ಚೆನ್ನೈ: ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ ತಾಳ್ಮೆಯ ಆಟದಿಂದಾಗಿ ಸನ್‍ರೈಸರ್ಸ್ ಹೈದರಾಬಾದ್ ತಂಡ 9 ವಿಕೆಟ್‍ಗಳ ಭರ್ಜರಿ ಜಯ ಸಾಧಿಸಿದೆ. ಈ ಮೂಲಕ ಮೊದಲ ಜಯ ದಾಖಲಿಸಿದೆ.
Advertisement
ಟಾಸ್ ಗೆದ್ದು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್, ಇನ್ನೂ 2 ಬಾಲ್ ಇರುವಾಗಲೇ ಎಲ್ಲ ವಿಕೆಟ್ ಕಳೆದುಕೊಂಡು ಕೇವಲ 120 ರನ್ ಪೇರಿಸಲಷ್ಟೇ ಶಕ್ತವಾಯಿತು. ಸುಲಭ ಗುರಿಯನ್ನು ಬೆನ್ನಟ್ಟಿದ ಸನ್‍ರೈಸರ್ಸ್ ಹೈದರಾಬಾದ್, ಇನ್ನೂ 8 ಬಾಲ್ ಇರುವಾಗಲೇ ಕೇವಲ 1 ವಿಕೆಟ್ ನಷ್ಟಕ್ಕೆ 121 ರನ್ ಗಳಿಸುವ ಮೂಲಕ 9 ವಿಕೆಟ್‍ಗಳ ಭರ್ಜರಿ ವಿಜಯ ಸಾಧಿಸಿದೆ.
Advertisement
ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ತಂಡದ ನಾಯಕ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್, ತಾಳ್ಮೆಯ ಜೊತೆಯಾಟವಾಡುವ ಮೂಲಕ ತಂಡವನ್ನು ಗೆಲುವಿನ ಹಂತಕ್ಕೆ ತಂದು ನಿಲ್ಲಿಸಿದರು. ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ವಾರ್ನರ್, 37 ರನ್ (37 ಎಸೆತ, 3 ಬೌಂಡರಿ, 1 ಸಿಕ್ಸ್) ಚಚ್ಚುವ ಮೂಲಕ ತಂಡಕ್ಕೆ ಭರ್ಜರಿ ರನ್‍ಗಳ ಮೊತ್ತದ ಕೊಡುಗೆ ನೀಡಿದರು. ಆದರೆ 10ನೇ ಓವರ್ ಆರಂಭದಲ್ಲಿ ವಾರ್ನರ್ ಕ್ಯಾಚ್ ನೀಡುವ ಮೂಲಕ ಪೆವಿಲಿಯನ್ ಸೇರಿದರು.
Advertisement
Advertisement
ಅಲ್ಪ ಗುರಿಯಾಗಿದ್ದರಿಂದ ಕೂಲ್ ಆಗಿಯೇ ಆಡಿದ ಸನ್‍ರೈಸರ್ಸ್ ಹೈದರಾಬಾದ್, ವಿಕೆಟ್ ಕಾಯ್ದುಕೊಂಡು ನಿಧಾನಗತಿಯಲ್ಲೇ ರನ್ ಪೇರಿಸಿತು. ವಾರ್ನರ್ ಬಳಿಕ ಜಾನಿ ಬೈರ್ಸ್ಟೋವ್ ಗೆ ಜೊತೆಯಾದ ಕೇನ್ ವಿಲಿಯಮ್ಸನ್ ವಿಕೆಟ್ ಕಾಯ್ದುಕೊಂಡು ಪಂದ್ಯ ಮುಗಿಯುವ ವರೆಗೆ ಆಡಿದರು. ಜಾನಿ ಬೈರ್‌ಸ್ಟೋವ್ ಔಟಾಗದೆ 63 ರನ್(56 ಎಸೆತ, 4 ಬೌಂಡರಿ, 3 ಸಿಕ್ಸ್) ಚಚ್ಚಿದರೆ, ಕೇನ್ ವಿಲಿಯಮ್ಸನ್ 16 ರನ್ (19 ಎಸೆತ) ಬಾರಿಸಿ ತಂಡವನ್ನು ಗೆಲ್ಲಿಸಿದರು.
ವಾರ್ನರ್, ಜಾನಿ ಬೈರ್ ಸ್ಟೋವ್ ಜೊತೆಯಾಟ:
ತಾಳ್ಮೆಯ ಜೊತೆಯಾಟವಾಡುತ್ತಿದ್ದ ಡೇವಿಡ್ ವಾರ್ನರ್ ಹಾಗೂ ಜಾನಿ ಬೈರ್‌ಸ್ಟೋವ್ 73 ರನ್ (64 ಎಸೆತ) ಚಚ್ಚುವ ಮೂಲಕ ತಂಡಕ್ಕೆ ಬೃಹತ್ ರನ್‍ಗಳ ಮೊತ್ತವನ್ನು ಕೊಡುಗೆಯಾಗಿ ನೀಡಿದರು. ವಾರ್ನರ್ ಪೆವಿಲಿಯನ್ ಸೇರುತ್ತಿದ್ದಂತೆ. ಜಾನಿ ಬೈರ್ಸ್ಟೋವ್ ಗೆ ಸಾಥ್ ನೀಡಿದ ಕೇನ್ ವಿಲಿಯಮ್ಸನ್ ವಿಕೆಟ್ ಕಾಯ್ದುಕೊಂಡರು. ಇಬ್ಬರ ಜೊತೆಯಾಟದಲ್ಲಿ 48 ರನ್ (52 ಎಸೆತ) ಸಿಡಿಸಿದರು.
ಯುವ ಬೌಲರ್ ಖಲೀಲ್ ಅಹ್ಮದ್ ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ್ದು, 4 ಓವರ್ ಬೌಲಿಂಗ್‍ನಲ್ಲಿ 21 ರನ್ ನೀಡಿ, 3 ವಿಕೆಟ್ ಪಡೆದು ಮಿಂಚಿದ್ದಾರೆ. ಅಹ್ಮದ್ ಬೌಲಿಂಗ್ ದಾಳಿಯಿಂದಾಗಿ ಪಂಜಾಬ್ ಕಿಂಗ್ಸ್ ತಂಡವನ್ನು ಕಡಿಮೆ ರನ್‍ಗಳ ಮೊತ್ತಕ್ಕೆ ಕಟ್ಟಿಹಾಕಲು ಸಾಧ್ಯವಾಗಿದೆ.
ಪಂಜಾಬ್ ಕಿಂಗ್ಸ್ ಪರವಾಗಿ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ತಂಡದ ನಾಯಕ ಕೆ.ಎಲ್.ರಾಹುಲ್ ಹಾಗೂ ಮಾಯಾಂಕ್ ಅಗರ್ವಾಲ್ ತಾಳ್ಮೆಯ ಆಟಕ್ಕೆ ಮುಂದಾದರು. ಹೀಗಿರುವಾಗಲೇ 3ನೇ ಓವರ್ ಆರಂಭದಲ್ಲಿ ಕೆ.ಎಲ್.ರಾಹುಲ್ ಕೇವಲ 4 ರನ್ (6 ಎಸೆತ) ಗಳಿಸಿ ಕ್ಯಾಚ್ ನೀಡಿದರು.
ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಿದ್ದ ಮಾಯಾಂಕ್ ಅಗರ್ವಾಲ್ ಸಹ 22 (25 ಎಸೆತ, 2 ಬೌಂಡರಿ) ಸಿಡಿಸಿ 6ನೇ ಓವರ್ ಕೊನೆಯಲ್ಲಿ ಪೆವಿಲಿಯನ್ ಸೇರಿದರು. ನಿಕೋಲಸ್ ಪೂರನ್ ಸಹ 7ನೇ ಓವರ್ ಮೊದಲ ಬಾಲ್‍ಗೆ ವಿಕೆಟ್ ಒಪ್ಪಿಸಿ ಸೊನ್ನೆ ಸುತ್ತಿದರು. ಎರಡು ಪ್ರಮುಖ ವಿಕೆಟ್ ಕಳೆದುಕೊಂಡ ಪಂಜಾಬ್ ಕಿಂಗ್ಸ್‍ಗೆ ಭಾರೀ ಆಘಾತವಾಯಿತು. ಕ್ರಿಸ್ ಗೇಲ್ ಸಹ 15 ರನ್(17 ಎಸೆತ, 2 ಬೌಂಡರಿ) ಬಾರಿಸಿ ವಿಕೆಟ್ ಒಪ್ಪಿಸಿದರು. ಈ ಮೂಲಕ ಕಷ್ಟದಲ್ಲಿದ್ದ ತಂಡವನ್ನು ಮೇಲೆತ್ತುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದ ಅಭಿಮಾನಿಗಳಿಗೆ ಬೇಸರ ಮೂಡಿಸಿದರು.
11ನೇ ಓವರ್‍ನಲ್ಲಿ ತಂಡದ ಆಪತ್ಬಾಂಧವನಂತೆ ಆಗಮಿಸಿದ ಶಾರುಖ್ ಖಾನ್, ಉತ್ತಮ ಬ್ಯಾಟಿಂಗ್ ಪ್ರದರ್ಶನದ ಮೂಲಕ ತಂಡದ ಮೊತ್ತವನ್ನು ಹೆಚ್ಚಿಸಲು ಯತ್ನಿಸಿದರು. ಆದರೆ 22 ರನ್(17 ಎಸೆತ, 2 ಸಿಕ್ಸ್) ಚಚ್ಚಿ 18ನೇ ಓವರ್ ಆರಂಭದಲ್ಲಿ ಕ್ಯಾಚ್ ನೀಡಿದರು.
19ನೇ ಓವರ್ ನಲ್ಲಿ 2 ವಿಕೆಟ್
ದೀಪಕ್ ಹೂಡ 13 ರನ್ (11 ಎಸೆತ, 2 ಬೌಂಡರಿ) ಸಿಡಿಸಿ 11.3ನೇ ಓವರ್ ನಲ್ಲಿ ಪೆವಿಲಿಯನ್ ಸೇರಿದರು. ಮೊಯ್ಸೆಸ್ ಹೆನ್ರಿಕ್ಸ್ 14 ರನ್(17 ಎಸೆತ) ಹೊಡೆದು ವಿಕೆಟ್ ಒಪ್ಪಿಸಿದರು. ಫೇಬಿಯೆನ್ ಆಲೆನ್ 6 ರನ್ (11 ಎಸೆತ) ಹೊಡೆದು ಔಟಾದರು. ಮುರುಗನ್ ಅಶ್ವಿನ್ 9 ರನ್ (10 ಎಸೆತ, 1 ಬೌಂಡರಿ) ಹೊಡೆದು 19ನೇ ಓವರ್ ಆರಂಭದಲ್ಲಿ ಔಟಾದರು. ಬಳಿಕ ಮೊಹಮ್ಮದ್ ಶಮಿ ಸಹ 3 ರನ್ (3 ಎಸೆತ) ಬಾರಿಸಿ ಇದೇ ಓವರ್‍ನಲ್ಲಿ ರನ್ ಔಟ್ ಆದರು. ಈ ಮೂಲಕ ಪಂಜಾಬ್ ಇನ್ನೂ 2 ಬಾಲ್ ಇರುವಾಗಲೇ ಆಲ್‍ಔಟ್ ಆಗಿ 120 ರನ್ ಮಾತ್ರ ದಾಖಲಿಸಿತು.