ಚಿಕ್ಕಮಗಳೂರು: ಕೊರೊನಾ ಪ್ರಕರಣಗಳು ವ್ಯಾಪಕವಾಗಿ ಹೆಚ್ಚುತ್ತಿರುವುದರಿಂದ ಸರ್ಕಾರ ಕಟ್ಟುನಿಟ್ಟಿನ ವೀಕೆಂಡ್ ಕರ್ಫ್ಯೂ ವಿಧಿಸಿದ್ದು, ರಾಜ್ಯಾದ್ಯಂತ ಎಲ್ಲವೂ ಸ್ತಬ್ಧವಾಗಿವೆ. ಆಹಾರಕ್ಕಾಗಿ ನಿರ್ಗತಿಕರು ಪರದಾಡುವಂತಾಗಿದೆ. ಹೀಗಾಗಿ ಲಾಕ್‍ಡೌನ್‍ನಿಂದ ಯಾರೂ ಉಪವಾಸ ಇರಬಾರದು ಎಂದು ನಗರದ ತನೋಜ್ ಕುಮಾರ್ ಮತ್ತು ಅವರ ಸ್ನೇಹಿತರ ತಂಡ ತಾವೇ ಹಣ ಹಾಕಿಕೊಂಡು ಸಾಯಿಬಾಬಾ ಸೇವಾ ಟ್ರಸ್ಟ್ ವತಿಯಿಂದ ಎರಡು ದಿನವೂ ಮೂರು ಹೊತ್ತು ಊಟ ಕೊಡುತ್ತಿದ್ದಾರೆ.
Advertisement
ಒಂದೊಂದು ಹೊತ್ತಿಗೂ ಒಂದೊಂದು ತಿಂಡಿ ಮಾಡಿ, ಪಾರ್ಸಲ್ ಬೇಕಾದವರಿಗೆ ಪಾರ್ಸಲ್. ಅಲ್ಲೇ ತಿನ್ನುವವರರಿಗೆ ಜೊನ್ನೆಯಲ್ಲಿ ಊಟ-ತಿಂಡಿ ನೀಡುತ್ತಿದ್ದಾರೆ. ಹೊತ್ತು-ಹೊತ್ತಿಗೂ ಊಟ-ತಿಂಡಿ ಮಾಡಿಕೊಂಡು ಬೀದಿ-ಬೀದಿ, ಗಲ್ಲಿ-ಗಲ್ಲಿ ಸುತ್ತಿ ಹಸಿದವರ ಹೊಟ್ಟೆಯನ್ನು ತಣ್ಣಗಾಗಿಸುತ್ತಿದ್ದಾರೆ. ಇಂದು ಮಧ್ಯಾಹ್ನ ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣದಲ್ಲಿ ಡ್ರೈವರ್ ಹಾಗೂ ಕಂಡಕ್ಟರ್ ಜೊತೆಗೆ ಪ್ರಯಾಣಿಕರೂ ಊಟ ಮಾಡಿದರು.
Advertisement
Advertisement
ನಿರ್ಗತಿಕರು, ಭಿಕ್ಷುಕರು ಸೇರಿದಂತೆ ಊಟ ಸಿಗದವರು, ಹಸಿದವರು, ಬ್ಯಾಚುಲರ್ ಗಳಿಗೆ ಊಟ-ತಿಂಡಿ ನೀಡುತ್ತಿದ್ದಾರೆ. ಹೋಟೆಲ್ ಇಲ್ಲದ ಕಾರಣ ಕೆಲವರು ಊಟದ ದಾರಿಯನ್ನೇ ಕಾಯುತ್ತಿದ್ದಾರೆ. ನಗರದ ತನೋಜ್ ಕುಮಾರ್ ತಂಡ ಈ ರೀತಿ ಊಟ ಹಂಚುತ್ತಿರೋದು ಇದೇ ಮೊದಲಲ್ಲ. ಕೊರೊನಾ ಮೊದಲನೇ ಅಲೆಯಲ್ಲೂ ಇದೇ ತಂಡ 45 ದಿನಗಳ ಕಾಲ ನಿರಂತರ ಮೂರು ಹೊತ್ತು ಊಟ ನೀಡಿದ್ದರು. ಈಗಲೂ ಎಷ್ಟು ದಿನ ಲಾಕ್‍ಡೌನ್ ಆಗುತ್ತೋ ಅಷ್ಟು ದಿನವೂ ಊಟ ನೀಡಲು ಸಿದ್ಧರಿದ್ದಾರೆ. ನಗರದ ತನೋಜ್ ಕುಮಾರ್, ರಸೂಲ್ ಖಾನ್, ಶಿವ ಪ್ರಕಾಶ್, ರಾದೇಶ್, ವಿನಾಯಕ್ ಈ ತಂಡದ ಸದಸ್ಯರಾಗಿದ್ದಾರೆ.