– ಕೊರೊನಾ ಪರೀಕ್ಷೆಯ ಅವ್ಯವಸ್ಥೆ ಹಿನ್ನೆಲೆ ಕ್ರಮ
ಬೆಂಗಳೂರು: ರಾಜ್ಯದಿಂದ ಶಬರಿಮಲೆಗೆ ತೆರಳುವ ಭಕ್ತಾದಿಗಳಿಗೆ ಕೊರೊನಾ ಪರೀಕ್ಷಾ ವರದಿ ನೆಗೆಟಿವ್ ಬಂದರೂ ದರ್ಶನಕ್ಕೆ ಅವಕಾಶ ನೀಡುತ್ತಿಲ್ಲ ಎಂಬ ಕುರಿತು ಸುದ್ದಿಯಾಗುತ್ತಿದ್ದಂತೆ ರಾಜ್ಯ ಸರ್ಕಾರ ಎಚ್ಚೆತ್ತುಕೊಂಡಿದ್ದು, ಯಾತ್ರಾರ್ಥಿಗಳಿಗಾಗಿ ಸಹಾಯವಾಣಿಯನ್ನು ಆರಂಭಿಸಿದೆ.
ಕೇರಳದ ಶಬರಿಮಲೆಗೆ ತೆರಳುವ ಭಕ್ತರಿಗೆ ಅನುಕೂಲವಾಗುವಂತೆ ಹೆಲ್ಪ್ ಲೈನ್ ಆರಂಭಿಸಿ ಸರ್ಕಾರ ಆದೇಶ ಹೊರಡಿಸಿದೆ. 2020-21ನೇ ಸಾಲಿನ ಮಂಡಲ-ಮಕರವಿಳಕ್ಕು ಕಾರ್ಯಕ್ರಮಕ್ಕೆ ತೆರಳುವ ಭಕ್ತರ ಸಮಸ್ಯೆ ಆಲಿಸಲು ಹಾಗೂ ಆರೋಗ್ಯ ಸಲಹೆಗಳಿಗಾಗಿ ಈ ಸಹಾಯವಾಣಿಯನ್ನು ಆರಂಭಿಸಿದೆ. ಕೊರೊನಾ ಹಿನ್ನಲೆ ಶಬರಿಮಲೆ ಮಾರ್ಗಸೂಚಿ ವಿವರಿಗಳಿಗಾಗಿ ಕರೆ ಮಾಡಬಹುದು.
ಕೇರಳ ಗಡಿಯಲ್ಲಿ ಅಥವಾ ಶಬರಿಮಲೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಉಂಟಾದರೆ ಈ ಸಹಾಯವಾಣಿಗೆ ಕರೆ ಮಾಡಿ ತಿಳಿಸಬಹುದಾಗಿದೆ. ಸರ್ಕಾರ ಸಮಸ್ಯೆಗೆ ಪರಿಹಾರ ಕಲ್ಪಿಸಲಿದೆ. ಯಾವುದೇ ಮಾಹಿತಿ, ತುರ್ತು ಸಂದರ್ಭದಲ್ಲಿ 080-26709689 ಸಂಖ್ಯೆಗೆ ಕರೆ ಮಾಡಬಹುದಾಗಿದೆ. ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆಯಿಂದ ಸಹಾಯವಾಣಿಯನ್ನು ಪ್ರಾರಂಭಿಸಲಾಗಿದೆ.
ಇತ್ತೀಚೆಗೆ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಭಕ್ತರು ಶಬರಿಮಲೆಯ ಅಯ್ಯಪ್ಪನನ್ನು ನೋಡಲು ಹೋದ ವೇಳೆ ಅಲ್ಲಿನ ಪೊಲೀಸರು ತಡೆ ಹಿಡಿದಿದ್ದಾರು. ಜೊತೆಗೆ ಕೊರೊನಾ ವರದಿ ನೆಗೆಟಿವ್ ಬಂದರೂ, ಅಯ್ಯಪ್ಪನ ಬೆಟ್ಟಕ್ಕೆ ಹೋಗಲು ಬಿಟ್ಟಿಲ್ಲ. ತಲಾ 625 ರೂ. ಪಡೆದು ನೆಗೆಟಿವ್ ರಿಪೋರ್ಟ್ ನೀಡುವ ಪೋಲಿಸರ ವಿರುದ್ಧ ಭಕ್ತರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದರು.
ಕೇರಳ ಪೊಲೀಸರ ಈ ವರ್ತನೆಯಿಂದ ಕರ್ನಾಟಕ ಭಕ್ತರು ಕಂಗಾಲಾಗಿದ್ದರು. ಅಲ್ಲಿನ ವೈದ್ಯರು ಈ ವರದಿ ಆಗುತ್ತೆ ಅಂದರೂ ಪೊಲೀಸರು ಮಾತ್ರ ಆಗಲ್ಲ ಎಂದು ಕಿರಿಕಿರಿ ಮಾಡುತ್ತಿದ್ದಾರೆ ಎನ್ನಲಾಗಿತ್ತು. ಈ ಬಗ್ಗೆ ಕರ್ನಾಟಕ ರಾಜ್ಯದ ಉನ್ನತ ಅಧಿಕಾರಿಗಳು ಪ್ರವಾಸೋದ್ಯಮ ಹಾಗೂ ಮುಜರಾಯಿ ಸಚಿವರು ಕೇರಳ ರಾಜ್ಯದ ಅಧಿಕಾರಿಗಳ ಜೊತೆಗೆ ಮಾತನಾಡಿ ಕನ್ನಡದ ಭಕ್ತರಿಗೆ ಆಗುತ್ತಿರುವ ಕಿರಿಕಿರಿಯನ್ನು ಹಾಗೂ ತೊಂದರೆಯನ್ನು ತಪ್ಪಿಸಬೇಕು ಎಂದು ಭಕ್ತರು ಮನವಿ ಮಾಡಿದ್ದರು. ಈ ವಿಡಿಯೋ ಸಖತ್ ವೈರಲ್ ಆಗಿತ್ತು.