ವಿಂಡೋ ಸೀಟ್: ಟೈಟಲ್ ಪೋಸ್ಟರ್‌ನಲ್ಲಿದೆ ಥ್ರಿಲ್ಲರ್ ಕಥಾನಕದ ಕಂಪು!

Public TV
1 Min Read
Window seat Ok

ಸಿನಿಮಾಗಳಲ್ಲಿ ಒಂದಷ್ಟು ಪಾತ್ರಗಳನ್ನು ನಿರ್ವಹಿಸುತ್ತಲೇ ನಟಿಯಾಗಿ ರೂಪುಗೊಂಡಿದ್ದವರು ಶೀತಲ್ ಶೆಟ್ಟಿ. ಈ ಹಿಂದೆ ಎರಡು ಕಿರುಚಿತ್ರಗಳನ್ನು ನಿರ್ದೇಶನ ಮಾಡೋ ಮೂಲಕ ಅವರು ನಿರ್ದೇಶಕಿಯಾಗುತ್ತ ಗಂಭೀರವಾಗಿ ಹೆಜ್ಜೆಯಿಡುತ್ತಿರುವ ಮುನ್ಸೂಚನೆ ನೀಡಿದ್ದರು. ಇದೀಗ ಯಾವ ಸದ್ದುಗದ್ದಲವೂ ಇಲ್ಲದೆ ಅವರೊಂದು ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ. ವಿಂಡೋ ಸೀಟ್ ಎಂಬ ಆಕರ್ಷಕವಾದ ಈ ಚಿತ್ರದ ಅತ್ಯಾಕರ್ಷಕ ಟೈಟಲ್ ಪೋಸ್ಟರ್ ಇದೀಗ ಲಾಂಚ್ ಆಗಿದೆ.

Sheetal Shetty 1

ಇದು ಮಂಜುನಾಥ್ ಗೌಡ (ಜಾಕ್ ಮಂಜು) ನಿರ್ಮಾಣದ ಚಿತ್ರ. ಬಹುಕಾಲದಿಂದಲೂ ಈ ಕಥೆಯನ್ನು ಸೃಷ್ಟಿಸಿ ಒಪ್ಪ ಓರಣವಾಗಿಸಿದ್ದ ಶೀತಲ್ ಶೆಟ್ಟಿ ಲಾಕ್‍ಡೌನ್‍ಗಿಂತಲೂ ಮುಂಚಿತವಾಗಿಯೇ ಚಿತ್ರೀಕರಣ ಮುಗಿಸಿಕೊಂಡಿದ್ದರು. ಇದೀಗ ಅದರ ಟೈಟಲ್ ಪೋಸ್ಟರ್ ಬಿಡುಗಡೆಗೊಂಡಿದೆ. ಅದನ್ನು ಇಡೀ ಚಿತ್ರದ ಬಗ್ಗೆ ನಾನಾ ದಿಕ್ಕುಗಳಿಂದ ಆಲೋಚನೆಗೆ ಹಚ್ಚುವಂತೆ, ಕುತೂಹಲ ಮೂಡಿಸುವಂತೆ ರೂಪಿಸಲಾಗಿದೆ. ಈ ಮೂಲವೇ ಚೆಂದದ ಕಥೆಯೊಂದರ ಹೊಳಹನ್ನೂ ಕೂಡಾ ಶೀತಲ್ ಜಾಹೀರು ಮಾಡಿದ್ದಾರೆ.

sheetal shetty

ಈ ಚಿತ್ರದಲ್ಲಿ ನಾಯಕನಾಗಿ ನಟಿಸಿರುವವರು ರಂಗಿತರಂಗ ಖ್ಯಾತಿಯ ನಿರೂಪ್ ಭಂಡಾರಿ. ಈ ರೊಮ್ಯಾಂಟಿಕ್ ಥ್ರಿಲ್ಲರ್ ಕಥೆಯನ್ನು ಅಷ್ಟೇ ಥ್ರಿಲ್ ಆಗಿ ಒಪ್ಪಿಕೊಂಡಿದ್ದ ನಿರೂಪ್ ಇಲ್ಲಿ ವಿಶಿಷ್ಟ ಪಾತ್ರವನ್ನು ನಿರ್ವಹಿಸಿದ್ದಾರಂತೆ. ಇತ್ತೀಚೆಗೆ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿರೋ ಅಮೃತಾ ಅಯ್ಯಂಗಾರ್ ಮತ್ತು ಸಂಜನಾ ಆನಂದ್ ನಾಯಕಿಯರಾಗಿ ಜೊತೆಯಾಗಿದ್ದಾರೆ. ಯೋಜನೆಯಂತೆಯೇ ಸಾಗರ ಮುಂತಾದ ರಮಣೀಯ ತಾಣಗಳ ಸುತ್ತಮುತ್ತ ಚಿತ್ರೀಕರಣವನ್ನು ನಡೆಸಲಾಗಿದೆ.

Window seat 1

ಇದೀಗ ಈ ಚಿತ್ರ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಲಾಕ್‍ಡೌನ್ ಮುಗಿದು ಎಲ್ಲವೂ ಸಹಜ ಸ್ಥಿತಿಗೆ ಮರಳುತ್ತಲೇ ಶೀತಲ್ ವಿಂಡೋ ಸೀಟಿನ ಅಚ್ಚರಿಗಳೊಂದಿಗೆ ಪ್ರೇಕ್ಷಕರನ್ನು ಮುಖಾಮುಖಿಯಾಗಲಿದ್ದಾರೆ. ಇದು ಅವರ ಪಾಲಿಗೆ ಅತ್ಯಂತ ಮಹತ್ವದ ಹೆಜ್ಜೆ. ವಿಂಡೋ ಸೀಟಿನ ಮೂಲಕ ಅವರ ಮಹಾ ಕನಸು ನನಸಾಗುತ್ತಿದೆ. ಈ ಬಗ್ಗೆ ಒಂದಷ್ಟು ವಿವರ ಕೊಡಬೇಕೆಂಬಷ್ಟರಲ್ಲಿ ಲಾಕ್‍ಡೌನ್ ಶುರುವಾಗಿತ್ತು. ಇಷ್ಟರಲ್ಲಿಯೇ ವಿಂಡೋ ಸೀಟ್‍ನ ಫಸ್ಟ್ ಲುಕ್ ಕೂಡಾ ಬಿಡುಗಡೆಗೊಳ್ಳಲಿದೆ. ಈಗ ಬಾಕಿ ಉಳಿದಿರೋ ಕೆಲಸ ಕಾರ್ಯಗಳತ್ತ ಗಮನ ಹರಿಸಿರುವ ಶೀತಲ್ ಇಷ್ಟರಲ್ಲಿಯೇ ಒಂದಷ್ಟು ಖುಷಿಯ ಸಂಗತಿಗಳನ್ನು ಪ್ರೇಕ್ಷಕರ ಮುಂದೆ ತಂದು ಹರವಲಿದ್ದಾರೆ.

Sheetal Shetty

Share This Article
Leave a Comment

Leave a Reply

Your email address will not be published. Required fields are marked *