟ್ಟುಕೊಳ್ಳಬೇಡಿ ಎಂದು ತಿರುಗೇಟು ನೀಡಿದರು.
ನಿನ್ನೆ ಕಾಂಗ್ರೆಸ್ ನಾಯಕರು ದೆಹಲಿಗೆ ಹೋಗಿದ್ದರು. ಎಲ್ಲರೂ ಏಕೆ ದೆಹಲಿಗೆ ಹೋಗಿದ್ದರು? ಡಿಕೆಶಿ ಒಂದು ಕಡೆ, ಸಿದ್ದರಾಮಯ್ಯ ಒಂದು ಕಡೆ, ಮುಖ್ಯಮಂತ್ರಿ ನಾನೇ ನಾನೇ ಎಂದು ನಿಮ್ಮ ಹಿಂಬಾಲಕರಿಂದ ಕೂಗಿಸಬೇಡಿ ಎಂದು ಛೀಮಾರಿ ಹಾಕಿಸಿಕೊಂಡು ಬಂದಿದ್ದಾರೆ. ಚುನಾವಣೆಗೆ ಇನ್ನೂ ಎರಡು ವರ್ಷ ಇದೆ. ಈಗಲೇ ಛೀಮಾರಿ ಹಾಕಿಸಿಕೊಂಡು ಬಂದಿದ್ದಾರೆ. ಕರ್ನಾಟಕದ ಲಿಂಗಾಯಿತರನ್ನು ಒಡೆಯುವಂತಹ ಪ್ರಯತ್ನ ಮಾಡಿದಿರಿ. ಗೋಹತ್ಯೆ ಮಾಡುವವರಿಗೆ ರಕ್ಷಣೆ ಕೊಟ್ರಿ, ಧರ್ಮಕ್ಕೆ ಅನ್ಯಾಯ ಮಾಡಿದಿರಿ ಅದಕ್ಕೇ ರಾಜ್ಯದ ಜನ ನಿಮ್ಮನ್ನು ಹೊರಗೆ ಹಾಕಿದರು. ಇಷ್ಟಾದರೂ ನಿಮಗೆ ಬುದ್ಧಿ ಬರದಿದ್ದರೆ ನಾವೇನು ಮಾಡೋದು ಎಂದರು.