– ಬಾವಲಿಗಳಿಂದ ವೈರಸ್ ಹರಡಿರುವ ಸಾಧ್ಯತೆ ಹೆಚ್ಚು
– ಆಹಾರ ಸರಬರಾಜು ಸರಪಳಿಯತ್ತ ಸಾಗಿದ ತನಿಖೆ
ಬೀಜಿಂಗ್: ವಿಶ್ವದ 10 ಕೋಟಿ ಜನರಿಗೆ ಬಾಧಿಸಿ, 23 ಲಕ್ಷ ಜನರನ್ನು ಬಲಿ ಪಡೆದ ಕೊರೊನಾ ವೈರಸ್ ಚೀನಾದ ವುಹಾನ್‌ನಲ್ಲಿರುವ ವೈರಾಲಜಿ ಲ್ಯಾಬ್‌ನಿಂದ ಸೋರಿಕೆಯಾಗಿರುವ ಸಾಧ್ಯತೆ ಇಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ತಜ್ಞ ವೈದ್ಯರೊಬ್ಬರು ಹೇಳಿದ್ದಾರೆ.
ವುಹಾನ್ ಪ್ರಯೋಗಾಲಯದಿಂದ ಕೊರೊನಾ ವೈರಸ್ ಸೋರಿಕೆಯಾಗಿದೆ. ಆದರೆ ಚೀನಾ ಉದ್ದೇಶ ಪೂರ್ವಕವಾಗಿ ಈ ವಿಚಾರವನ್ನು ಮುಚ್ಚಿಟ್ಟಿದೆ ಎಂಬ ಗಂಭೀರ ಆರೋಪವಿದೆ. ಆದರೆ ಈ ಆರೋಪವೇ ತಪ್ಪು ಎಂಬಂತೆ ಡಬ್ಲ್ಯುಎಚ್‌ಒ ಆಹಾರ ಸುರಕ್ಷತೆ ಮತ್ತು ಪ್ರಾಣಿಗಳ ರೋಗ ತಜ್ಞ ಪೀಟರ್ ಬೆನ್ ಎಂಬರೇಕ್ ವುಹಾನ್‌ನಲ್ಲಿರುವ ವೈರಾಲಜಿ ಲ್ಯಾಬ್‌ನಿಂದ ಸೋರಿಕೆಯಾಗಿರುವ ಸಾಧ್ಯತೆ ಇಲ್ಲ. ಬದಲಾಗಿ ಪ್ರಾಣಿಗಳಿಂದ ಮಾನವರಿಗೆ ಹರಡಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.
Advertisement
Advertisement
ಡಬ್ಲ್ಯುಎಚ್‌ಒ 10 ದೇಶಗಳ ನಿಯೋಗ ಸೋಂಕಿನ ಮೂಲ ಮತ್ತು 2019ರ ಡಿಸೆಂಬರ್‌ಗೂ ಮುನ್ನ ಚೀನಾದಲ್ಲಿ ಕೊರೋನಾ ಸಾರ್ಸ್- ಕೋವ್-2 ವೈರಸ್ ಇತ್ತೇ ಎಂಬುದನ್ನು ಪತ್ತೆ ಹಚ್ಚಲು ಚೀನಾಗೆ ಭೇಟಿ ನೀಡಿ ತನಿಖೆ ಆರಂಭಿಸಿದೆ. ಸಿಂಗಾಪುರ ಮೂಲಕ ಜ.14ಕ್ಕೆ ವುಹಾನ್‌ಗೆ ಭೇಟಿ ನೀಡಿದ ತಂಡ ಮೊದಲ 2 ವಾರ ಹೋಟೆಲ್‌ನಲ್ಲಿ ಕ್ವಾರಂಟೈನ್‌ನಲ್ಲಿತ್ತು. ಮೊದಲ 2 ವಾರ ವಿಡಿಯೋ ಕಾನ್ಫರೆನ್ಸ್ ಮೂಲಕ ಮಾಹಿತಿ ಕಲೆ ಹಾಕಿದ ತಂಡ ಬಳಿಕ ಆರೋಪ ಬಂದ ಸ್ಥಳಗಳಿಗೆ ಭೇಟಿ ನೀಡಿದೆ. ಇದನ್ನೂ ಓದಿ: ವುಹಾನ್‍ನಲ್ಲಿ 1,500 ವಿವಿಧ ವೈರಸ್ ರಕ್ಷಣೆ – ಬಿರುಗಾಳಿ ಎಬ್ಬಿಸಿದ ಚೀನಾ ಡೈಲಿ ಟ್ವೀಟ್
Advertisement
ನಿಯೋಗ ʼದಿ ವುಹಾನ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ’ಗೆ ಭೇಟಿ ಕೊಟ್ಟು ಪರಿಶೀಲನೆ ನಡೆಸಿದೆ. ಅಷ್ಟೇ ಅಲ್ಲದೇ ವುಹಾನ್ ಹೊರವಲಯದಲ್ಲಿರುವ ಪ್ರಾಣಿಗಳ ಮಾಂಸದ ಮಾರುಕಟ್ಟೆ(ವೆಟ್ ಮಾರುಕಟ್ಟೆ) ಭೇಟಿ ನೀಡಿದೆ.
Advertisement
ಪರಿಶೀಲನೆ ಬಳಿಕ ಮಾತನಾಡಿರುವ ಪೀಟರ್ ಬೆನ್ ಎಂಬರೇಕ್, 2019ರ ಡಿಸೆಂಬರ್‌ಗೂ ಮೊದಲೇ ಚೀನಾದಲ್ಲಿ ಸಾರ್ಸ್ ಕೋವ್ 2 ವೈರಸ್ ಇತ್ತು ಎಂಬುದನ್ನು ದೃಢಪಡಿಸುವ ಯಾವುದೇ ಸಾಕ್ಷ್ಯಾಧಾರಗಳು ತಮ್ಮ ಪ್ರಾಥಮಿಕ ತನಿಖೆಯಲ್ಲಿ ಲಭ್ಯವಾಗಿಲ್ಲ ಎಂದು ಹೇಳಿದ್ದಾರೆ.
ಈ ವೈರಸ್ ಬಾವಲಿಯಲ್ಲಿ ಉಗಮವಾಗಿ ಬಳಿಕ ಮಾನವರಿಗೆ ಹರಡಿರುವ ಸಾಧ್ಯತೆ ಇದೆ. ಆದರೆ ವುಹಾನ್‌ನಲ್ಲಿ ಬಾವಲಿಗಳು ಇಲ್ಲ. ಆದರೆ ಬಾವಲಿಯಿಂದ ಪ್ಯಾಂಗೊಲಿನ್ ಅಥವಾ ಬಿದಿರಿನ ಇಲಿಗೆ ಹರಡಿ ಬಳಿಕ ಮಾನವರಿಗೆ ಬಂದಿರುವ ಸಾಧ್ಯತೆಯಿದೆ. ಪ್ರಾಣಿಗಳ ಮೂಲಕ ವೈರಸ್ ಸಾಗಿಬಂದ ಪಥದ ಬಗ್ಗೆ ಇನ್ನಷ್ಟು ವಿಸ್ತೃತ ಅಧ್ಯಯನ ನಡೆದರೆ ಮತ್ತಷ್ಟು ವಿವರ ಲಭ್ಯವಾಗಬಹುದು ಎಂದಿದ್ದಾರೆ.
ಶೀತಲೀಕೃತ ಉತ್ಪನ್ನಗಳ ಮೂಲಕವೂ ಮಾನವರಿಗೆ ಸೋಂಕು ಹರಡಿರುವ ಸಾಧ್ಯತೆ ಇದೆಯೇ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಅವರು ವಿವರಿಸಿದರು.
ನಿಯೋಗದ ಸದಸ್ಯ ಡಾ. ಪೀಟರ್ ದಾಸ್ಜಾಕ್ ಮಾತನಾಡಿ, ನಾವು ಬಹಳಷ್ಟು ಕೆಲಸ ಮಾಡಿದ್ದೇವೆ. ದಕ್ಷಿಣ ಏಷ್ಯಾದಲ್ಲಿ ಚೀನಾ ದೊಡ್ಡ ದೇಶ. ಸಾಗರ ಆಹಾರದ ಸರಬರಾಜು ಸರಪಳಿ ಬಹಳ ವ್ಯಾಪಕವಾಗಿದೆ. ವಿದೇಶದಿಂದ ಮತ್ತು ಚೀನಾದ ವಿವಿಧ ಭಾಗಗಳಿಂದ ಬರುತ್ತದೆ. ಹೀಗಾಗಿ ಈಗ ನಾವು ಸರಬರಾಜು ಸರಪಳಿಯತ್ತ ಗಮನ ಹರಿಸಿದ್ದೇವೆ ಎಂದು ತಿಳಿಸಿದರು.
ಈ ಹಿಂದೆ ಚೀನಾ ಮಾಧ್ಯಮಗಳು ಭಾರತದಿಂದ ಈ ವೈರಸ್ ಬಂದಿರಬಹುದು ಎಂದು ವರದಿ ಮಾಡಿದ್ದವು. ವಿಶ್ವದ ವಿವಿಧ ರಾಷ್ಟ್ರಗಳಿಂದ ಆಹಾರ ಉತ್ಪನ್ನಗಳನ್ನು ಚೀನಾ ಆಮದು ಮಾಡಿಕೊಳ್ಳುತ್ತದೆ. ವಿಶೇಷವಾಗಿ ಭಾರತದಿಂದ ಮೀನುಗಳನ್ನು ತರಿಸಿಕೊಳ್ಳುತ್ತದೆ. ಈ ಮೂಲಕ ಚೀನಾಗೆ ವೈರಸ್ ಪ್ರವೇಶ ಆಗಿರುವ ಸಾಧ್ಯತೆಯಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮಗಳು ವರದಿ ಮಾಡಿತ್ತು. ಈ ವರದಿಗೆ ವಿಶ್ವದೆಲ್ಲೆಡೆ ಭಾರೀ ಟೀಕೆ ವ್ಯಕ್ತವಾಗಿತ್ತು. ಇದನ್ನೂ ಓದಿ: ಕೊರೊನಾ ವೈರಸ್ ಸೃಷ್ಟಿಯಾಗಿದ್ದು ಭಾರತದಲ್ಲಿ – ಚೀನಾದ ಮೊಂಡುವಾದ
ವಿಶ್ವ ಆರೋಗ್ಯ ಸಂಸ್ಥೆಯ ಮೇಲೆ ವಿವಿಧ ರಾಷ್ಟ್ರಗಳು ಒತ್ತಡ ಹಾಕಿ ಕೊರೊನಾ ವೈರಸ್ ಮೂಲ ಪತ್ತೆ ಹಚ್ಚುವಂತೆ ವಿವಿಧ ರಾಷ್ಟ್ರಗಳು ಡಬ್ಲ್ಯೂಎಚ್‌ಒ ಮೇಲೆ ಒತ್ತಡ ಹಾಕಿದ್ದವು. ಆರಂಭದಲ್ಲಿ ಚೀನಾ ಸರ್ಕಾರ ತನಿಖೆಗೆ ಒಪ್ಪಿಗೆ ನೀಡಿರಲಿಲ್ಲ. ಆದರೆ ಅಂತರಾಷ್ಟ್ರೀಯ ಒತ್ತಡ ಡಬ್ಲ್ಯೂ ಎಚ್‌ಒ ಮೇಲೆ ಜಾಸ್ತಿಯಾದ ಬಳಿಕ ತನಿಖೆ ನಡೆಸಲು ಅನುಮತಿ ನೀಡಿತ್ತು.
ಬೀಜಿಂಗ್‌ನಲ್ಲಿ ತನಿಖಾ ತಂಡಕ್ಕೆ ಸರ್ಕಾರ ಕೆಲ ನಿರ್ಬಂಧ ಹೇರಿದೆ. ಸಂಶೋಧಕರು ಚೀನಾದ ವರದಿಗಾರರ ಜೊತೆ ಮಾತನಾಡದಂತೆ ತಡೆದಿದೆ ಎಂದು ವಿದೇಶಿ ಮಾಧ್ಯಮಗಳು ವರದಿ ಮಾಡಿದೆ.