ಲಕ್ನೋ: ಅತ್ಯಾಚಾರ ಆರೋಪಿಯೊಬ್ಬನನ್ನು ಬಂಧಿಸಿ ಕರೆದೊಯ್ಯುತ್ತಿದ್ದಾಗ ಆತ ಪೊಲೀಸರ ಕೈಯಿಂದ ತಪ್ಪಿಸಿಕೊಂಡು ಓಡಿ ಹೋದ ಅಚ್ಚರಿಯ ಘಟನೆ ಉತ್ತರಪ್ರದೇಶದ ಲಖಿಂಪುರ್ ಖೇರಿ ಎಂಬಲ್ಲಿ ನಡೆದಿದೆ.
ಆರೋಪಿಯನ್ನು ಬಂಧಿಸಿರುವ ಪೊಲೀಸರು ಆತನನ್ನು ತಮ್ಮ ವಾಹನದಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ಯುತ್ತಿದ್ದರು. ಈ ಮಧ್ಯೆ ವಾಹನಕ್ಕೆ ಪೆಟ್ರೋಲ್ ಹಾಕಿಸಬೇಕು ಅಂತ ಪೆಟ್ರೋಲ್ ಪಂಪ್ ಬಳಿ ಹೋಗಿದ್ದಾರೆ. ಹೀಗೆ ವಾಹನಕ್ಕೆ ಪೆಟ್ರೋಲ್ ತುಂಬಿಸುತ್ತಿದ್ದಾಗ ಅತ್ಯಾಚಾರ ಆರೋಪಿ ಪೊಲೀಸರ ಕಣ್ಣುತಪ್ಪಿಸಿ ಅಲ್ಲಿಂದ ಕಾಲ್ಕಿತ್ತಿದ್ದಾನೆ. ಆರೋಪಿ ತಪ್ಪಿಸಿಕೊಂಡ ಸಂಪೂರ್ಣ ವಿಡಿಯೋ ಅಲ್ಲೇ ಇದ್ದ ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದೆ. ಅಲ್ಲದೆ ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.
Advertisement
Advertisement
ವಿಡಿಯೋದಲ್ಲಿ ಆರೋಪಿ ಬಿಳಿ ಬಣ್ಣದ ಟೀ ಶರ್ಟ್ ಹಾಗೂ ಕಂದು ಬಣ್ಣದ ಪ್ಯಾಂಟ್ ಧರಿಸಿದ್ದಾನೆ. ಓಡಿಹೋಗುತ್ತಿದ್ದ ಆರೋಪಿಯನ್ನು ಹಿಡಿಯಲು ಪೊಲೀಸ್ ಅಧಿಕಾರಿಯೊಬ್ಬರು ಕೂಡ ಆತನ ಹಿಂದೆ ಓಡುತ್ತಿರುವುದನ್ನು ನಾವು ವಿಡಿಯೋದಲ್ಲಿ ಕಾಣಬಹುದಾಗಿದೆ.
Advertisement
ಅಚ್ಚರಿ ಘಟನೆಯ ಬಗ್ಗೆ ಪೊಲೀಸರೊಬ್ಬರು ಮಾಧ್ಯಮದ ಜೊತೆ ಮಾತನಾಡಿ, ಪೋಕ್ಸೋ ಕಾಯ್ದೆಯಡಿ ಆರೋಪಿಯನ್ನು ಬಂಧಿಸಿ ಠಾಣೆಗೆ ಕರೆದೊಯ್ಯುತ್ತಿರುವಾಗ ಆತ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ. ಸದ್ಯ ಆತನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಯಾವುದೇ ವಾರೆಂಟ್ ಇಲ್ಲದೆ ಹುಡುಕಿ, ಅರೆಸ್ಟ್ ಮಾಡಿ- ಪೊಲೀಸರಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ ಯುಪಿ ಸರ್ಕಾರ
Advertisement
ತಲೆಮರೆಸಿಕೊಂಡಿರುವ ಆರೋಪಿಯ ಪತ್ತೆಗೆ ಮೂರು ಠಾಣೆಗಳ ಪೊಲೀಸರ ತಂಡವನ್ನು ರಚಿಸಲಾಗಿದೆ. ಶೀಘ್ರವೇ ಆರೋಪಿಯನ್ನು ಬಂಧಿಸುತ್ತೇವೆ. ಇನ್ನು ಪೊಲೀಸರ ನಿರ್ಲಕ್ಷ್ಯಕ್ಕೆ ಸಂಬಂಧಿಸಿದಂತೆ ತನಿಖೆ ನಡೆಯಲಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಲಖಿಂಪುರ್ ಖೇರಿ ಎಸ್‍ಪಿ ಅರುಣ್ ಕುಮಾರ್ ಸಿಂಗ್ ಹೇಳಿದ್ದಾರೆ.
ಕಳೆದ ಕೆಲವು ದಿನಗಳಿಂದ ಉತ್ತರಪ್ರದೇಶದ ಲಖಿಂಪುರ ಖೇರಿ ಅತ್ಯಾಚಾರಗಳು ಹಾಗೂ ಕೊಲೆ ಪ್ರಕರಣಗಳಿಂದ ಸುದ್ದಿಯಲ್ಲಿದೆ. ಕಳೆದ ತಿಂಗಳು 17 ವರ್ಷದ ಹುಡುಗಿಯ ಮೇಲೆ ಅತ್ಯಾಚಾರವೆಸಗಿ, ಕ್ರೂರವಾಗಿ ಕೊಲೆ ಮಾಡಲಾಗಿತ್ತು. ಇದಕ್ಕೂ ಮುನ್ನ ಲಖಿಂಪುರ ಖೇರಿಯಲ್ಲಿ 13 ವರ್ಷದ ಬಾಲಕಿಯ ಶವ ಕಬ್ಬಿನ ಹೊಲದಲ್ಲಿ ಪತ್ತೆಯಾಗಿತ್ತು. ಬಾಲಕಿಯ ಮೇಲೆ ನಿರಂತರವಾಗಿ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದರು.
ಈ ಎಲ್ಲಾ ಘಟನೆಗಳಿಂದ ಬೇಸತ್ತ ಜನ ಯೋಗಿ ಆದಿತ್ಯನಾಥ್ ಬಿಜೆಪಿ ಸರ್ಕಾರ ವಿರುದ್ಧ ಸಿಡಿದೆದ್ದರು. ಈ ಹಿನ್ನೆಲೆಯಲ್ಲಿ ಪರಿಸ್ಥಿತಿಯನ್ನು ನಿಭಾಯಿಸಲು ರಾಜ್ಯ ಸರ್ಕಾರ ಈಗ ಹಿರಿಯ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಮಹಿಳಾ ಮತ್ತು ಮಕ್ಕಳ ಸುರಕ್ಷತಾ ಸಂಘಟನೆಯನ್ನು ಸ್ಥಾಪಿಸಿದೆ.
#WATCH Lakhimpur Kheri: An accused, who was sent to Police custody after being booked under POCSO Act, flees from a petrol pump while the vehicle in which he was being taken to police station was being refuelled. (13.09.2020) pic.twitter.com/nyhiemlLey
— ANI UP/Uttarakhand (@ANINewsUP) September 14, 2020