ಪಾಪಾ ಪಾಂಡು, ಪಾಂಡುರಂಗ ವಿಠಲ ಸೀರಿಯಲ್ ಮೂಲಕ ಕಿರುತೆರೆಯಲ್ಲಿ ಅತ್ಯಲ್ಪ ಕಾಲದಲ್ಲೇ ಮಿಂಚಿ ತೆರೆಮರೆಗೆ ಸರಿದ ಹಾಸ್ಯನಟ ಜಹಂಗೀರ್ ಈಗೇನು ಮಾಡುತ್ತಿದ್ದಾರೆ. ಅವರ ಜರ್ನಿ ಹೇಗಿತ್ತು ಎನ್ನುವುದರ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದಾರೆ. ಬನ್ನಿ ಅವರ ಮಾತುಗಳಲ್ಲೇ ಅವರ ಬಗ್ಗೆ ತಿಳಿದುಕೊಳ್ಳೋಣ.
• ನಿಮ್ಮ ಹಿನ್ನೆಲೆ ಬಗ್ಗೆ ಹೇಳಿ?
ನಾನು ಮೂಲತಃ ಹೊಸಪೇಟೆಯ ಒಂದು ಪುಟ್ಟ ಹಳ್ಳಿಯವನು. ನನ್ನ ತಂದೆ ವೃತ್ತಿಯಲ್ಲಿ ಶಿಕ್ಷಕರು. ನಾವು ನಾಲ್ಕು ಜನ ಮಕ್ಕಳು. ತಂದೆ ಶಿಕ್ಷಕರಾಗಿದ್ದರಿಂದ ವಿದ್ಯಾಭ್ಯಾಸದಲ್ಲಿ ನಾವು ಚುರುಕಾಗಿದ್ದೇವು. ನನ್ನ ಅಣ್ಣ ಅಕ್ಕ ಇಬ್ಬರೂ ಓದಿ ಶಿಕ್ಷಕ ವೃತ್ತಿ ಸೇರಿಕೊಂಡರು. ಆದ್ರೆ ನನಗೆ ಶಿಕ್ಷಕ ವೃತ್ತಿ ಇಷ್ಟವಿರಲಿಲ್ಲ. ನಾನೂ ಚೆನ್ನಾಗಿ ಓದಿದರೆ ನನ್ನನ್ನು ಶಿಕ್ಷಕನಾಗಿ ಮಾಡುತ್ತಾರೆ ಎಂದು ಹೆದರಿ ಪಿಯುಸಿಯಲ್ಲಿ ಬೇಕಂತಲೇ ಫೇಲಾದೆ. ಬೇರೇನಾದರೂ ಮಾಡಬೇಕು ಎಂದು ಆಲೋಚಿಸುವ ಹೊತ್ತಲ್ಲಿ ನಾಟಕಗಳಲ್ಲಿ ಅಭಿನಯಿಸಬೇಕು ಎಂದು ಮನಸ್ಸಾಯಿತು. ಪಿಯುಸಿಗೆ ವಿದ್ಯಾಭ್ಯಾಸ ಮೊಟಕುಗೊಳಿಸಿ ಅತ್ತ ಗಮನ ಹರಿಸಿದೆ.
Advertisement
Advertisement
• ನೀನಾಸಂ ಹೆಗ್ಗೋಡು ನಿಮಗೆ ಸ್ಫೂರ್ತಿಯಾದದ್ದು ಹೇಗೆ?
ಅದು 1995-96 ಸಮಯ. ಒಂದು ವರ್ಷದ ನಟನೆಯ ಡಿಪ್ಲೋಮ ತರಗತಿ ಸೇರಲು ನೀನಾಸಂ ಹೋದವನು ನಾನು. ಆದರೆ ಒಂದು ದಶಕದಲ್ಲೇ ಉಳಿದು ಬಿಡುತ್ತೇನೆಂದು ಎಂದಿಗೂ ಅಂದುಕೊಂಡಿರಲಿಲ್ಲ. ಒಂದು ವರ್ಷದ ನಟನೆಯ ಕೋರ್ಸ್ ಮುಗಿದ ಬಳಿಕ ಅಲ್ಲಿಯೇ ರೆಪೆಟ್ರಿಯಲ್ಲಿ ನಾಟಕಕಾರನಾಗಿ ಸೇರಿಕೊಂಡೆ. ಅಷ್ಟರ ಮಟ್ಟಿಗೆ ಅಲ್ಲಿನ ವಾತಾವರಣ ನನ್ನ ಮೇಲೆ ಪ್ರಭಾವ ಬೀರಿತ್ತು. ಸುಬ್ಬಣ್ಣ ಅವರ ಆಲೋಚನೆಗಳು, ಒಡನಾಟ, ಅವರ ವ್ಯಕ್ತಿತ್ವ ತುಂಬಾ ಆಕರ್ಷಿಸಿತು. ನಟನೆಯಲ್ಲಿ ನನಗೆ ಮದ ಮುದ ನೀಡಿದ್ದು ನೀನಾಸಂ ಎಂದು ನಾನು ಯಾವಾಗಲೂ ಹೇಳಿಕೊಳ್ಳುತ್ತೇನೆ, ಅಷ್ಟು ಥ್ರಿಲ್ ಕೊಟ್ಟಿದೆ ಅಲ್ಲಿನ ದಿನಗಳು. ಒಬ್ಬ ರಂಗಭೂಮಿ ಕಲಾವಿದನಾಗಿ ತೆರೆದುಕೊಳ್ಳಲು ನೀನಾಸಂ ಅಷ್ಟು ಕೊಡುಗೆ ನೀಡಿದೆ ನನಗೆ. ಇದನ್ನೂ ಓದಿ: ಅಣ್ಣಾವ್ರ ಕೈ ಸ್ಪರ್ಶಿಸಿದ್ದೇ ನನ್ನ ಭಾಗ್ಯ: ನಟ ಗಣೇಶ್ ರಾವ್ ಕೇಸರ್ಕರ್
Advertisement
• ನಿಮ್ಮ ಜೀವನದಲ್ಲಿ ಡಾ.ಅಂಬಣ್ಣ ಅವರ ಪಾತ್ರ ಬಹಳ ದೊಡ್ಡದು ಅವರ ಬಗ್ಗೆ ಹೇಳಿ.
ನಾಟಕದಲ್ಲಿ ಆಸಕ್ತಿ ಮನದಲ್ಲಿ ಮೊಳಕೆಯೊಡೆದ ಮೇಲೆ ಮುಂದೇನು ಎತ್ತ ಎಂದು ಯೋಚಿಸುತ್ತಿದ್ದೆ. ಆಗ ನೆನಪಿಗೆ ಬಂದವರೇ ನಮ್ಮ ಊರಿನ ವೈದ್ಯರಾದ ಡಾ.ಅಂಬಣ್ಣ. ಅವರಿಗೆ ರಂಗಭೂಮಿ, ನಟನೆ ಇದರಲ್ಲೆಲ್ಲಾ ಆಸಕ್ತಿ ಇತ್ತು ಎನ್ನುವುದು ನನಗೆ ತಿಳಿದಿತ್ತು. ನಾನು ಸೀದಾ ಅವರ ಬಳಿ ಹೋದೆ. ನಾಟಕಗಳಲ್ಲಿ ಪಾತ್ರ ಮಾಡಲು ಆಸಕ್ತಿ ಇದೆ. ಆದ್ರೆ ಮನೆಯಲ್ಲಿ ಇದಕ್ಕೆ ಒಪ್ಪಿಗೆಯಿಲ್ಲ ಎಂದು ನನ್ನ ಸಮಸ್ಯೆ ಹೇಳಿಕೊಂಡೆ. ಅವರು ನೀನಾಸಂ ಕಡೆ ದಾರಿ ತೋರಿಸಿದ್ರು. ಸ್ವಲ್ಪ ದಿನದ ಮಟ್ಟಿಗೆ ಮನೆ ಬಿಟ್ಟು ಹೋಗು ಎಂದೂ ಹೇಳಿದ್ರು. ನನ್ನ ಬಳಿ ದುಡ್ಡು ಇರಲಿಲ್ಲ. ಮನೆಯಲ್ಲೂ ವಿರೋಧ ಇದ್ದಿದ್ದರಿಂದ ಹಣ ಸಿಗುತ್ತೆ ಎಂಬ ಗ್ಯಾರಂಟಿ ಇರಲಿಲ್ಲ. ಆಗ ಅವರೇ ಹಣ ಕೊಟ್ಟು ನೀನಾಸಂಗೆ ನಟನೆಯಲ್ಲಿ ಡಿಪ್ಲೋಮ ಮಾಡಲು ಕಳಿಸಿದ್ರು. ಸುಮಾರು ಎರಡು ವರ್ಷ ಮನೆ ಬಿಟ್ಟು ದೂರ ಇದ್ದಿದ್ದರಿಂದ ಹಣಕಾಸಿನ ಸಹಾಯವನ್ನು ಮಾಡಿದ್ರು. ನಾನು ಕಲಾವಿದನಾಗಲು ರೆಕ್ಕೆ ಪುಕ್ಕ ಕಟ್ಟಿ ಹಾರಲು ಬಿಟ್ಟವರು ಡಾ. ಅಂಬಣ್ಣ ಎಂದು ಹೇಳಿದ್ರೆ ತಪ್ಪಾಗೋದಿಲ್ಲ.
Advertisement
• ಅಮೇರಿಕಾದ ಬ್ರೆಡ್ ಅಂಡ್ ಪೊಪೆಟ್ ರಂಗಭೂಮಿಯಲ್ಲೂ ನೀವು ಗುರುತಿಸಿಕೊಂಡ್ರಿ. ಹೇಗೆ ಸಾಧ್ಯಸಾದ್ಯವಾಯಿತು ಇದು?
ನೀನಾಸಂನಲ್ಲಿದ್ದಾಗ ಅಮೆರಿಕಾದ ವರ್ಮೌಂಟ್‍ನ ಖ್ಯಾತ ರಂಗಕರ್ಮಿ ಹಾಗೂ ಬ್ರೆಡ್ ಅಂಡ್ ಪೊಪೆಟ್ ರಂಗಭೂಮಿ ಸಂಸ್ಥಾಪಕ ಪೀಟರ್ ಶ್ಯೂಮನ್ ನೀನಾಸಂಗೆ ಭೇಟಿ ನೀಡಿದ್ರು. ಅವರ ಯೋಚನೆ ಆಲೋಚನೆ, ರಂಗಭೂಮಿ ಶೈಲಿ ಬಹಳ ಭಿನ್ನ. ನೀನಾಸಂಗೆ ಅವರು ಭೇಟಿ ನೀಡಿದಾಗ ಅವರ ಪ್ರಭಾವಕ್ಕೆ ಒಳಗಾಗಿ ಅವರಿಗೆ ಆತ್ಮೀಯನಾದೆ ಅವರು ನನ್ನನ್ನು ಅಮೆರಿಕಾಕ್ಕೆ ಕರೆದುಕೊಂಡು ಹೋದ್ರು. ಅಲ್ಲಿ ಸುಮಾರು ಎರಡು ತಿಂಗಳ ಕಾಲ ಬ್ರೆಡ್ ಅಂಡ್ ಪೊಪೆಟ್‍ನಲ್ಲಿ ಕೆಲಸ ಮಾಡಿದೆ. ಈ ಹಂತದಲ್ಲೇ ರಂಗಭೂಮಿ ಕಡೆಗಿನ ನನ್ನ ನೋಟ, ಪರಿಕಲ್ಪನೆ ಬದಲಾಯಿತು. ನನ್ನ ವೈಯಕ್ತಿಕ ಬೆಳವಣಿಗೆಗೂ ಇದು ಸಹಕಾರಿಯಾಯ್ತು. ಇದನ್ನೂ ಓದಿ: ಪರಿಶ್ರಮ ಪ್ರಯತ್ನದ ಜೊತೆ ತಾಳ್ಮೆ ಇರಲಿ: ನಟಿ ದೀಪಾ ಭಾಸ್ಕರ್
• ಮನೆಯವರ ವಿರೋಧದ ನಡುವೆಯೂ ಕಲಾವಿದನಾಗಿ ಬೆಳೆದಿದ್ದು ಹೇಗೆ?
ನಾನು ನಾಟಕ ರಂಗಭೂಮಿಯಲ್ಲಿ ತೊಡಗಿಸಿಕೊಂಡಾಗಲೇ ಮನೆಯಲ್ಲಿ ನನಗೆ ವಿರೋಧ ವ್ಯಕ್ತಪಡಿಸಿದ್ರು. ನಟನೆ ಕಡೆ ನಿನ್ನ ಗಮನವಿದ್ರೆ ಮನೆಬಿಟ್ಟು ಹೋಗು ಎಂದು ತಂದೆ ಖಡಾಖಂಡಿತವಾಗಿ ಹೇಳಿದ್ರು. ನನಗೆ ಶಿಕ್ಷಕನಾಗಲು ಇಷ್ಟವಿಲ್ಲದಿದ್ದರಿಂದ ನಾನು ಮನೆಬಿಟ್ಟು ಹೋಗಲು ನಿರ್ಧರಿಸಿದೆ. ಎರಡು ವರ್ಷಗಳ ಕಾಲ ಮನೆಯಿಂದ ದೂರವಿದ್ದೆ. ಯಾವಾಗ ಪಾಪಾ ಪಾಂಡು ಮೂಲಕ ಕಿರುತೆರೆಯಲ್ಲಿ ಅವಕಾಶ ಸಿಕ್ಕಿತೋ ಆಗ ನನ್ನ ಮನೆಯವರು ನನ್ನ ಬಗ್ಗೆ ಖುಷಿ ಪಟ್ರು. ಮಗ ದಾರಿ ತಪ್ಪಿಲ್ಲ ಏನೋ ಸಾಧಿಸಿದ್ದಾನೆ ಎಂದು ಹೆಮ್ಮೆ ಪಟ್ರು.
• ಕಿರಿತೆರೆಯಲ್ಲಿ ಅವಕಾಶ ಸಿಕ್ಕಿದ್ದು ಹೇಗೆ?
ನಟನೆಯನ್ನು ಪ್ರೊಫೆಶನ್ ಆಗಿ ತಗೋತೀನಿ ಎಂದು ಯಾವತ್ತೂ ಆಲೋಚನೆ ಮಾಡಿರಲಿಲ್ಲ. ರಂಗಭೂಮಿಯಲ್ಲೇ ಮುಂದುವರಿಯಬೇಕು ಊರೂರು ಅಲೆಯಬೇಕೆಂದು ಅಲ್ಲಿಯೇ ಬದುಕು ಸಾಗಿಸುತ್ತಿದ್ದೆ. ಈ ಸಂದರ್ಭದಲ್ಲಿ ಸಿಹಿಕಹಿ ಚಂದ್ರು ಅವರಿಗೆ ನನ್ನ ಬಗ್ಗೆ ತಿಳಿದು ನನ್ನನು ಸಂಪರ್ಕಿಸಿ ಪಾಪಾ ಪಾಂಡು ಕಾಮಿಡಿ ಸೀರಿಯಲ್ ಬಗ್ಗೆ ತಿಳಿಸಿದ್ರು. ಅಷ್ಟೊತ್ತಿಗಾಗಲೇ ಪಾಪಾ ಪಾಂಡು 500 ಎಪಿಸೋಡ್ ಪೂರ್ಣಗೊಳಿಸಿತ್ತು. ಮುಂದುವರಿದ ಭಾಗದಲ್ಲಿ ಪಾಂಡುವಿನ ಪಾತ್ರದಲ್ಲಿ ನಟಿಸಲು ಅವಕಾಶ ಸಿಕ್ಕಿತು. ಅವರ ತಂಡದಲ್ಲಿ ನಟನೆಗೆ ಮುಕ್ತ ಅವಕಾಶವಿತ್ತು. ಇದು ನನಗೆ ಬಹಳ ಇಷ್ಟವಾಯ್ತು ಮುಂದೆ ಅವರ ತಂಡದಲ್ಲೇ ಹಲವು ವರ್ಷಗಳ ಕಾಲ ಗುರುತಿಸಿಕೊಂಡೆ. ಪಾಪಾ ಪಾಂಡು, ಪಾಂಡುರಂಗ ವಿಠಲ, ಪಾತು ಸಾತು ಹೀಗೆ ಬ್ಯಾಕ್ ಟು ಬ್ಯಾಕ್ ಕಾಮಿಡಿ ಸೀರಿಯಲ್‍ನಲ್ಲಿ ನಟಿಸಿದೆ. ಇದನ್ನೂ ಓದಿ: ನನ್ನ ಕಡೆ ಎಸೆದ ಕಲ್ಲುಗಳನ್ನು ಮೆಟ್ಟಿಲು ಮಾಡಿಕೊಂಡು ಬೆಳೆದೆ- ಪಾಪಾ ಪಾಂಡು ಖ್ಯಾತಿಯ ಚಿದಾನಂದ್
• ಇದ್ದಕಿದ್ದಂತೆ ಕಿರುತೆರೆಯಿಂದ ಮಾಯವಾಗಿ ಬಿಟ್ರಲ್ಲ ನೀವು?
ಮುರ್ನಾಲ್ಕು ಧಾರಾವಾಹಿಗಳಲ್ಲಿ ನಟಿಸಿದ ನಂತರ ನನಗೆ ಎಕಾತನತೆ ಕಾಡ ತೊಡಗಿತು. ಯಾಕೋ ಇದೆಲ್ಲ ಸಾಕು ಎಂದೆನಿಸಿ ಊರ ಕಡೆ ಬಂದು ಬಿಟ್ಟೆ. ವೈವಾಹಿಕ ಜೀವನಕ್ಕೂ ಕಾಲಿಟ್ಟೆ. ವ್ಯವಸಾಯದಲ್ಲಿ ತೊಡಗಿಕೊಳ್ಳಬೇಕು ಎಂದು ನಿರ್ಧರಿಸಿದೆ. ಆದರೆ ಆ ಕನಸು ಈಗಲೂ ನನಸಾಗಿಲ್ಲ. ನಟನೆಯಿಂದ ದೂರ ಉಳಿದು ಆರೇಳು ವರ್ಷಗಳೇ ಆಯಿತು. ಹಾಗಂತ ಸಂಪೂರ್ಣವಾಗಿಯೂ ದೂರವಾಗಿಲ್ಲ. ಆಗೊಂದು ಈಗೊಂದು ಪಾತ್ರ ಮಾಡುತ್ತೇನೆ. ಇಷ್ಟು ವರ್ಷದಲ್ಲಿ ಕಳೆದ ವರ್ಷ ಬಿಡುಗಡೆಯಾದ ಯಜಮಾನ ಹಾಗೂ ಮಂಗಳವಾರ ರಜಾ ದಿನ ಸಿನಿಮಾದಲ್ಲಿ ನಟಿಸಿದ್ದೇನೆ.
• ಈಗೇನು ಮಾಡುತ್ತಿದ್ದೀರಾ, ಭವಿಷ್ಯದ ಆಲೋಚನೆಗಳೇನು?
ಪ್ರಸ್ತುತ ಹುಬ್ಬಳ್ಳಿಯಲ್ಲಿ ನೆಲೆಸಿದ್ದೇನೆ. ಹುಬ್ಬಳ್ಳಿಯ ಹಳ್ಳಿಯೊಂದರಲ್ಲಿ ನನ್ನ ಪತ್ನಿ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ನಾನು ಮಕ್ಕಳನ್ನು ನೋಡಿಕೊಂಡು ಮನೆಯಲ್ಲಿದ್ದೇನೆ. ಮುಂದೇನು ಮಾಡಬೇಕು ಎನ್ನುವುದರ ಬಗ್ಗೆ ಯಾವುದೇ ಆಲೋಚನೆ ಇಲ್ಲ. ನಾನು ಕಿರುತೆರೆ ಹಿರಿತೆರೆಯನ್ನು ತುಂಬಾ ಹತ್ತಿರದಿಂದ ಬಲ್ಲೆ. ನಟನೆ ನಂಬಿಕೊಂಡು ಭವಿಷ್ಯದ ಯೋಜನೆ ಹಾಕಿಕೊಳ್ಳಲು ಸಾಧ್ಯವಿಲ್ಲ. ಅಂದುಕೊಂಡಿದ್ದನ್ನು ಸಾಧಿಸೋದು ಸುಲಭದ ಮಾತಲ್ಲ. ಜೀವನ ಹೇಗೆ ದಾರಿ ತೋರಿಸುತ್ತೋ ಹಾಗೆ ಹೋಗುತ್ತಿದ್ದೇನೆ. ಇದನ್ನೂ ಓದಿ: ಹಂಡ್ರೆಡ್ ಪರ್ಸೆಂಟ್ ಹ್ಯಾಪಿ ನಾನು- ಖ್ಯಾತ ಕಿರುತೆರೆ ನಟ, ನಿರ್ದೇಶಕ ರವಿಕಿರಣ್