– ವೈದ್ಯೆ, ಎಎಸ್‍ಐ ಸೇರಿ 9 ಜನರಿಗೆ ಕೊರೊನಾ
ಶಿವಮೊಗ್ಗ: ಮಲೆನಾಡು ಶಿವಮೊಗ್ಗ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಇದೀಗ ಬೆಂಗಳೂರಿನ ಪಾದರಾಯನಪುರ ಹಾಗೂ ಶಿವಾಜಿನಗರ ಸಹ ಮಲೆನಾಡಿಗೆ ಕಂಟಕವಾಗಿ ಕಾಡುತ್ತಿದೆ.
ಪಾದರಾಯನಪುರದಲ್ಲಿ ಗಲಭೆಯಾದಾಗ ಶಿವಮೊಗ್ಗದಿಂದ 22 ಮಂದಿ ಕೆಎಸ್‌ಆರ್‌ಪಿ ಪೊಲೀಸರು ಕರ್ತವ್ಯಕ್ಕೆ ತೆರಳಿದ್ದರು. ಇವರೆಲ್ಲರೂ 4 ದಿನಗಳ ಹಿಂದೆ ಜಿಲ್ಲೆಗೆ ವಾಪಸ್ ಬಂದಿದ್ದರು. ವಾಪಸ್ಸಾದ ಕೆಎಸ್‌ಆರ್‌ಪಿ ಪೊಲೀಸರನ್ನು ಜಿಲ್ಲಾಡಳಿತ ಮುಂಜಾಗ್ರತಾ ಕ್ರಮವಾಗಿ ಕೋವಿಡ್ ತಪಾಸಣೆ ನಡೆಸಿ ಕ್ವಾರಂಟೈನ್‍ಗೆ ಒಳಪಡಿಸಿತ್ತು. ಇದೀಗ ಅವರಲ್ಲಿ 7 ಮಂದಿ ಕೆಎಸ್‌ಆರ್‌ಪಿ ಪೊಲೀಸರಲ್ಲಿ ಸೋಂಕು ದೃಢವಾಗಿದೆ. ಸೋಂಕಿತರನ್ನು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಒಳಪಡಿಸಲಾಗಿದೆ. ಇನ್ನೂ 2 ದಿನದ ಹಿಂದೆ 3 ಮಂದಿಗೆ ಪಾಸಿಟಿವ್ ದೃಢಪಟ್ಟಿದೆ. ಜೊತೆಗೆ 12 ಮಂದಿಯ ವರದಿ ಬರಬೇಕಿದೆ. ಇದುವರೆಗೂ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 51ಕ್ಕೇರಿದೆ.
Advertisement
Advertisement
ಕೆಎಸ್‌ಆರ್‌ಪಿ ಪೊಲೀಸರ ಜೊತೆಗೆ ಡಿಎಆರ್‌ನ ಓರ್ವ ಎಎಸ್‍ಐಗೂ ಪಾಸಿಟಿವ್ ಪತ್ತೆಯಾಗಿದೆ. ಕೊರೊನಾ ಪತ್ತೆಯಾಗಿರುವ ಎಎಸ್‍ಐಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲದಿದ್ದರೂ ಜಿಲ್ಲೆಯ ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಹಲವು ದಿನಗಳಿಂದ ಕರ್ತವ್ಯ ನಿರ್ವಹಿಸಿದ್ದರು. ಕರ್ತವ್ಯದ ವೇಳೆ ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವ ವಾಹನಗಳ ತಪಾಸಣೆ ನಡೆಸಿದ್ದರು. ಹೀಗಾಗಿ ಡಿಎಆರ್ ಎಎಸ್‍ಐಗೆ ಸೋಂಕು ತಗಲಿರುವ ಶಂಕೆ ವ್ಯಕ್ತವಾಗಿದೆ.
Advertisement
ಡಿಎಆರ್ ಎಎಸ್‍ಐಗೆ ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಶಿವಮೊಗ್ಗ ನಗರದ ಜಯನಗರ ಠಾಣೆಯನ್ನು ಸ್ಯಾನಿಟೈಸರ್ ಮಾಡಿ ಸೀಲ್‍ಡೌನ್ ಮಾಡಲಾಗಿದೆ. ಡಿಎಆರ್ ಎಎಸ್‍ಐ ಪುತ್ರಿ ಸಹ ಇದೇ ಠಾಣೆಯಲ್ಲಿ ಪೊಲೀಸ್ ಕಾನ್ಸ್ ಟೇಬಲ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ತಂದೆಯ ಜೊತೆ ಪ್ರಾಥಮಿಕ ಸಂಪರ್ಕ ಹೊಂದಿರಬಹುದು ಎಂದು ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಪುತ್ರಿಯನ್ನು ಕ್ವಾರಂಟೈನ್‍ಗೆ ಒಳಪಡಿಸಲಾಗಿದೆ.
Advertisement
ಆಯನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯೆಯೊಬ್ಬರಿಗೂ ಪಾಸಿಟಿವ್ ಪತ್ತೆಯಾಗಿದೆ. ಈ ಹಿಂದೆ ಶಿವಮೊಗ್ಗದ ಬಾಳೆಕೊಪ್ಪದ 63 ವರ್ಷದ ರೋಗಿ ನಂಬರ್ 1305ರ ವ್ಯಕ್ತಿಗೆ ಕೊರೊನಾ ಪತ್ತೆಯಾಗಿತ್ತು. ಕೊರೊನಾ ಪತ್ತೆಯಾಗುವ ಎರಡು ದಿನದ ಹಿಂದೆ ಈ ವ್ಯಕ್ತಿ ಆಯನೂರಿನ ಆಸ್ಪತ್ರೆಯಲ್ಲಿ ಚಳಿ ಜ್ವರ ಎಂದು ಚಿಕಿತ್ಸೆಗೆ ತೆರಳಿದ್ದರು. ಈ ವ್ಯಕ್ತಿಗೆ ವೈದ್ಯೆ ಚಿಕಿತ್ಸೆ ನೀಡಿದ್ದರು. ಇದೀಗ ಚಿಕಿತ್ಸೆ ನೀಡಿದ್ದ ವೈದ್ಯೆಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಇವರನ್ನು ಸಹ ಕೋವಿಡ್ 19 ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.