Connect with us

Cinema

ನನ್ನ ಕಡೆ ಎಸೆದ ಕಲ್ಲುಗಳನ್ನು ಮೆಟ್ಟಿಲು ಮಾಡಿಕೊಂಡು ಬೆಳೆದೆ- ಪಾಪಾ ಪಾಂಡು ಖ್ಯಾತಿಯ ಚಿದಾನಂದ್

Published

on

ಪಾಪಾ ಪಾಂಡು ಸೂಪರ್ ಹಿಟ್ ಧಾರಾವಾಹಿ ಮೂಲಕ ಕಿರುತೆರೆ ಪ್ರೇಕ್ಷಕರ ಮನಗೆದ್ದ ನಟ ಚಿದಾನಂದ್. ಹಿರಿತೆರೆ ಕಿರುತೆರೆಯಲ್ಲಿ ಸಕ್ರಿಯರಾಗಿ ಮನರಂಜನೆ ನೀಡುತ್ತಿರುವ ಚಿದಾನಂದ್ ತಮ್ಮ 30 ವರ್ಷದ ಕಲಾ ಜೀವನದ ಬಗ್ಗೆ ನಮ್ಮೊಂದಿಗೆ ಮಾತನಾಡಿದ್ದಾರೆ.

• ಕಲೆಯನ್ನೇ ಆಯ್ಕೆ ಮಾಡಿಕೊಂಡಿದ್ದು ಯಾಕೆ?
ನಾನು ಮೂಲತಃ ದಾವಣಗೆರೆಯವನು. ಎಸ್‍ಎಸ್‍ಎಲ್‍ಸಿ ನಂತರ ಕಾಲೇಜು ವಿದ್ಯಾಭ್ಯಾಸಕ್ಕೆ ಬೆಂಗಳೂರಿಗೆ ಬಂದೆ. ಆದರೆ ಇದೆಲ್ಲದ್ರ ಮಧ್ಯೆ ಏನಾದರೂ ಮಾಡಬೇಕು ಏನಾದರೂ ಸಾಧಿಸಬೇಕು ಎಂದು ಮನಸು ತುಡಿಯುತ್ತಿತ್ತು. ಪತ್ರಿಕೆಗಳಲ್ಲಿ ಸಿನಿಮಾ ಸುದ್ದಿ ನೋಡುತ್ತಿದ್ದಾಗ ನಾನು ಕಲಾವಿದನಾಗಬೇಕು ನಾಟಕಗಳಲ್ಲಿ ನಟಿಸಬೇಕು ಎಂದು ಅನ್ನಿಸುತ್ತಿತ್ತು. ಹೇಗೂ ಬೆಂಗಳೂರಿಗೆ ಬಂದಿದ್ದೀನಿ ನಟನೆಯನ್ನು ಕಲಿಯೋಣ ಎಂದು ನಿರ್ಧಾರ ಮಾಡಿದೆ. ಅಲ್ಲಿವರೆಗೂ ನಟನೆ ಬಗ್ಗೆ ಗಂಧ ಗಾಳಿಯೂ ತಿಳಿದಿರಲಿಲ್ಲ. ಅಲ್ಲಿಂದ ಓದಿಗೆ ಫುಲ್ ಸ್ಟಾಪ್ ಇಟ್ಟು ನಟನೆ ಕಡೆ ವಾಲಿದೆ.

• ಬೆಂಗಳೂರಿನ ಆರಂಭಿಕ ದಿನಗಳ ಬಗ್ಗೆ ಹೇಳಿ?
ಕಲಾವಿದನಾಗಬೇಕು ಎಂದು ತೀರ್ಮಾನಿಸಿದ ಮೇಲೆ ನಟನಾ ತರಗತಿ ಹುಡುಕಿಕೊಂಡು ಬೆಂಗಳೂರಿನಲ್ಲಿ ಅಲೆದಾಟ ಶುರು ಮಾಡಿದೆ. ಆದ್ರೆ ನನ್ನಿಂದ ಹೆಚ್ಚಿನ ಫೀಸ್ ಕಟ್ಟುವ ಶಕ್ತಿ ಇರಲಿಲ್ಲ. ಮೊದಲು ಉದಯ ಕುಮಾರ್ ಅವರ ಕಲಾನಿಕೇತನಕ್ಕೆ ಹೋದೆ ಅಲ್ಲಿನ ಫೀಸ್ ಕಟ್ಟುವ ಸಾಮರ್ಥ್ಯ ನನಗಿರಲಿಲ್ಲ ವಾಪಾಸ್ಸು ಬಂದೆ. ಒಮ್ಮೆ ಕನ್ನಡ ಪ್ರಭ ಪತ್ರಿಕೆಯಲ್ಲಿ ಅಭಿನಯ ತರಂಗದ ಬಗ್ಗೆ ಜಾಹೀರಾತೊಂದನ್ನ ನೋಡಿ ಅಲ್ಲಿ ವಿಚಾರಿಸಿದೆ. ನನ್ನಲ್ಲಿದ್ದ ಹಣಕ್ಕೆ ಫೀಸ್ ಹೊಂದಾಣಿಕೆಯಾಗುತ್ತಿತ್ತು, ಅಲ್ಲಿಯೇ ಸೇರಿಕೊಳ್ಳಲು ನಿರ್ಧರಿಸಿದೆ. ಅಭಿನಯ ತರಂಗದಲ್ಲಿ 1989-1990ರ ಬ್ಯಾಚ್ ನನ್ನದು.

• ನೀವು ನಿಮ್ಮ ಸ್ನೇಹಿತರೊಬ್ಬರು ಸೇರಿ ಕಟ್ಟಿದ ಮೂಕಿ ಟಾಕಿ ಸಂಸ್ಥೆ ಬಗ್ಗೆ ಹೇಳಿ.
ಅಭಿನಯ ತರಂಗದಲ್ಲಿ ನಟನೆಯ ಕೋರ್ಸ್ ಮುಗಿದ ನಂತರ ಮುಂದೇನು ಎಂದು ತೋಚಲಿಲ್ಲ. ಆಗ ನಾನು ನನ್ನ ಸ್ನೇಹಿತರೊಬ್ಬರು ಸೇರಿ ಮೂಕಿ ಟಾಕಿ ಎಂಬ ನಾಟಕ ಕಂಪನಿ ಕಟ್ಟಿದ್ವಿ. ಮೂಕಿ ಟಾಕಿ ಮೂಲಕ ಬೀದಿ ನಾಟಕ ಮಾಡಲು ನಿರ್ಧರಿಸಿ ಪ್ರಸ್ತುತ ಸನ್ನೀವೇಶಗಳನ್ನಿಟ್ಟುಕೊಂಡು ಕಥೆ ಬರೆದು ನಿರ್ದೇಶನ ಮಾಡಿ ಬೀದಿ ನಾಟಕ ಮಾಡಲು ಆರಂಭಿಸಿದೆವು. 1992ರಲ್ಲೇ ಕರ್ನಾಟಕದ ಕೆಲ ಭಾಗಗಳಲ್ಲಿ 100ಕ್ಕೂ ಹೆಚ್ಚು ಬೀದಿ ನಾಟಕ ಪ್ರದರ್ಶನಗಳನ್ನು ನಾವಿಬ್ಬರೇ ಮಾಡಿದ್ವಿ.

• ಮೂಕಿ ಟಾಕಿ ರಾಷ್ಟ್ರ ಮಟ್ಟದಲ್ಲಿ ತಂದು ಕೊಟ್ಟ ಖ್ಯಾತಿ ಬಗ್ಗೆ ಹೇಗೆ?
ಕ್ಷೇಮ ಸಮಾಚಾರ ಎಂಬ ಪತ್ರಿಕೆಯಲ್ಲಿ ನಮ್ಮ ಬೀದಿ ನಾಟಕದ ಬಗ್ಗೆ ಒಂದು ಚಿಕ್ಕ ಆರ್ಟಿಕಲ್ ಬಂದಿತ್ತು. ಆ ರ್ಟಿಕಲ್ ನಮ್ಮ ಆರಂಭದ ಕಲೆಯ ಬದುಕಿಕೆ ತುಂಬಾ ಸಹಕಾರಿಯಾಯ್ತು. ಇಬ್ಬರೇ ನೂರಕ್ಕೂ ಅಧಿಕ ಶೋಗಳನ್ನು ನೀಡಿದ್ದಾರೆ ಎಂದು ಲೇಖನ ಪ್ರಕಟವಾದ ನಂತರ ಏಶಿಯನ್ ಏಜ್ ಎಂಬ ಪತ್ರಿಕೆ ನಮ್ಮನ್ನು ಸಂಪರ್ಕಿಸಿ ನಮ್ಮಿಬ್ಬರ ಬಗ್ಗೆ ಹಾಗೂ ನಮ್ಮ ಬೀದಿ ನಾಟಕದ ಬಗ್ಗೆ ದೊಡ್ಡ ಲೇಖನವೊಂದನ್ನ ಪ್ರಕಟಿಸಿತು. ಅದಾದ ನಂತರ 1992ರಲ್ಲಿದ್ದ ಸ್ಟಾರ್ ಎಂಬ ಟಿವಿ ವಾಹಿನಿಯವರು ನಮ್ಮ ನಾಟಕದ ಬಗ್ಗೆ ಎರಡು ನಿಮಿಷದ ಸ್ಟೋರಿ ಮಾಡಿ ಟಿವಿಯಲ್ಲಿ ಪ್ರಸಾರ ಮಾಡಿದ್ರು. ಇದ್ರಿಂದ ನ್ಯಾಷನಲ್ ಲೆವೆಲ್‍ನಲ್ಲಿ ನಮಗೆ ಪ್ರಶಂಸೆ ಸಿಕ್ಕಿತು. ಇದು ನಮ್ಮಲ್ಲಿ ಇನ್ನೇನಾದ್ರು ಮಾಡಬೇಕು ಎಂಬ ಉತ್ಸಾಹ ದುಪ್ಪಟ್ಟು ಮಾಡಿತು.

• ಟಿವಿ ಸೀರಿಯಲ್‍ನಲ್ಲಿ ಅವಕಾಶ ಒಲಿದು ಬಂದಿದ್ದು ಹೇಗೆ?
ಮೂಕಿ ಟಾಕಿ ಮೂಲಕ ದೊಡ್ಡ ಮಟ್ಟದ ಹೆಸರು ನಮಗೆ ಸಿಕ್ಕಿದರೂ ಕೂಡ ಸ್ಟೇಜ್ ನಾಟಕ ಮಾಡುವಷ್ಟು ಹಣ ಇರಲಿಲ್ಲ. ಬೇರೆ ಬೇರೆ ನಾಟಕ ತಂಡಗಳಲ್ಲಿ ನಟಿಸಿ ಜೀವನ ಮಾಡಲು ಆರಂಭಿಸಿದೆ. ನಂತರ ವಾರ್ತಾ ಇಲಾಖೆಯಲ್ಲಿ ಒಂದು ವರ್ಷ ಜ್ಯೂನಿಯರ್ ಆರ್ಟಿಸ್ಟ್ ಆಗಿ ಕೆಲಸ ಮಾಡಿದೆ. ಅಲ್ಲಿಂದ ಸಿನಿಮಾ, ಸೀರಿಯಲ್, ಡಾಕ್ಯುಮೆಂಟ್ರಿಗಳಲ್ಲಿ ಅಸಿಸ್ಟೆಂಟ್, ಅಸೋಸಿಯೇಟ್ ಆಗಿ ದುಡಿದೆ. ಈ ಸಂದರ್ಭದಲ್ಲಿಯೇ ಪಿ.ಶೇಷಾದ್ರಿ ಅವರ ಕಣ್ಣಾಮುಚ್ಚಾಲೆ ಧಾರಾವಾಹಿಯಲ್ಲಿ ಚಿಕ್ಕ ಪಾತ್ರವೊಂದರಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು. ಕಣ್ಣಾಮುಚ್ಚಾಲೆ ನಾನು ನಟಿಸಿದ ಮೊಟ್ಟ ಮೊದಲ ಸೀರಿಯಲ್. ಅಲ್ಲಿಂದ ನನ್ನ ಕಿರುತೆರೆ ಪಯಣ ಆರಂಭವಾಯಿತು.

• ಕಣ್ಣಾಮುಚ್ಚಾಲೆ ಧಾರಾವಾಹಿ ನಿಮ್ಮಲ್ಲಿದ್ದ ಕಲಾವಿದನನ್ನು ಜಾಗೃತಿಗೊಳಿಸಿತು ಎಂದು ನೀವು ಯಾವಾಗಲೂ ಹೇಳುತ್ತೀರಿ?
ಹೌದು. ನಟನೆ ಮಾಡಬೇಕು ನಟನೆಯಲ್ಲೇ ಮುಂದುವರೆಯಬೇಕು ಎಂದು ಪ್ರೇರಣೆ, ಬುನಾದಿ ಹಾಕಿಕೊಟ್ಟಿದ್ದು ಈಟಿವಿಯಲ್ಲಿ ಪ್ರಸಾರವಾಗುತ್ತಿದ್ದ ಕಣ್ಣಾ ಮುಚ್ಚಾಲೆ ಸೀರಿಯಲ್. ಪುಟ್ಟ ಪಾತ್ರವಾದರೂ ನನ್ನ ನಟನೆ ನೋಡಿ ಪಿ.ಶೇಷಾದ್ರಿ ಮೆಚ್ಚಿಕೊಂಡು ಈ ಪಾತ್ರವನ್ನು ಮುಂದುವರಿಸುತ್ತೇನೆ ನೀನೇ ಮಾಡಬೇಕು ಎಂದು ಹುರಿದುಂಬಿಸಿದ್ರು. ಈ ಪಾತ್ರ ನನಗೆ ಸ್ವಲ್ಪ ಮಟ್ಟಿನ ಹೆಸರು ಹಾಗೂ ಪ್ರಚಾರವನ್ನು ತಂದು ಕೊಡ್ತು. ಅಲ್ಲಿಂದ ನಟನೆಯಲ್ಲೇ ಮುಂದುವರೆದು ಇಲ್ಲಿವರೆಗೆ ಬಂದು ನಿಂತಿದ್ದೇನೆ.

• ಪಾಪಾ ಪಾಂಡು ನಿಮ್ಮ ಕಲಾ ಬದುಕಿನ ಅತಿ ದೊಡ್ಡ ಟರ್ನಿಂಗ್ ಪಾಯಿಂಟ್ ಇದ್ರೆ ಬಗ್ಗೆ ಏನ್ ಹೇಳ್ತಿರಾ?
ಒಮ್ಮೆ ಸಿಹಿ ಕಹಿ ಚಂದ್ರು ಸರ್ ಫೋನ್ ಮಾಡಿ ಪಾಪಾ ಪಾಂಡು ಎಂಬ ಹೊಸ ಸೀರಿಯಲ್ ಆರಂಭಿಸುತ್ತಿದ್ದೇನೆ ಗೋಪಿ ಎಂಬ ಪಾತ್ರವಿದೆ ಎಂದು ತಿಳಿಸಿದ್ರು. ಮುಖ್ಯ ಪಾತ್ರ ನಾನು ನನ್ನ ಪತ್ನಿ ಮಾಡುತ್ತೇವೆ ಒಂದು ವೇಳೆ ನಾನು ಮಾಡಿಲ್ಲವಾದ್ರೆ ನೀವೇ ಮುಖ್ಯ ಪಾತ್ರ ಮಾಡುತ್ತೀರಾ ಎಂದೂ ತಿಳಿಸಿದ್ರು. ನಾನು ಯಾವುದಾದರೇನು ಜೀವನ ನಿರ್ವಹಣೆಗೆ ಕೆಲಸ, ಸಂಬಳ ಸಿಕ್ಕಿತಲ್ಲ ಎಂಬ ಖುಷಿಯಿಂದ ಒಪ್ಪಿಕೊಂಡೆ. ಒಂದೆರಡು ದಿನದಲ್ಲೇ ಸಿಹಿ ಕಹಿ ಚಂದ್ರು ಅವರು ಫೋನ್ ಮಾಡಿ ಪಾಪಾ ಪಾಂಡು ಮೈನ್ ರೋಲ್ ನೀವೇ ಮಾಡುತ್ತಿದ್ದೀರಾ ಎಂದು ತಿಳಿಸಿದ್ರು. ಮುಂದೆ ಆಗಿದೆಲ್ಲ ಪವಾಡ. ಪಾಪಾ ಪಾಂಡು ದೊಡ್ಡ ಹಿಟ್ ನೀಡಿ ನನ್ನ ಬದುಕಿನ ದಿಕ್ಕನ್ನೇ ಬದಲಿಸಿತು.

• ಸಿನಿಮಾದಲ್ಲೂ ಹೀರೋ ಆಗಿ ಮಿಂಚಿದ್ರಿ ನೀವು?
ಇದೆಲ್ಲ ಸಾಧ್ಯವಾಗಿದ್ದು ಪಾಪಾ ಪಾಂಡು ಸೀರಿಯಲ್ ನೀಡಿದ ಪಾಪ್ಯುಲ್ಯಾರಿಟಿಯಿಂದ. ನನ್ನ ಜೀವನದ ಮರೆಯಲಾರದ ದಿನಗಳು ಅಂದ್ರೆ ಒಂದು ನಾನು ಮದುವೆಯಾದ ದಿನ ಇನ್ನೊಂದು ಪಾಪಾ ಪಾಂಡು ಆರಂಭವಾದ ದಿನ. ಅಷ್ಟು ಖ್ಯಾತಿಯನ್ನು ನನಗೆ ಈ ಸೀರಿಯಲ್ ತಂದು ಕೊಡ್ತು. ಇದರ ಯಶಸ್ಸೇ ಸುಮಾರು ಆರು ಸಿನಿಮಾಗಳಲ್ಲಿ ಹೀರೋ ಆಗಿ ನಟಿಸಲು ಅವಕಾಶ ಮಾಡಿಕೊಡ್ತು. ಹೀರೋ ಅಲ್ಲದೆ ಸುಮಾರು 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದ್ದೇನೆ.

• ಪಾಪಾ ಪಾಂಡು ಸೀಸನ್-2 ಆರಂಭವಾದಾಗ ಸಂಭ್ರಮ ಹೇಗಿತ್ತು?
ನನಗೆ ಅನ್ನ ಕೊಟ್ಟ ಪಾಪಾ ಪಾಂಡು ಧಾರಾವಾಹಿ ಹದಿನೈದು ವರ್ಷದ ನಂತರ ಮತ್ತೆ ಬರುತ್ತಿದೆ ಅಂದಾಗ ನನಗಾದ ಖುಷಿಗೆ ಪಾರವೇ ಇರಲಿಲ್ಲ. ಹೊತನದಲ್ಲಿ ಮತ್ತೆ ಬಂದಾಗ ನನಗೆ ನನ್ನ ಕುಟುಂಬಕ್ಕೆ ಡಬಲ್ ಖುಷಿಯನ್ನು ತಂದು ಕೊಡ್ತು.

• ಈಗೇನು ಮಾಡುತ್ತಿದ್ದೀರಿ?
ಸದ್ಯಕ್ಕೆ ನಾನು ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಂಡಿಲ್ಲ. ಲಾಕ್‍ಡೌನ್ ಸಮಯದಲ್ಲಿ ಸಿಕೆ9 ಎಂಬ ಯುಟ್ಯೂಬ್ ಚಾನೆಲ್ ಮಾಡಿಕೊಂಡು ಪಾಂಡು ಪಂಚ್ ವೆಬ್ ಸಿರೀಸ್ ಆರಂಭಿಸಿದ್ದೇನೆ. ನಾನೇ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದೇನೆ. ಉತ್ತಮ ರೆಸ್ಪಾನ್ಸ್ ಸಿಗುತ್ತಿದೆ ಅದನ್ನೇ ಇಂಪ್ರೂ ಮಾಡುತ್ತಿದ್ದೇನೆ.

• ಕಲಾವಿದನ ಜೀವನ ಕಲಿಸಿದ ದೊಡ್ಡ ಪಾಠವೇನು?
ಅವಕಾಶಗಳು ಇದ್ದಾಗ ಮಾತ್ರ ನಮ್ಮ ಹೆಸರು ಚಾಲ್ತಿಯಲ್ಲಿರುತ್ತೆ. ಇಲ್ಲವಾದಾಗ ಕಲಾವಿದರ ಬದುಕು ಕಷ್ಟ. ಆದ್ರೆ ನಾನ್ಯಾವತ್ತೂ ಅವಕಾಶಗಳು ಸಿಗದಿದ್ದಾಗ ಬೇಸರ ಮಾಡಿಕೊಳ್ಳೋದಿಲ್ಲ. ಅವಕಾಶಗಳು ನಮ್ಮ ಮಧ್ಯೆಯೇ ಇದೆ. ಕೆಲವೊಮ್ಮೆ ನಾವೇ ಅವಕಾಶಗಳನ್ನ ಸೃಷ್ಟಿಸಿಕೊಳ್ಳಬೇಕು. ಹೊಸದೇನಾದರೂ ಮಾಡಬೇಕು. ಆಗ ಅವಕಾಶಗಳು ತನ್ನಿಂದ ತಾನೇ ಬರುತ್ತವೆ. ಸದ್ಯ ನಾನು ಹುಡುಕಿಕೊಂಡಿರೋ ದಾರಿ ಪಾಂಡು ಪಂಚ್ ವೆಬ್ ಸಿರೀಸ್. ಏರಿಳಿತ, ಅಪಮಾನ ಅವಮಾನಗಳು ಎಲ್ಲಾ ಕಡೆಯೂ ಇದ್ದೆ ಇರುತ್ತೆ. ಹಳ್ಳಕ್ಕೆ ಬಿದ್ದಾಗ ಆಳಿಗೊಂದು ಕಲ್ಲು ಸಹಜ ಅಲ್ವೇ, ಆದ್ರೆ ಆ ಕಲ್ಲನ್ನೇ ಮೆಟ್ಟಿಲು ಮಾಡಿಕೊಂಡು ಹೋಗೋದು ನನ್ನ ಪಾಲಿಸಿ.

• ನಿಮ್ಮ ಕನಸೇನು?
ನನ್ನದೇ ಪ್ರೊಡಕ್ಷನ್ ಹೌಸ್ ತೆರೆಯಬೇಕು ಎಂದು ತುಂಬಾ ಆಸೆ ಇದೆ. ಜೊತೆಗೆ ಒಂದು ಸಿನಿಮಾ ನಿರ್ದೇಶನ ಮಾಡಬೇಕು ಎಂದು ಕನಸಿದೆ. ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಅಷ್ಟೇ.

Click to comment

Leave a Reply

Your email address will not be published. Required fields are marked *