– ತಂದೆ ಹೇಳಿಕೆ ಸಮರ್ಥಿಸಿಕೊಂಡ ಸೃಷ್ಟಿ ಪಾಟೀಲ್
ಬೆಂಗಳೂರು: ವಿವಾದಕ್ಕೀಡಾದ ತಮ್ಮ ಹೇಳಿಕೆಗೆ ಕೃಷಿ ಸಚಿವ ಬಿ.ಸಿ.ಪಾಟೀಲ, ಧೈರ್ಯ ತುಂಬಿದ್ದೇನೆ, ಕ್ಷಮೆ ಕೇಳಲ್ಲ ಎಂದು ಹೇಳಿದ್ದಾರೆ.
ನಾನು ಕ್ಷಮೆ ಕೇಳೋ ಪ್ರಶ್ನೆಯೇ ಇಲ್ಲ. ನಾನು ಏನ್ ಹೇಳಿದ್ದೇನೋ ಅದನ್ನ ಪೂರ್ಣವಾಗಿ ಕೇಳಿ ಅಂದಿದ್ದಾರೆ. ಕೆ.ಆರ್.ಪೇಟೆಯ ಲಕ್ಷ್ಮಿ ದೇವಿ ಅನ್ನೋವರು 6 ಎಕರೆ ಜಾಗದಲ್ಲಿ ಮಿಶ್ರಬೆಳೆ ಬೆಳೆದು ಯಶಸ್ವಿಯಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಂಡ ನಂತರ ಶವಕ್ಕೆ, ಫೋಟೋಗೆ ಹಾರ ಹಾಕೋದಲ್ಲ. ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಹೇಳಿ ತಮ್ಮ ಹೇಳಿಕೆಯನ್ನ ಬಿ.ಸಿ.ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.
ತಂದೆ ಹೇಳಿಕೆಗೆ ಪುತ್ರಿಯ ಸಮರ್ಥನೆ: ಮಾಧ್ಯಮಗಳು ಟಿಆರ್ ಪಿ ಹೆಚ್ಚಿಸಿಕೊಳ್ಳಲು ಅನಗತ್ಯ ವಿವಾದ ಸೃಷ್ಠಿಸುತ್ತಿವೆ. ನಮ್ಮಪ್ಪ ರೈತರಿಗೆ ಒಳ್ಳೆ ಕೆಲಸ ಮಾಡಿರುವಷ್ಟು ಇನ್ಯಾರೂ ಮಾಡಿಲ್ಲ ಎಂದು ತಂದೆಯನ್ನ ಹಾಡಿ ಹೊಗಳಿ ಅಟ್ಟಕ್ಕೇರಿಸಿದ್ದಾರೆ.
ಕೌರವನ ಕಾಲೆಳೆದ ಕಾಂಗ್ರೆಸ್: ನಿಜವಾದ ಹೇಡಿಗಳು ಯಾರು? ರೈತರೋ? ಅಥವಾ ರಾತ್ರೋರಾತ್ರಿ ಮುಂಬೈಗೆ ಹಾರಿದವರೋ?, ಕೊರೊನಾ ಸಮಯದಲ್ಲಿ ರೈತರ ಬೆಳೆಗೆ ಮಾರುಕಟ್ಟೆ ಕಲ್ಪಿಸದ ಸರ್ಕಾರವೋ? ನೆರೆ ಬಂದಾಗ ಸಂತ್ರಸ್ತರ ನೆರವಿಗೆ ನಿಲ್ಲದ ಬಿಜೆಪಿ ನಾಯಕರೋ? ಪರಿಹಾರ ಕೇಳಿದ್ದಕ್ಕೆ ರೈತನ ಮೇಲೆ ಸುಳ್ಳು ಪ್ರಕರಣ ದಾಖಲಿಸಿರುವವರೋ? ಅಂತ ಕಾಂಗ್ರೆಸ್ ಟ್ವೀಟ್ ಮಾಡಿ ಪಾಟೀಲರ ಕಾಲೆಳೆದಿದೆ
ಅನ್ನದಾತ ಸ್ವಾಭಿಮಾನಿ: ರೈತ ಹುಟ್ಟು ಸ್ವಾಭಿಮಾನಿ ಹಾಗೂ ಮರ್ಯಾದಸ್ತ. ಸಾಲ ಕೊಟ್ಟವರು ಬಂದು ಕಿಬ್ಬದಿಯ ಕೀಲು ಮುರಿದಂತೆ ಪೀಡಿಸುವಾಗ ಮರ್ಯಾದೆಗೆ ಅಂಜಿ ದಿಕ್ಕು ತೋಚದಂತಾಗಿ ಆತ್ಮಹತ್ಯೆಗೆ ಶರಣಾಗುತ್ತಾನೆ. ಕೃಷಿ ಸಚಿವರು ಹೇಳಿದಂತೆ ರೈತ ಹೇಡಿಯಲ್ಲ. ಹೆಂಡತಿ, ಮಕ್ಕಳು, ನೆಂಟರು, ಊರಿನವರ ಮುಂದೆ ಮರ್ಯಾದೆ ಹೋಯಿತಲ್ಲ ಎಂದು ಸಾವಿಗೆ ಶರಣಾಗುತ್ತಾನೆ. ಕೃಷಿ ಸಚಿವರ ಹೇಳಿಕೆ ರೈತ ಸಮುದಾಯಕ್ಕೆ ಮಾಡಿದ ಅಪಮಾನ. ಬಹಿರಂಗವಾಗಿ ಕ್ಷಮೆಯಾಚಿಸುವಂತೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಆಗ್ರಹಿಸಿದ್ದಾರೆ.
ಬಿ.ಸಿ.ಪಾಟೀಲ್ ಹೇಳಿದ್ದೇನು?: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು. ಅವರು ಸಾಯುವಾಗ ತನ್ನ ಕುಟುಂಬದ ಬಗ್ಗೆ ಚಿಂತನೆ ಮಾಡಲ್ಲ ಅಂದಿದ್ದಾರೆ. ಮಾತು ಮುಂದುವರಿಸಿ ರೈತರ ಆತ್ಮಹತ್ಯೆಗೆ ನೀರಾವರಿ ಕಾರಣ ಅಲ್ಲ. ಮಂಡ್ಯದಲ್ಲಿ ನೀರಾವರಿ ಸೌಲಭ್ಯವಿದ್ದರೂ ಅತಿಹೆಚ್ಚು ರೈತ ಆತ್ಮಹತ್ಯೆ ಪ್ರಕರಣ ವರದಿಯಾಗಿದೆ. ನೀರಾವರಿ ಸೌಲಭ್ಯವಿಲ್ಲದ ಕೋಲಾರದಲ್ಲಿ ಆತ್ಮಹತ್ಯೆ ಪ್ರಕರಣ ಕಡಿಮೆ ಇದೆ. ಸಾವಯವಗೊಬ್ಬರ ಬಳಸಿ, ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡ್ರೆ ಲಾಭ ಸಾಧ್ಯ. ಇಸ್ರೇಲ್ ಮಾದರಿಯಲ್ಲ, ಕೋಲಾರ ಮಾದರಿಯಲ್ಲಿ ಕೃಷಿ ಮಾಡುವುದನ್ನು ರಾಜ್ಯಕ್ಕೆ ಹೇಳಿ ಕೊಡುತ್ತೇವೆ ಎಂದು ಕೊಡಗಿನ ಪೊನ್ನಂಪೇಟೆಯಲ್ಲಿ ಹೇಳಿದ್ದರು.