– ಹತ್ಯೆಗೈದ ಮೂವರ ಬಂಧನ
ಆನೇಕಲ್: ಮಂಗಳಮುಖಿಯರಂತೆ ವೇಷತೊಟ್ಟು ಹಣ ಕಲೆಕ್ಟ್ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆಗೈದು, ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಮೂವರು ಮಂಗಳಮುಖಿಯರನ್ನು ಬಂಧನ ಮಾಡುವಲ್ಲಿ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಆರೋಪಿಗಳನ್ನು ದೇವಿ, ಭಾವನ ಹಾಗೂ ನಿತ್ಯ ಎಂದು ಗುರುತಿಸಲಾಗಿದೆ. ಕೊಲೆಯಾದ ವ್ಯಕ್ತಿ ರಾಮನಗರ ಮೂಲದ ರಾಜೇಂದ್ರ ಆಗಿದ್ದು, ಈತ ಬೆಳಗ್ಗಿನ ಜಾವದಲ್ಲಿ ಗಾರ್ಮೆಂಟ್ಸ್ ಉದ್ಯೋಗಿಯಾಗಿ ಕೆಲಸ ಮಾಡಿಕೊಂಡು ಸಂಜೆ ವೇಳೆ ಎಲೆಕ್ಟ್ರಾನಿಕ್ ಸಿಟಿ ವ್ಯಾಪ್ತಿಯ ನೈಸ್ ರಸ್ತೆಯಲ್ಲಿ ಮಂಗಳಮುಖಿ ವೇಷ ತೊಟ್ಟು ಓಡಾಡುವ ವಾಹನಗಳಲ್ಲಿ ಹಣ ಕಲೆಕ್ಷನ್ ಮಾಡುತ್ತಿದ್ದ.
ಈ ಸಂದರ್ಭದಲ್ಲಿ ರಾಜೇಂದ್ರನನ್ನು ಗಮನಿಸಿದ ಮಂಗಳಮುಖಿಯರು, ಆತನನ್ನು ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ. ಹಲ್ಲೆಯಿಂದ ತೀವ್ರ ಗಾಯಗೊಂಡಿದ್ದ ವ್ಯಕ್ತಿ ಸಾವನ್ನಪ್ಪಿದ್ದು ಬಳಿಕ ಶುಕ್ರವಾರ ರಾತ್ರಿಯೇ ಆರೋಪಿಗಳು ರಾಜೇಂದ್ರನ ಮೃತ ದೇಹವನ್ನು ರಾಮನಗರ ಆಸ್ಪತ್ರೆಗೆ ಕೊಂಡೊಯ್ದು ಅನಾಥ ಶವ ಎಂದು ಬಿಂಬಿಸಿದ್ದರು. ಆಗ ಆಸ್ಪತ್ರೆ ಸಿಬ್ಬಂದಿಗೆ ಅನುಮಾನ ಬಂದು ರಾಮನಗರ ಪೊಲೀಸರಿಗೆ ಮಾಹಿತಿ ತಿಳಿಸಿದ ಬಳಿಕ ಘಟನೆ ಬೆಳಕಿಗೆ ಬಂದಿದೆ.
ಕೂಡಲೇ ಕಾರ್ಯ ಪ್ರವೃತ್ತರಾದ ರಾಮನಗರ ಪೊಲೀಸರು ಕೊಲೆ ನಡೆದಿರುವ ಬಗ್ಗೆ ಎಲೆಕ್ಟ್ರಾನಿಕ್ ಸಿಟಿ ಪೋಲಿಸರಿಗೆ ಸಂಪೂರ್ಣ ಮಾಹಿತಿ ನೀಡಿ ಇದೀಗ ಮೂವರು ಆರೋಪಿಗಳನ್ನು ಬಂಧನ ಮಾಡಿ ಜೈಲಿಗಟ್ಟಿದ್ದಾರೆ.