ರಾಯಚೂರು: ವಾಯುಭಾರ ಕುಸಿತದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಗೆ ರಾಯಚೂರು ಜಿಲ್ಲೆಯೂ ತತ್ತರಿಸಿದೆ. ಗಾಳಿ ಸಹಿತ ಸುರಿದ ಮಳೆಯಿಂದಾಗಿ ಜಿಲ್ಲೆಯ ಮಾನ್ವಿ, ಲಿಂಗಸುಗೂರು, ರಾಯಚೂರು ತಾಲೂಕುಗಳಲ್ಲಿ ಕೋಟ್ಯಾಂತರ ರೂಪಾಯಿ ಬೆಳೆಹಾನಿಯಾಗಿದೆ. ಮುಖ್ಯವಾಗಿ ಹತ್ತಿ, ಭತ್ತ, ತೊಗರಿ ಬೆಳೆ ನೀರು ಪಾಲಾಗಿದೆ. ಕಾಳು ಕಟ್ಟಿದ್ದ ಭತ್ತದ ಬೆಳೆ ಸಂಪೂರ್ಣವಾಗಿ ನೆಲಕ್ಕಚ್ಚಿದ್ದರಿಂದ ಫಸಲು ರೈತರ ಕೈ ತಪ್ಪಿದೆ. ಕೆರೆಗಳು ತುಂಬಿ ಜಮೀನುಗಳಿಗೆ ನೀರು ಹರಿದು ಹೊಲಗಳೆ ಕೆರೆಗಳಂತಾಗಿವೆ. ಸದ್ಯ ಜಿಲ್ಲೆಯಲ್ಲಿ ಮಳೆ ನಿಂತರೂ ಮಳೆಯ ಪರಿಣಾಮದಿಂದ ರೈತರು ತತ್ತರಿಸಿ ಹೋಗಿದ್ದಾರೆ.
Advertisement
ಇನ್ನೂ ಮಳೆ ಬಳಿಕ ಈಗ ಜಿಲ್ಲೆಯಲ್ಲಿ ಕೃಷ್ಣಾ ನದಿಯ ಪ್ರವಾಹ ಶುರುವಾಗಿದೆ. ನದಿಯಲ್ಲಿ ನೀರು ಹೆಚ್ಚಳವಾಗಿದ್ದರಿಂದ ಜಮೀನುಗಳಿಗೆ ನೀರು ನುಗ್ಗಿದೆ. ರಾಯಚೂರು ತಾಲೂಕಿನಲ್ಲಿ ಸದ್ಯ ಕೃಷ್ಣ ನದಿಯಲ್ಲಿ 4.40 ಲಕ್ಷ ಕ್ಯೂಸೆಕ್ ನೀರು ಹರಿಯುತ್ತಿದೆ. ಭೀಮಾ ನದಿಯಿಂದ ಹರಿದು ಬರುತ್ತಿರುವ 2.85 ಲಕ್ಷ ಕ್ಯೂಸೆಕ್ ಹಾಗೂ ನಾರಾಯಣಪುರದ ಬಸವಸಾಗರ ಜಲಾಶಯದಿಂದ ಹೊರಬಿಟ್ಟ 1.60 ಲಕ್ಷ ಕ್ಯೂಸೆಕ್ ನೀರು ಪ್ರವಾಹ ಸೃಷ್ಟಿಸುವ ಸಾಧ್ಯತೆಯಿದೆ. ಕೃಷ್ಣಾ ಭೀಮಾ ಎರಡು ನದಿಗಳು ರಾಯಚೂರಿನ ಕಾಡ್ಲೂರು ಬಳಿ ಸೇರುತ್ತಿವೆ ಹೀಗಾಗಿ ಕೃಷ್ಣೆಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ.
Advertisement
Advertisement
ಕೃಷ್ಣಾ ಪ್ರವಾಹದಿಂದ ನದಿ ದಡದಲ್ಲಿ ಪಂಪುಸೆಟ್ಟುಗಳು ನೀರು ಪಾಲಾಗಿವೆ. ಉಳಿದ ಪಂಪ್ ಸೆಟ್ಟುಗಳನ್ನು ತೆಪ್ಪದಲ್ಲಿ ತೆರಳಿ ರೈತರು ಹೊರ ತೆಗೆಯುತ್ತಿದ್ದಾರೆ. ನದಿ ಪಾತ್ರದಲ್ಲಿನ ಜಮೀನುಗಳು ಸಂಪೂರ್ಣ ಜಲಾವೃತವಾಗಿವೆ. ರಾಯಚೂರು ತಾಲೂಕಿನ ಗಂಜಳ್ಳಿ, ದೇವಸಗೂರು, ಕರೆಕಲ್, ಕೊರ್ವಿಹಳ್ಳಿ, ಕೊರ್ತಕುಂದಾದ ಜಮೀನಿಗೆ ನೀರು ನುಗ್ಗಿದೆ. ನದಿಗೆ ಇನ್ನೂ ಹೆಚ್ಚಿನ ಪ್ರಮಾಣದ ನೀರು ಬಿಡುವ ಸಾಧ್ಯತೆಯಿದ್ದು ಜನರಲ್ಲಿ ಆತಂಕ ಮನೆಮಾಡಿದೆ.