ಬೀಜಿಂಗ್: ಕೊರೊನಾ ವೈರಸ್‍ನ ತವರು ಮನೆ ವುಹಾನ್‍ಲ್ಲಿರುವ ಸ್ಥಿತಿಯ ಬಗ್ಗೆ ಪ್ರಥಮ ಬಾರಿಗೆ ವರದಿ ಮಾಡಿ, ಅವ್ಯವಸ್ಥೆಯನ್ನು ಜಗಜ್ಜಾಹೀರು ಮಾಡಿದ್ದ ಮಹಿಳಾ ಪತ್ರಕರ್ತೆಗೆ ಚೀನಾ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ವಕೀಲ ವೃತ್ತಿ ಮಾಡುತ್ತಿದ್ದ 37 ವರ್ಷದ ಜಾಂಗ್ ಶಿಕ್ಷೆಗೆ ಗುರಿಯಾಗಿದ್ದಾರೆ. ವುಹಾನ್ ನಗರದಲ್ಲಿ ಫೆಬ್ರವರಿಯಲ್ಲಿ ಕಾಣಿಸಿಕೊಂಡ ಕೊರೊನಾದ ಭೀಕರತೆಯನ್ನು ವರದಿ ಮಾಡಿ ಬಿತ್ತರಿಸಿದ ಪರಿಣಾಮವಾಗಿ ಜನಗಳ ಮತ್ತು ಸಮಸ್ಯೆಗಳನ್ನು ಸೃಷ್ಟಿಸಲು ಪ್ರಚೋದಿಸಿದ ಆರೋಪ ಹೊರಿಸಿ ನ್ಯಾಯಾಲಯದಲ್ಲಿ ಕೇಸ್ ದಾಖಲಾಗಿತ್ತು. ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಈಗ ಶಿಕ್ಷೆಯ ಪ್ರಮಾಣವನ್ನು ಶಾಂಘೈ ಕೋರ್ಟ್ ಪ್ರಕಟಿಸಿದೆ.
ಕೊರೊನಾ ಪ್ರಾರಂಭದ ಹಂತದಲ್ಲಿ ಇದ್ದ ಸ್ಥಿತಿ, ಕಠಿಣ ಲಾಕ್‍ಡೌನ್ ನೀತಿ, ತುಂಬಿ ತುಳುಕುತ್ತಿದ್ದ ಆಸ್ಪತ್ರೆ ಇತ್ಯಾದಿಗಳ ಫೋಟೋ, ವಿಡಿಯೋ ತೆಗೆದು ಚೀನಾದ ಸಾಮಾಜಿಕ ಜಾಲತಾಣ ಮತ್ತು ವಿ ಚಾಟ್‍ನಲ್ಲಿ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಈ ವಿಡಿಯೋಗಳು ವೈರಲ್ ಆಗಿ ಪ್ರಪಂಚದ ಗಮನ ಸೆಳೆದಿತ್ತು.
ಮೇ ಮಧ್ಯದಲ್ಲಿ ಈಕೆಯ ಖಾತೆಯಿಂದ ಯಾವುದೇ ಪೋಸ್ಟ್‌ಗಳು ಪ್ರಕಟವಾಗಿರಲಿಲ್ಲ. ಬಳಿಕ ಪೊಲೀಸರು ಈಕೆಯನ್ನು ಬಲವಂತವಾಗಿ ವಶದಲ್ಲಿಟ್ಟಿದ್ದಾರೆ ಎಂಬ ವಿಚಾರ ಬೆಳಕಿಗೆ ಬಂದಿತ್ತು. ಬಳಿಕ ಜಾಂಗ್ ಖಾತೆಯನ್ನು ಬ್ಲಾಕ್ ಮಾಡಲಾಗಿತ್ತು. ಇದನ್ನೂ ಓದಿ: ಭಯಕ್ಕೆ ಬಿದ್ದು ಭಾರತದ ವೆಬ್‌ಸೈಟ್‌ಗಳಿಗೆ ಕತ್ತರಿ ಹಾಕಿದ ಚೀನಾ
ಈಕೆಯ ವಕೀಲರು ಪ್ರತಿಕ್ರಿಯಿಸಿ, ಸೋಮವಾರ ಜಾಂಗ್ ವೀಲ್ ಚೇರ್‌ನಲ್ಲಿ ಕೋರ್ಟ್‍ಗೆ ಹಾಜರಾಗಿದ್ದಳು. ವಿಚಾರಣೆ ಸಂದರ್ಭದಲ್ಲಿ ಈಕೆ ಆರೋಪ ಸಾಬೀತು ಪಡಿಸುವಂತಹ ಬಲವಾದ ಸಾಕ್ಷ್ಯಗಳು ಇರಲಿಲ್ಲ ಎಂದು ಹೇಳಿದ್ದಾರೆ.
ಚೀನಾದಲ್ಲಿರುವ ಕಮ್ಯೂನಿಸ್ಟ್ ಸರ್ಕಾರದ ಪೊಲೀಸರು ಕೋವಿಡ್ 19 ಸಮಯದಲ್ಲಿ ವರದಿ ಮಾಡಿದ್ದಕ್ಕೆ ಜಾಂಗ್ ಮಾತ್ರವಲ್ಲದೇ ಹಲವು ಪತ್ರಕರ್ತಕರನ್ನು ವಶಕ್ಕೆ ಪಡೆದಿದ್ದರು. ಇದನ್ನೂ ಓದಿ: 2 ತಿಂಗಳ ಬಳಿಕ ಸಾರ್ವಜನಿಕವಾಗಿ ಕಾಣಿಸಿಕೊಂಡ ವುಹಾನ್ ಪತ್ರಕರ್ತ