ಬೆಂಗಳೂರು: ಕರ್ನಾಟಕಕ್ಕೆ ಕೊರೊನಾ ಎರಡನೇ ಅಲೆ ರಾಕ್ಷಸನಂತೆ ಅಪ್ಪಳಿಸಿದೆ. ದಿನೇ ದಿನೇ ಸೋಂಕಿತರ ಪ್ರಮಾಣ ಸುನಾಮಿಯಂತೆ ಹೆಚ್ಚಳ ಆಗ್ತಿದೆ. ಮತ್ತೊಂದು ಕಡೆ ಸಾವಿನ ಪ್ರಮಾಣ ಭಯ ಹುಟ್ಟಿಸುವಂತೆ ನಿತ್ಯ ಹೆಚ್ಚಾಗುತ್ತಿದೆ. ಜನರಿಗೆ ಕೊರೊನಾ ಆತಂಕ ಒಂದು ಕಡೆಯಾದ್ರೆ ಸರಿಯಾಗಿ ಬೆಡ್ ಸಿಗುತ್ತಿಲ್ಲ, ಆಕ್ಸಿಜನ್, ಔಷಧಿ ಸಿಗುತ್ತಿಲ್ಲ ಅನ್ನೋದು ಮತ್ತೊಂದು ಆತಂಕ. ಇದೆರಲ್ಲದರ ಮಧ್ಯೆ ಕೊರೊನಾ ಮಣಿಸುವ ಕೆಲಸದಲ್ಲಿ ಸರ್ಕಾರ ಪದೇ ಪದೇ ಎಡವಟ್ಟಿನ ಕೆಲಸಗಳನ್ನೆ ಮುಂದುವರೆಸಿದೆ. ಕೊರೊನಾ ಕೇರ್ ಸೆಂಟರ್ ವಿಚಾರದಲ್ಲೂ ಸರ್ಕಾರ ದೊಡ್ಡ ತಪ್ಪು ಮಾಡಿದ್ದು, ಸರ್ಕಾರದ ಬೇಜವಾಬ್ದಾರಿಯಿಂದ ಕೋಟಿ ಕೋಟಿ ಖರ್ಚು ಮಾಡಿದ ಹಣ ಇಂದು ನೀರಿನಲ್ಲಿ ಹೋಮವಾಗಿದೆ.
ಕಳೆದ ವರ್ಷ ಕೊರೊನಾ ಮೊದಲ ಅಲೆಯಲ್ಲಿ ಕೊರೊನಾ ಸೋಂಕಿತರ ಚಿಕಿತ್ಸೆಗಾಗಿ ರಾಜ್ಯ ಸರ್ಕಾರ ಬೆಂಗಳೂರಿನ ಅನೇಕ ಭಾಗಗಳಲ್ಲಿ ಕೋವಿಡ್ ಕೇರ್ ಸೆಂಟರ್ ಗಳನ್ನ ಪ್ರಾರಂಭ ಮಾಡಿತ್ತು. ಅದರಲ್ಲಿ ನೆಲಮಂಗಲ ಬಳಿ ಇರೋ ಇಂಟರ್ ನ್ಯಾಷನಲ್ ಎಕ್ಸಿಬಿಷನ್ ಸೆಂಟರ್ ಕೂಡಾ ಒಂದು. ಇದರ ವಿಶೇಷತೆ ಅಂದ್ರೆ ವಿಶ್ವದ ಅತಿ ದೊಡ್ಡ ಕೋವಿಡ್ ಕೇರ್ ಸೆಂಟರ್ ಇದಾಗಿತ್ತು. ಸುಮಾರು 10 ಸಾವಿರ ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಇದಾಗಿತ್ತು, ಸಾವಿರಾರು ಸೋಂಕಿತರಿಗೆ ಚಿಕಿತ್ಸೆ ನಿಡೋ ಗುರಿಯನ್ನು ಸರ್ಕಾರ ಇಟ್ಟುಕೊಂಡಿತ್ತು.
Advertisement
Advertisement
ವಿಪರ್ಯಾಸವೆಂದರೆ ಈ ಕೋವಿಡ್ ಕೇರ್ ಸೆಂಟರ್ ಪ್ರಾರಂಭವಾಗಿ 6 ತಿಂಗಳು ಕೂಡಾ ಸರಿಯಾಗಿ ನಡೆಯಲಿಲ್ಲ. ಇಲ್ಲಿ ಸೋಂಕಿತರಿಗೆ ಚಿಕಿತ್ಸೆ ನೀಡಲು ಅಗತ್ಯ ಸಿದ್ಧತೆಗಾಗಿ ಸರ್ಕಾರ ಒಂದಲ್ಲ ಎರಡಲ್ಲ ಬರೋಬ್ಬರಿ 11 ಕೋಟಿ ಹಣ ಖರ್ಚು ಮಾಡಿತ್ತು. ಬೆಡ್, ಫ್ಯಾನ್, ತಾತ್ಕಾಲಿಕ ಕೊಠಡಿಗಳು ಸೇರಿದಂತೆ ಅಗತ್ಯ ಮೂಲಸೌಕರ್ಯ ಒದಗಿಸಲು ಸರ್ಕಾರ ಕೊಟ್ಯಾಂತರ ರೂಪಾಯಿ ಹಣ ಖರ್ಚು ಮಾಡಿತ್ತು.
Advertisement
ಸರ್ಕಾರದ ಅಂಕಿಅಂಶಗಳ ಪ್ರಕಾರ ಈ ಕೋವಿಡ್ ಕೇರ್ ಸೆಂಟರ್ ಸ್ಥಾಪನೆಗೆ ಬರೋಬ್ಬರಿ 1190.96 ಲಕ್ಷ ಅಂದರೆ ಸುಮಾರು 11.9ಕೋಟಿ ಹಣವನ್ನ ಖರ್ಚು ಮಾಡಿದೆ. ಇನ್ನು ವಿಚಿತ್ರ ಅಂದ್ರೆ ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ಚಿಕಿತ್ಸೆ ಪಡೆದವರು ಮಾತ್ರ ಕೇವಲ 3415 ಜನ ಮಾತ್ರ. ಕೋಟಿ ಕೋಟಿ ಹಣ ಖರ್ಚು ಮಾಡಿದ ಈ ಕೇರ್ ಸೆಂಟರ್ ನಲ್ಲಿ ಕೇವಲ ಕೆಲವೇ ಜನರು ಚಿಕಿತ್ಸೆ ಪಡೆದಿದ್ದಾರೆ. ಈಗ ಈ ಕೇಂದ್ರ ಕ್ಲೋಸ್ ಆಗಿದ್ದು, ಇಲ್ಲಿಗೆ ಅಂತ ಖರೀದಿ ಮಾಡಿದ್ದ ವಸ್ತುಗಳನ್ನ ಬೇರೆ ಆಸ್ಪತ್ರೆಗಳಿಗೆ ಶಿಫ್ಟ್ ಮಾಡಲಾಗಿದೆ.
Advertisement
ಕೊರೊನಾ ಎರಡನೇ ಅಲೆಯಲ್ಲಿ ಜನ ಸಾಮಾನ್ಯರಿಗೆ ಸರಿಯಾಗಿ ಬೆಡ್, ಆಕ್ಸಿಜನ್, ಔಷಧಿ ಸಿಗದೇ ಸಾವಿರಾರು ಜನ ಸಾಯುತ್ತಿದ್ದಾರೆ. ಈ ವೇಳೆ 10 ಸಾವಿರ ಬೆಡ್ ನ ಕೋವಿಡ್ ಕೇರ್ ಸೆಂಟರ್ ಇದ್ದಿದ್ದರೆ ಈ ಕೇಂದ್ರವನ್ನ ಸಂಪೂರ್ಣ ಆಕ್ಸಿಜನ್ ಕೇಂದ್ರವಾಗಿದೆ ಪರಿವರ್ತನೆ ಮಾಡಿದ್ರೆ ಸಾವಿರಾರು ಜನರು ಬದುಕುತ್ತಿದ್ದರು ಅನ್ನಿಸುತ್ತೆ. ಆದ್ರೆ ಸರ್ಕಾರ ಯಾವುದನ್ನ ಯೋಚನೆ ಮಾಡದೇ ಕೋಟಿ ಕೋಟಿ ಖರ್ಚು ಮಾಡಿ ನಿರ್ಮಿಸಿದ್ದ ಕೋವಿಡ್ ಕೇರ್ ಸೆಂಟರ್ ಮುಚ್ಚಿ ದೊಡ್ಡ ಎಡವಟ್ಟು ಮಾಡಿಕೊಂಡಿದೆ.
– ಶ್ರೀನಿವಾಸ್ ರಾವ್ ದಳವೆ.ಕೆ.