– 56,000 ವಿದ್ಯಾರ್ಥಿಗಳು ಶಾಲೆಯಿಂದ ದೂರ
ಬೆಂಗಳೂರು: ರಾಜ್ಯಕ್ಕೆ ಕೊರೊನಾ 3ನೇ ಅಲೆಯ ಭೀತಿ ಇದೆ. ಡೆಲ್ಟಾ ಪ್ಲಸ್ ವೈರಸ್ ಆತಂಕವೂ ಕಾಡ್ತಿದೆ. ಇದರ ಮಧ್ಯೆಯೇ ಸ್ಕೂಲ್ ಬೇಕಾ? ಬೇಡ್ವಾ? ಅನ್ನೋ ಚರ್ಚೆಗಳೂ ನಡೆಯುತ್ತಿವೆ. ನಾಡಿದ್ದು ಸ್ಕೂಲ್ ಆರಂಭಿಸೋ ಬಗ್ಗೆ ಸೋಮವಾರ ನಿರ್ಧಾರ ಹೊರಬೀಳಲಿದೆ. ಶುರುವಾಗೋ ಸಾಧ್ಯತೆ ಕಡಿಮೆ ಎನ್ನಲಾಗ್ತಿದೆ. ಶಾಲೆ ಇಲ್ಲ ಕಾರಣ ಹಳ್ಳಿಗಳಲ್ಲಿ ಮಕ್ಕಳ ಪರಿಸ್ಥಿತಿ ಶೋಚನೀಯವಾಗಿದೆ.
ಬಡತನದ ಬೇಗುದಿಯಿಂದ ಪಾರಾಗಲು ಬಡ ಪೋಷಕರು ಮಕ್ಕಳನ್ನು ನಾನಾ ಕೆಲಸಗಳಿಗೆ ಕಳಿಸುತ್ತಿದ್ದಾರೆ. ಇದರಿಂದಾಗಿ ಓದಿನತ್ತ ಮಕ್ಕಳು ವಿಮುಖರಾಗುತ್ತಿರುವುದು ಕಂಡು ಬರುತ್ತಿದೆ. ಇದನ್ನು ತಡೆಯಬೇಕಾದ ಸಮಾಜ ಕಲ್ಯಾಣ ಇಲಾಖೆ, ಕಾರ್ಮಿಕ ಇಲಾಖೆ, ಕುಟುಂಬ ಕಲ್ಯಾಣ ಇಲಾಖೆಗಳು ಕಣ್ಮುಚ್ಚಿ ಕುಳಿತಿವೆ. ರಾಜ್ಯದ ಹಲವೆಡೆ ಪಬ್ಲಿಕ್ ಟಿವಿ ರಿಯಾಲಿಟಿ ನಡೆಸಿದ್ದು, ಶಾಲೆಯಿಲ್ಲದ ಕಾರಣ ಮಕ್ಕಳು ಪಡ್ತಿರುವ ಕಷ್ಟಗಳು ಬೆಳಕಿಗೆ ಬಂದಿದೆ.
ಶಾಲೆಗಳಿಲ್ಲದ ಕಾರಣ ಮಕ್ಕಳು ಗ್ಯಾರೇಜ್‍ನಲ್ಲಿ ಕ್ಲೀನಿಂಗ್, ಗಾರೆ ಕೆಲಸ, ಹೊಲಗಳಲ್ಲಿ ಹಣ್ಣು, ತರಕಾರಿ ಬಿಡಿಸೋದು ಮಾಡುತ್ತಿದ್ದಾರೆ. ಇನ್ನು ಕೆಲವು ಕಡೆ ಗೋಡೆಗೆ ಸುಣ್ಣ ಬಣ್ಣದ ಕೆಲಸ, ರಸ್ತೆ ಬದಿ ಹೂ ಮಾರಾಟ ಸಹ ಮಾಡುತ್ತಿದ್ದಾರೆ.
ಗ್ರಾಮೀಣಾಭಿವೃದ್ಧಿ ಮತ್ತು ಪೌರಾಡಳಿತ ಇಲಾಖೆ ನಡೆಸಿದ ಮನೆ ಮನೆ ಸಮೀಕ್ಷೆಯಲ್ಲೂ ಆಘಾತಕಾರಿ ಮಾಹಿತಿ ಬಯಲಾಗಿದೆ. ಕೊರೊನಾ ಕಾಲ 2020-21ನೇ ಸಾಲಿನಲ್ಲಿ 14 ವರ್ಷದೊಳಗಿನ 56,605 ಮಕ್ಕಳು ಶಾಲೆಯಿಂದ ಹೊರಗೆ ಉಳಿದಿದ್ದಾರೆ. 14,561 ಮಕ್ಕಳು ಶಾಲೆಯ ಮೆಟ್ಟಿಲೇ ತುಳಿದಿಲ್ಲ. 18 ವರ್ಷದೊಳಗಿನ ಮಕ್ಕಳ ಸಮೀಕ್ಷೆಗೆ ಸರ್ಕಾರ ಈಗ ನಿರ್ಧಾರ ಮಾಡಿದೆ.
* ಗ್ರಾಮೀಣ ಭಾಗದಲ್ಲಿ 80.35 ಲಕ್ಷ ಕುಟುಂಬಗಳ ಸಮೀಕ್ಷೆ (ಶೇ.90ರಷ್ಟು)
* ಅರ್ಧದಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ – 33,329
* ಶಾಲೆಗೆ ಅಡ್ಮಿಷನ್ ಆಗದ ಮಕ್ಕಳ ಸಂಖ್ಯೆ – 9,719
* ನಗರ ಪ್ರದೇಶದಲ್ಲಿ 25.47 ಲಕ್ಷ ಕುಟುಂಬಗಳ ಸಮೀಕ್ಷೆ
* ಅರ್ಧದಲ್ಲಿ ಶಾಲೆ ಬಿಟ್ಟ ಮಕ್ಕಳ ಸಂಖ್ಯೆ – 8,715
* ಶಾಲೆಗೆ ಅಡ್ಮಿಷನ್ ಆಗದ ಮಕ್ಕಳ ಸಂಖ್ಯೆ – 4,842