ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ ನ ರಕ್ತಸಿಕ್ತ ಅಧ್ಯಾಯದಲ್ಲಿ ಒಂದಾದ ಮೀಣ್ಯಂ ದಾಳಿಗೆ ಬರೋಬ್ಬರಿ ಇಂದಿಗೆ 28 ವರ್ಷವಾಗಿದ್ದು, ಸ್ವಾತಂತ್ರ್ಯ ದಿನಾಚರಣೆ ಸಂಭ್ರಮಾಚರಣೆಯ ಮುನ್ನ ಪೊಲೀಸರಿಗೆ ಈ ಮರಣದ ಕಥೆ ಈಗಲೂ ಕಣ್ಣೀರು ತರಿಸುತ್ತದೆ.
ದಂತಚೋರ ಎಲ್ಲೆಮೀರಿದ್ದ 1990ರ ದಶಕದಲ್ಲಿ ಎಸ್‍ಟಿಎಫ್ ಕರ್ತವ್ಯ ಮಾಡಲು ಹಿಂಜರಿಯುತ್ತಿದ್ದ ವೇಳೆ ಆತನನ್ನು ಹಿಡಿದೇ ಹಿಡಿಯುತ್ತೇವೆ ಎಂದು ಸಾಹಸತನ ತೋರಿದ್ದ ಎಸ್.ಪಿ. ಹರಿಕೃಷ್ಣ ಹಾಗೂ ಎಸ್‍ಐ ಶಕೀಲ್ ಅಹ್ಮದ್ ಮೋಸದಿಂದ ಬಲಿಯಾಗಿದ್ದನ್ನು ಪೊಲೀಸರು ಈಗಲೂ ನೆನೆಯುತ್ತಾರೆ.

ಏನದು ಮೀಣ್ಯಂ ದಾಳಿ?: ಎಸ್‍ಟಿಎಫ್ ಪಡೆಯ ನಿರಂತರ ಕಾರ್ಯಾಚರಣೆ ವೇಳೆ ವೀರಪ್ಪನ್ ಬಂಟನಾದ ಗುರುನಾಥನ್ ಎಂಬಾತನನ್ನು ಹಿಡಿಯುವ ಅವಕಾಶ ಒದಗಿ ಬಂದು ಕೊನೆಗೆ ಆತ ಪೊಲೀಸರ ಗುಂಡಿಗೆ ಬಲಿಯಾಗುತ್ತಾನೆ. ಬಂಟನನ್ನು ಹೊಡೆದುರುಳಿಸಿದ ಹರಿಕೃಷ್ಣ ಮತ್ತು ಶಕೀಲ್ ವಿರುದ್ಧ ಪ್ರತಿಕಾರ ತೀರಿಸಿಕೊಳ್ಳಬೇಕೆಂದು ಹಠಕ್ಕೆ ಬಿದ್ದು ಕಮಲನಾಯ್ಕ್ ಎಂಬವನ ಮೂಲಕ ವೀರಪ್ಪನ್ ದಾಳಿ ನಡೆಸಲು ಯೋಜನೆ ರೂಪಿಸುತ್ತಾನೆ.
ಕಮಲನಾಯ್ಕ್ ನು ವೀರಪ್ಪನ್ ಮತ್ತು ಪೊಲೀಸರಿಗೆ ಮಾಹಿತಿದಾರನಂತೆ ಕೆಲಸ ಮಾಡುತ್ತಿದ್ದನು. ವ್ಯಾಪಾರಿಗಳ ಸೋಗಿನಲ್ಲಿ ಕಾಡುಗಳ್ಳನನ್ನು ಹಿಡಿಯಲು ಹೊರಟ ಹರಿಕೃಷ್ಣ ಮತ್ತು ಶಕೀಲ್ ಅಹ್ಮದ್ ಅವರನ್ನು ಮೀಣ್ಯಂ ಬಳಿ ವೀರಪ್ಪನ್ ಹೊಂಚುಹಾಕಿ ಕಾದು ಗುಂಡಿನ ಮಳೆಯನ್ನೇ ಸುರಿಸಿ ಬಲಿ ಪಡೆಯುತ್ತಾನೆ. ಘಟನೆಯಲ್ಲಿ ಅಪ್ಪಚ್ಚು, ಸುಂದರ್, ಕಾಳಪ್ಪ ಸೇರಿದಂತೆ ಕಮಲನಾಯ್ಕನೂ ಮೃತಪಡುತ್ತಾನೆ. ಈ ವೇಳೆ ಕೆಲ ಪೊಲೀಸರು ಗಾಯಗೊಳ್ಳುತ್ತಾರೆ. ಈ ಮೂವರು ಈಗಲೂ ಅಂದು ಹಾರಿದ ಬುಲೆಟ್ ಗಳ ಜೊತೆ ಬದುಕು ನಡೆಸುತ್ತಿದ್ದಾರೆ.

ಅಂದಿನ ಘಟನೆಯಲ್ಲಿ ಗಾಯಗೊಂಡ ಚಾಮರಾಜನಗರ ಪಿಎಸ್ ಐ ಸಿದ್ದರಾಜನಾಯ್ಕ್ ಈ ಕುರಿತು ಮಾತನಾಡಿ, ಪೊಲೀಸರಿಗೆ ಸ್ವಾತಂತ್ರ್ಯದ ಸಂಭ್ರಮಾಚರಣೆಯ ಹಿಂದಿನ ದಿನ ಬರುವ ಕರಾಳ ದಿನ ಮೀಣ್ಯಂ ದಾಳಿಯಾಗಿದೆ. ದಕ್ಷ, ಸಾಹಸಿ ಪೊಲೀಸ್ ಅಧಿಕಾರಿಗಳನ್ನು ನಾವು ಕಳೆದುಕೊಂಡೆವು. ಇಂದಿಗೂ ಅಂದು ನಡೆದ ಘಟನೆ ಕಣ್ಣಿಗೆ ಕಟ್ಟಿದಂತಿದೆ ಎಂದು ಭಾವುಕರಾದರು. ಇನ್ನು ಇಂದು ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್ ಸ್ಮಾರಕ ಸ್ಥಳಕ್ಕೆ ತೆರಳಿ ಗೌರವ ನಮನ ಸಲ್ಲಿಸಿದ್ದಾರೆ.

