– ರಾತ್ರಿಯೆಲ್ಲ ನೋವಿನಿಂದ ನರಳಿದ ಯುವತಿ
ಹಾಸನ: ವೈದ್ಯರ ನಿರ್ಲಕ್ಷ್ಯದಿಂದ ಮಗು ಸಾವನ್ನಪ್ಪಿದೆ ಎಂದು ಪೋಷಕರು ಆಕ್ರೋಶ ಹೊರಹಾಕಿದ ಘಟನೆ ಹಾಸನದ ಹಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ.
ಹಾಸನ ಜಿಲ್ಲೆ, ಸಕಲೇಶಪುರ ತಾಲೂಕಿನ, ಹೆತ್ತೂರು ಗ್ರಾಮದ ಚಾಂದಿನಿ ಅವರು ಹೆರಿಗೆ ನೋವಿನಿಂದ ನಿನ್ನೆ ಬೆಳಗ್ಗೆ 11 ಗಂಟೆಗೆ ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ತಂದೆ, ತಾಯಿ ಇಲ್ಲದ ಚಾಂದಿನಿಯನ್ನು ಅವರ ಅಣ್ಣನೇ ಕಾಳಜಿ ವಹಿಸಿ ಕಳೆದ ಒಂದು ವರ್ಷದ ಹಿಂದೆ ಮದುವೆ ಮಾಡಿದ್ದರು.
ಹೆರಿಗೆ ನೋವಿನ ಕಾರಣ ಹಾಸನ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಾತ್ರಿಯೆಲ್ಲ ಗರ್ಭಿಣಿ ಮಹಿಳೆ ನೋವಿನಿಂದ ನರಳಿದ್ದರು. ಆದರೂ ವೈದ್ಯರು ಸರಿಯಾಗಿ ಸ್ಪಂದಿಸಲಿಲ್ಲ. ಇಂದು ಸಂಜೆ 4 ಗಂಟೆ ಸುಮಾರಿಗೆ ಹೆರಿಗೆ ಮಾಡಿ ಮಗು ಸಾವನ್ನಪ್ಪಿದೆ ಅಂತಿದ್ದಾರೆ. ನಮಗೆ ಆದ ಅನ್ಯಾಯ ಯಾರಿಗೂ ಆಗಬಾರದು. ಮಗು ಸಾವಿನ ಬಗ್ಗೆ ನಿಷ್ಪಕ್ಷಪಾತ ತನಿಖೆಯಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು ಎಂದು ಪೋಷಕರು ಆಗ್ರಹಿಸಿದ್ದಾರೆ.