ವಾರ್ನರ್ ಪಡೆಗೆ ಸೋಲು – ಫಸ್ಟ್ ಟೈಂ ಫೈನಲ್‍ಗೆ ಡೆಲ್ಲಿ ಎಂಟ್ರಿ

Public TV
3 Min Read
delhi dc

– ಸ್ಟೊಯಿನಿಸ್, ರಬಾಡಾ ಬೌಲಿಂಗ್ ದಾಳಿಗೆ ಹೈದ್ರಾಬಾದ್ ತತ್ತರ
– 21 ರನ್ ಅಂತರದಲ್ಲಿ 4 ವಿಕೆಟ್ ಪತನ

ಅಬುಧಾಬಿ: ಇಂದು ನಡೆದ ಕ್ವಾಲಿಫಯರ್-2 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ 17 ರನ್‍ಗಳ ಅಂತರದಲ್ಲಿ ಗೆದ್ದು ಐಪಿಎಲ್-2020ಯ ಫೈನಲ್‍ಗೆ ಎಂಟ್ರಿ ಕೊಟ್ಟಿದೆ. ಈ ಮೂಲಕ ಮಂಗಳವಾರ ನಡೆಯಲಿರುವ ಫೈನಲ್ ಅಲ್ಲಿ ಮುಂಬೈ ಇಂಡಿಯನ್ಸ್ ತಂಡದ ಜೊತೆ ಸೆಣೆಸಾಡಲಿದೆ.

ಅಬುಧಾಬಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಶಿಖರ್ ಧವನ್ ಮತ್ತು ಶಿಮ್ರಾನ್ ಹೆಟ್ಮಿಯರ್ ಅವರ ಭರ್ಜರಿ ಆಟದಿಂದ ನಿಗದಿತ 20 ಓವರಿನಲ್ಲಿ 189 ರನ್‍ಗಳನ್ನು ಪೇರಿಸಿತ್ತು. ಈ ಗುರಿಯನ್ನು ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್ ತಂಡ ತೀವ್ರ ಪೈಪೋಟಿ ನೀಡಿದರೂ ಮಾರ್ಕಸ್ ಸ್ಟೊಯಿನಿಸ್ ದಾಳಿಗೆ ಸಿಲುಕಿದ ಹೈದರಾಬಾದ್ 8 ವಿಕೆಟ್ ಕಳೆದುಕೊಂಡು 172 ರನ್ ಗಳಿಸಿತು.

ಮೊದಲ ಬಾರಿಗೆ ಫೈನಲ್ ಪ್ರವೇಶ:
ಈ ಬಾರಿಯ ಐಪಿಎಲ್ ಟೂರ್ನಿಯಲ್ಲಿ ಆರಂಭದಿಂದಲೂ ಡೆಲ್ಲಿ ಕ್ಯಾಪಿಟಲ್ಸ್ ತಂಡ ಉತ್ತಮವಾಗಿ ಆಡಿಕೊಂಡು ಬಂದಿತ್ತು. ನಾಯಕ ಶ್ರೇಯಸ್ ಐಯ್ಯರ್ ನೇತೃತ್ವದಲ್ಲಿ ಎರಡನೇ ತಂಡವಾಗಿ ಪ್ಲೇ ಆಫ್‍ಗೆ ಆಯ್ಕೆಯಾಗಿತ್ತು. ಈಗ ಹೈದರಾಬಾದ್ ವಿರುದ್ಧ ಕ್ವಾಲಿಫಯರ್-2 ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದೆ. 13 ಐಪಿಎಲ್ ಆವೃತ್ತಿಯಲ್ಲಿ ಆಡಿದ್ದರೂ ಡೆಲ್ಲಿ ತಂಡ ಎಂದು ಫೈನಲ್‍ಗೆ ಪ್ರವೇಶ ಮಾಡಿರಲಿಲ್ಲ. ಈ ಬಾರಿ ಫೈನಲ್ ಪ್ರವೇಶಿಸುವ ಮೂಲಕ ಕನಸನ್ನು ನನಸು ಮಾಡಿದೆ.

Kagiso Rabada 2

ಸ್ಟೊಯಿನಿಸ್, ರಬಾಡಾ ಬೌಲಿಂಗ್ ದಾಳಿ
ಇಂದಿನ ಪಂದ್ಯದಲ್ಲಿ ಡೆಲ್ಲಿ ವೇಗಿಗಳಾದ ಮಾರ್ಕಸ್ ಸ್ಟೊಯಿನಿಸ್, ಕಗಿಸೊ ರಬಾಡಾ ಉತ್ತಮ ಬೌಲಿಂಗ್ ದಾಳಿ ಮಾಡಿದರು. ತಮ್ಮ ಕೋಟಾದ ಮೂರು ಓವರ್ ಬೌಲ್ ಮಾಡಿದ ಸ್ಟೊಯಿನಿಸ್ 26 ರನ್ ನೀಡಿ ಮೂರು ವಿಕೆಟ್ ಕಿತ್ತರು. ಕೊನೆಯಲ್ಲಿ ಅಬ್ಬರಿಸಿದ ರಬಾಡಾ 19ನೇ ಓವರಿನಲ್ಲಿ ಮೂರು ವಿಕೆಟ್ ಪಡೆಯುವ ಮೂಲಕ ನಾಲ್ಕು ಓವರ್ ಬೌಲ್ ಮಾಡಿ 29 ರನ್ ನೀಡಿ ನಾಲ್ಕು ವಿಕೆಟ್ ಪಡೆದರು.

Kagiso Rabada

ಡೆಲ್ಲಿ ನೀಡಿದ 189 ರನ್‍ಗಳ ದೊಡ್ಡ ಮೊತ್ತವನ್ನು ಬೆನ್ನಟ್ಟಲು ಸನ್‍ರೈಸರ್ಸ್ ಹೈದರಾಬಾದ್ ತಂಡದಿಂದ ನಾಯಕ ಡೇವಿಡ್ ವಾರ್ನರ್ ಮತ್ತು ಪ್ರಿಯಮ್ ಗರ್ಗ್ ಕಣಕ್ಕಿಳಿದರು. ಆದರೆ ಡೆಲ್ಲಿ ವೇಗಿ ಕಗಿಸೊ ರಬಾಡಾ ನಾಯಕ ಡೇವಿಡ್ ವಾರ್ನರ್ ಅನ್ನು ಎರಡನೇ ಓವರ್ ಮೊದಲ ಬಾಲಿನಲ್ಲೇ ಔಟ್ ಮಾಡಿ ಹೈದರಾಬಾದ್‍ಗೆ ಆರಂಭಿಕ ಆಘಾತ ನೀಡಿದ್ದರು. ಇವರ ಔಟ್ ನಂತರ ಜೊತೆಯಾದ ಮನೀಶ್ ಪಾಂಡೆ ಮತ್ತು ಪ್ರಿಯಮ್ ಗರ್ಗ್ ಸ್ಫೋಟಕ ಆಟಕ್ಕೆ ಮುಂದಾದರು.

Sunrisers Hyderabad

ಆದರೆ 4ನೇ ಓವರ್ ನಾಲ್ಕನೇ ಬಾಲಿನಲ್ಲಿ 17 ರನ್ ಸಿಡಿಸಿದ್ದ ಪ್ರಿಯಮ್ ಗರ್ಗ್ ಮಾರ್ಕಸ್ ಸ್ಟೊಯಿನಿಸ್‍ಗೆ ಕ್ಲೀನ್ ಬೌಲ್ಡ್ ಆದರು. ನಂತರ ಇದೇ ಓವರಿನಲ್ಲಿ 21 ರನ್ ಹೊಡೆದಿದ್ದ ಮನೀಶ್ ಪಾಂಡೆ ಕೂಡ ಮಾರ್ಕಸ್ ಸ್ಟೊಯಿನಿಸ್ ಔಟ್ ಮಾಡಿದ ಪೆವಿಲಿಯನ್‍ಗೆ ಅಟ್ಟಿದರು. ನಂತರ ಜೊತೆಯಾದ ಕೇನ್ ವಿಲಿಯಮ್ಸನ್ ಮತ್ತು ಜೇಸನ್ ಹೋಲ್ಡರ್ 46 ರನ್‍ಗಳ ಜೊತೆಯಾಟವಾಡಿದರು. ಆದರೆ 11 ನೇ ಓವರ್ ನಾಲ್ಕನೇ ಬಾಲಿನಲ್ಲಿ ದೊಡ್ಡ ಹೊಡೆತಕ್ಕೆ ಕೈ ಹಾಕಿ ಜೇಸನ್ ಹೋಲ್ಡರ್ ಅವರು ಔಟ್ ಆದರು.

Shikhar Dhawan

ನಂತರ ಜೊತೆಯಾದ ಕೇನ್ ವಿಲಿಯಮ್ಸನ್ ಮತ್ತು ಅಬ್ದುಲ್ ಸಮದ್ ಐದನೇ ವಿಕೆಟ್‍ಗೆ ಅರ್ಧಶತಕದ ಜೊತೆಯಾಟವಾಡಿದರು. ಆದರೆ 16ನೇ ಓವರ್ ನಾಲ್ಕನೇ ಬಾಲಿನಲ್ಲಿ 45 ಬಾಲಿಗೆ 67 ರನ್ ಬಾರಿಸಿದ್ದ ಕೇನ್ ವಿಲಿಯಮ್ಸನ್ ಅವರು ಮಾರ್ಕಸ್ ಸ್ಟೊಯಿನಿಸ್ ಅವರಿಗೆ ಔಟ್ ಆದರು. ಇದಾದ ನಂತರ 16 ಬಾಲಿಗೆ 33 ರನ್ ಸಿಡಿಸಿ ಆಡುತ್ತಿದ್ದ ಅಬ್ದುಲ್ ಸಮದ್ ಅವರು ಕಗಿಸೊ ರಬಾಡಾ ಅವರ ಬೌಲಿಂಗ್‍ನಲ್ಲಿ ಕ್ಯಾಚ್ ಕೊಟ್ಟು ಪೆವಿಲಿಯನ್ ಸೇರಿದರು. ಇವರ ಬೆನ್ನಲ್ಲೇ ರಶೀದ್ ಖಾನ್ ಅವರು ಔಟ್ ಆದರು.

ಒಂದು ಹಂತದಲ್ಲಿ ಹೈದರಾಬಾದ್ 4 ಕೆಟ್ ಕಳೆದುಕೊಂಡು 147 ರನ್ ಗಳಿಸಿ ಗೆಲುವಿನತ್ತ ಮುನ್ನಡೆಯುತ್ತಿತ್ತು. ಆದರೆ 16.5 ಓವರಿನಲ್ಲಿ ಕೇನ್ ವಿಲಿಯಮ್ಸನ್ ಔಟ್ ಆಗುವುದರೊಂದಿಗೆ ಪತನ ಆರಂಭವಾಯಿತು. 21 ರನ್ ಅಂತರದಲ್ಲಿ 4 ವಿಕೆಟ್ ಕಳೆದುಕೊಂಡು ಪಂದ್ಯವನ್ನು ಕೈ ಚೆಲ್ಲಿತು.

Share This Article
Leave a Comment

Leave a Reply

Your email address will not be published. Required fields are marked *