ಮಂಡ್ಯ: ಆಸ್ತಿ ಹಂಚಿಕೆ ವಿಚಾರಕ್ಕೆ ಎರಡು ಕುಟುಂಬಗಳ ನಡುವೆ ಇಂದು ಜಗಳ ಆರಂಭವಾಗಿತ್ತು. ಜಗಳ ವಿಕೋಪಕ್ಕೆ ಹೋಗುತ್ತಿದ್ದಂತೆ ಒಂದು ಕುಟುಂಬದ ಇಬ್ಬರು ಮಹಿಳೆಯರು ವಿಷ ಸೇವಿದಿದ್ದಾರೆ. ಇದ್ರಿಂದ ಹೆದರಿದ ಮತ್ತೊಂದು ಕುಟುಂಬ ಸೀಮೆ ಎಣ್ಣೆ ಕುಡಿದು ಆತ್ಮಹತ್ಯೆಗೆ ಯತ್ನಿಸಿದೆ. ಈ ಘಟನೆಯಲ್ಲಿ ಓರ್ವ ಮಹಿಳೆ ಪ್ರಾಣ ಕಳೆದುಕೊಂಡಿದ್ರೆ ನಾಲ್ವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.
ಕೇವಲ ಮೂರು ಗುಂಟೆ ಭೂಮಿ ವಿಚಾರಕ್ಕೆ ವಿಷ ಸೇವಿಸಿ ಓರ್ವ ಮಹಿಳೆ ಪ್ರಾಣ ಕೆಳೆದುಕೊಂಡು, ನಾಲ್ವರು ಆಸ್ಪತ್ರೆ ಪಾಲಾಗಿರುವ ಘಟನೆ ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣವಾಗಿರೊ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಜರುಗಿದೆ.
ದೇಶ, ವಿದೇಶಗಳಿಂದ ಸಂತಾನೋತ್ಪತ್ತಿಗಾಗಿ ಬರುವ ವಿವಿಧ ಪ್ರಬೇಧಗಳ ಪಕ್ಷಿಗಳ ಕಲರವ ಕೇಳುತ್ತಿದ್ದ ಕೊಕ್ಕರೆ ಬೆಳ್ಳೂರು ಗ್ರಾಮದಲ್ಲಿ ಕೇವಲ ಮೂರು ಗುಂಟೆ ಜಮೀನು ವಿಚಾರದಲ್ಲಿ ಆರಂಭವಾದ ಗಲಾಟೆ ಒಂದು ಪ್ರಾಣ ಕಸಿದುಕೊಂಡಿದೆ. ಅಂದಹಾಗೆ ಹತ್ತಿರದ ಸಂಬಂಧಿಗಳಾದ ಸಿದ್ದೇಶ್ ಹಾಗೂ ನಾರಾಯಣ್ ಕುಟುಂಬದ ನಡುವೆ ಜಮೀನು ವಿವಾದ ವಿತ್ತು. ನಾರಾಯಣ್ ಎಂಬುವರ ತಾಯಿ, ಸಿದ್ದೇಶ್ ತಂದೆಯಿಂದ 26 ಗುಂಟೆ ಜಮೀನನ್ನು 1986ನೇ ಇಸಿವಿಯಲ್ಲಿ ಖರೀದಿಸಿದ್ರಂತೆ. ಅದ್ರಲ್ಲಿ 10 ಗುಂಟೆ ಜಮೀನಿನ ದಾಖಲೆ ಸಿದ್ದೇಶ್ ಅಜ್ಜಿ ಹೆಸರಿನಲ್ಲೇ ಇದೆ. ಇದ್ರಿಂದ 10 ಗುಂಟೆ ಜಮೀನು ತಮ್ಮದೆಂದು ಕೆಲವು ತಿಂಗಗಳಿಂದ ಸಿದ್ದೇಶ್ ಕ್ಯಾತೆ ತೆಗೆದಿದ್ರಂತೆ. ಆ ವಿಚಾರಕ್ಕೆ ಎರಡು ಕುಟುಂಬದ ನಡುವೆ ಜಗಳ ನಡೆಯುತ್ತಲೇ ಇತ್ತು.
ಇಂದು ಬೆಳಿಗ್ಗೆ ಆ ಜಾಗದಲ್ಲಿ ಸಿದ್ದೇಶ್ ಕುಟುಂಬ ಶೆಟ್ ಹಾಕಿಕೊಳ್ಳಲು ಮುಂದಾಗಿತ್ತು. ಈ ವೇಳೆ ವೆಂಕಟೇಶ್ ಕುಟುಂಬದವರು ತಡೆದಿದ್ದಾರೆ. ಜಗಳ ನಿಲ್ಲೋ ಲಕ್ಷಣಗಳು ಕಾಣದಿದ್ದಾಗ ಬೇಸರಗೊಂಡು ವೆಂಕಟೇಶ್ ಪತ್ನಿ ಶೈಲಾ ಹಾಗೂ ಅಕ್ಕ ವಿಷ ಸೇವಿಸಿದ್ದಾರೆ. ಇದ್ರಿಂದ ಹೆದರಿದ ಸಿದ್ದೇಶ್ ಸೇರಿ ಆತನ ಕುಟುಂಬದ ಮೂವರು ಸಿಮೆ ಎಣ್ಣೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಇನ್ನು ತಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ಮದ್ದೂರು ತಾಲ್ಲೂಕು ಆಸ್ಪತ್ರೆಯಲ್ಲಿ ದಾಖಲಿಸಲಾಯಿತು. ಆದ್ರೆ ವಿಷ ಸೇವಿಸಿ ತೀವ್ರ ಅಶ್ವಸ್ಥಗೊಂಡಿದ್ದ ವೆಂಕಟೇಶ್ ಪತ್ನಿ ಶೈಲಾ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಕುರಿತು ಮದ್ದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.