ವಿಜಯಪುರ: ಅನೇಕ ದಿನಗಳಿಂದ ರಾಜ್ಯದ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದು, ಜನರ ಜೀವನ ಅಸ್ತವ್ಯಸ್ತವಾಗುತ್ತಿದೆ. ತಡರಾತ್ರಿ ವಿಜಯಪುರ ಜಿಲ್ಲೆಯ ಹಲವೆಡೆ ಮಳೆ ಆಗಿದೆ.
ಭಾನುವಾರ ಸುರಿದ ಭಾರೀ ಮಳೆಗೆ ಡೋಣಿ ನದಿಯ ಆರ್ಭಟದಿಂದ ಹಳ್ಳಗಳು ಉಕ್ಕಿ ಹರಿಯುತ್ತಿವೆ. ತಾಳಿಕೋಟೆ ತಾಲೂಕಿನ ಮೂಕಿಹಾಳ, ಹಡಗಿನಾಳ, ಕುಚಬಾಳ, ಬಾವೂರು, ಕಲ್ಲದೇವನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಬಿತ್ತನೆಯಾದ ಜಮೀನುಗಳು ಜಲಾವೃತವಾಗಿದೆ. ಅಲ್ಲದೇ ಡೋಣಿ ನದಿಯ ಎಡ-ಬಲ ಜಮೀನುಗಳು ಸಂಪೂರ್ಣ ಜಲಾವೃತವಾಗಿದೆ.
ವರುಣನ ಆರ್ಭಟಕ್ಕೆ ಮುದ್ದೇಬಿಹಾಳ ತಾಲೂಕಿನ ಅಡವಿ ಹುಲಗಬಾಳ-ತಾಂಡಾ ಸಂಪರ್ಕಿಸುವ ಸೇತುವೆ ಸಂಪೂರ್ಣ ಜಲಾವೃತಗೊಂಡಿದೆ. ಇದರಿಂದ ಎರಡು ಗ್ರಾಮಗಳ ರಸ್ತೆ ಸಂಚಾರ ಬಂದ್ ಆಗಿದ್ದು, ಹುಲಗಬಾಳ ತಾಂಡಾದ ಸಂಪರ್ಕ ಕಟ್ ಆಗಿದೆ.
ತಾಳಿಕೋಟೆಯ ಸೋಗಲಿ ಹಳ್ಳದ ಆರ್ಭಟಕ್ಕೆ ರೈತರು ಕಂಗಾಲಾಗಿದ್ದು, ನಲತವಾಡ ಗ್ರಾಮದ ಕೆಲ ಬಡಾವಣೆಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಬಡಾವಣೆಯ ರಸ್ತೆಯಲ್ಲಿ ಮೊಣಕಾಲುವರೆಗೂ ನೀರು ಹರಿಯುತ್ತಿದೆ.