ಶೀತಲ್ ಶೆಟ್ಟಿ ನಿರ್ದೇಶನದ ವಿಂಡೋ ಸೀಟ್ ಈಗಾಗಲೇ ಸ್ಯಾಂಡಲ್‍ವುಡ್‍ನ ಬಹು ನಿರೀಕ್ಷಿತ ಚಿತ್ರವಾಗಿ ಬಿಂಬಿತವಾಗಿದೆ. ತಿಂಗಳ ಹಿಂದಷ್ಟೇ ಈ ಸಿನಿಮಾದ ಮೋಷನ್ ಪೋಸ್ಟರ್ ಬಿಡುಗಡೆಯಾಗಿತ್ತಲ್ಲಾ? ಅದು ಮಾಡಿದ್ದ ಮ್ಯಾಜಿಕ್ಕಿನ ಬಲದಿಂದಲೇ ಪ್ರೇಕ್ಷಕರು ಮತ್ತಷ್ಟು ವಿವರಗಳಿಗಾಗಿ ಕಾದು ಕೂತಿದ್ದರು. ಅದಕ್ಕೆ ಸರಿಯಾಗಿ ಶೀತಲ್ ಶೆಟ್ಟಿ ಕೂಡಾ ಇಷ್ಟರಲ್ಲಿಯೇ ಫಸ್ಟ್ ಲುಕ್ ಅನಾವರಣಗೊಳಿಸೋದಾಗಿಯೂ ಅನೌನ್ಸ್ ಮಾಡಿದ್ದರು. ಇದೀಗ ಕಡೆಗೂ ಅದಕ್ಕೆ ಮುಹೂರ್ತ ನಿಗದಿಯಾಗಿದೆ. ಇದೇ ತಿಂಗಳ 24ರಂದು ಬೆಳಗ್ಗೆ 11 ಗಂಟೆಗೆ ಸರಿಯಾಗಿ ವಿಂಡೋ ಸೀಟ್‍ನ ಫಸ್ಟ್ ಲುಕ್ ಅನಾವರಣಗೊಳ್ಳಲಿದೆ.
ಇದೊಂದು ರೊಮ್ಯಾಂಟಿಕ್ ಥ್ರಿಲ್ಲರ್ ಜಾನರಿನ ಸಿನಿಮಾ. ಹೀಗೊಂದು ಸುಳಿವಿನಾಚೆಗೆ ಬೇರೆ ಯಾವ ಅಂಶಗಳೂ ಜಾಹೀರಾಗದಂಥಾ ಜಾಣ್ಮೆಯನ್ನು ಶೀತಲ್ ಶೆಟ್ಟಿ ಅನುಸರಿಸಿಕೊಂಡು ಬಂದಿದ್ದಾರೆ. ಆದರೆ ಈಗಾಗಲೇ ಬಿಡುಗಡೆಗೊಂಡಿರೋ ಮೋಷನ್ ಪೋಸ್ಟರ್ ಮಾತ್ರ ಅಷ್ಟ ದಿಕ್ಕುಗಳಿಂದಲೂ ನಾನಾ ಪ್ರಶ್ನೆಗಳು ಮೂಡಿಕೊಳ್ಳುವಂತೆ ಮಾಡಿಬಿಟ್ಟಿದೆ. ಅದರಲ್ಲಿ ಕಾಣಿಸಿಕೊಂಡಿದ್ದು ಅಗೋಚರ ಚಹರೆಗಳು ಮಾತ್ರ. ಅದರಲ್ಲಿ ನಾಯಕ ನಿರೂಪ್ ಭಂಡಾರಿಯ ಲುಕ್ ಹೇಗಿರಬಹುದು? ಇನ್ನುಳಿದ ಪಾತ್ರಗಳು ಯಾವ್ಯಾವ ಅವತಾರಗಳಲ್ಲಿ ಕಾಣಿಸಿಕೊಂಡಿವೆ ಎಂಬೆಲ್ಲ ಕುತೂಹಲಗಳಿದ್ದವು. ಇದೀಗ ಅದಕ್ಕೆಲ್ಲ ನಿಖರ ಉತ್ತರ ಸಿಗೋ ಕ್ಷಣಗಳು ಹತ್ತಿರಾಗುತ್ತಿವೆ. ಇದನ್ನೂ ಓದಿ: ವಿಂಡೋ ಸೀಟ್‍ನಲ್ಲಿ ಅರ್ಜುನ್ ಜನ್ಯಾರ ವಿಹಂಗಮ ಯಾನ!
ಇದು ಜಾಕ್ ಮಂಜು ನಿರ್ಮಾಣದ ಚಿತ್ರ. ಶೀತಲ್ ಶೆಟ್ಟಿ ನಿರ್ದೇಶನದ ಮೊದಲ ಚಿತ್ರವೂ ಹೌದು. ಈಗಾಗಲೇ ಶೀತಲ್ ನಟಿಯಾಗಿ ಸೈ ಅನ್ನಿಸಿಕೊಂಡಿದ್ದಾರೆ. ನಾಯಕಿಯಾಗಿಯೂ ಮಿಂಚಿದ್ದಾರೆ. ಈ ಹಿಂದೆ ಎರಡು ಕಿರು ಚಿತ್ರಗಳ ಮೂಲಕ ನಿರ್ದೇಶಕಿಯಾಗೋ ಸುಳಿವು ನೀಡಿದ್ದ, ಅವರೀಗ ಸದ್ದೇ ಇಲ್ಲದೆ ನಿರ್ದೇಶಕಿಯಾಗಿ ಆಗಮಿಸಿದ್ದಾರೆ. ಈ ಹಿಂದೆ ಎರಡೂ ಕಿರುಚಿತ್ರಗಳಲ್ಲಿಯೂ ಸೂಕ್ಷ್ಮವಂತಿಕೆಯ ಕಥಾ ಕುಸುರಿ ಮತ್ತು ಅಷ್ಟೇ ಸೂಕ್ಷ್ಮವಾದ ದೃಶ್ಯಗಳ ನೇಯ್ಗೆಗಳಿಂದ ಗಮನ ಸೆಳೆದಿದ್ದವರು ಶೀತಲ್ ಶೆಟ್ಟಿ. ಈ ಕಾರಣದಿಂದಲೇ ಅವರು ವಿಂಡೋ ಸೀಟ್‍ಗಾಗಿ ಯಾವ ಥರದ ಕಥೆಯನ್ನು ಆಯ್ಕೆ ಮಾಡಿಕೊಂಡಿರಬಹುದೆಂಬ ಕೌತುಕ ಮೂಡಿಕೊಂಡಿದೆ. ಇದೇ ತಿಂಗಳ 24ರಂದು ಅದಕ್ಕೆ ಸ್ಪಷ್ಟ ಉತ್ತರ ದೊರಕೀತೇನೋ. ಇದನ್ನೂ ಓದಿ: ವಿಂಡೋ ಸೀಟ್: ಟೈಟಲ್ ಪೋಸ್ಟರ್‌ನಲ್ಲಿದೆ ಥ್ರಿಲ್ಲರ್ ಕಥಾನಕದ ಕಂಪು!
ಇತ್ತೀಚೆಗಷ್ಟೇ ಅರ್ಜುನ್ ಜನ್ಯಾ ಈ ಸಿನಿಮಾದ ಸಂಗೀತ ಸಾರಥ್ಯ ವಹಿಸಿಕೊಂಡಿರೋ ಸುದ್ದಿ ಬಂದಿತ್ತು. ಇದೀಗ ಅದೂ ಕೂಡಾ ಅಂತಿಮ ಘಟ್ಟ ತಲುಪಿಕೊಂಡಿದೆ. ಇನ್ನುಳಿದಂತೆ ಎಲ್ಲ ಪೋಸ್ಟ್ ಪ್ರೊಡಕ್ಷನ್ ಕಾರ್ಯಗಳೂ ಸಂಪನ್ನಗೊಳ್ಳುತ್ತಿವೆ. ಇನ್ನೇನು ಕೊರೊನಾ ಕಂಟಕ ತಿಂಗಳೊಪ್ಪತ್ತಿನಲ್ಲಿಯೇ ನೀಗಿಕೊಳ್ಳುವ ನಿರೀಕ್ಷೆಗಳೂ ಇದ್ದಾವೆ. ಚಿತ್ರಮಂದಿರಗಳೆಲ್ಲ ಶೀಘ್ರದಲ್ಲಿಯೇ ಕಾರ್ಯಾರಂಭ ಮಾಡಿದರೆ ಬೇಗನೆ ವಿಂಡೋ ಸೀಟ್ ಕೂಡಾ ತೆರೆಗಾಣಲಿದೆ. ಅಂತೂ ಶೀತಲ್ ಶೆಟ್ಟಿ ಮೊದಲ ಹೆಜ್ಜೆಯಲ್ಲಿಯೇ ಭಾರೀ ಗೆಲುವು ತಮ್ಮದಾಗಿಸಿಕೊಳ್ಳೋ ಲಕ್ಷಣಗಳಂತೂ ಇದ್ದೇ ಇವೆ. ಸದ್ಯ ಎಲ್ಲರ ಚಿತ್ತ ಫಸ್ಟ್ ಲುಕ್ಕಿನತ್ತ ನೆಟ್ಟುಕೊಂಡಿದೆ.