– ರಂಗು ರಂಗಿನ ಸೀರೆ, ಆಭರಣಗಳ ಬದಲು ಪಿಪಿಇ ಕಿಟ್ ಧರಿಸಿದ ವಧು
– ಸೋಂಕಿತರು, ಆಸ್ಪತ್ರೆ ಸಿಬ್ಬಂದಿಗೆ ವಿವಾಹ ಭೋಜನ
ತಿರುವನಂತಪುರಂ: ದೇಶಾದ್ಯಂತ ಕೊರೊನಾ ಪ್ರಕರಣಗಳು ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಇದರ ನಡುವೆಯೇ ಹಲವರು ಸರಳವಾಗಿ ವಿವಾಹವಾಗುತ್ತಿದ್ದಾರೆ. ಆದರೆ ಕೇರಳದಲ್ಲಿ ಜೋಡಿಯೊಂದು ಕೊರೊನಾ ವಾರ್ಡ್ ನಲ್ಲೇ ಮದುವೆಯಾಗುವ ಮೂಲಕ ಗಮನಸೆಳೆದಿದೆ.
ಕೇರಳದ ಆಲಪ್ಪುಳ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ವಿಭಿನ್ನ ವಿವಾಹಕ್ಕೆ ಸಾಕ್ಷಿಯಾಗಿದ್ದು, ಜೋಡಿಯೊಂದು ಕೊರೊನಾ ಸೋಂಕಿತರು ಹಾಗೂ ಆಸ್ಪತ್ರೆ ಸಿಬ್ಬಂದಿ ಮಧ್ಯೆ ಕೊರೊನಾ ವಾರ್ಡ್‍ನಲ್ಲೇ ವಿವಾಹವಾಗಿದೆ. ವಧು ವಿವಾಹದ ಸಂಭ್ರದಲ್ಲಿ ರಂಗು ರಂಗಿನ ಸೀರೆ, ಒಡವೆ ಸೇರಿದಂತೆ ವಿವಿಧ ರೀತಿಯ ಅಲಂಕಾರದ ಬದಲು ಪಿಪಿಇ ಕಿಟ್ ಧರಿಸಿ ವಿವಾಹ ಜೀವನಕ್ಕೆ ಕಾಲಿಸಿದ್ದಾರೆ.
Advertisement
Advertisement
ಶರತ್ ಮೋನ್ ಎಸ್ ಹಾಗೂ ಅಭಿರಾಮಿ ಅವರ ವಿವಾಹ ಏಪ್ರಿಲ್ 25ಕ್ಕೆ ಫಿಕ್ಸ್ ಆಗಿತ್ತು. ಎರಡೂ ಕಡೆಯ ಕುಟುಂಬಸ್ಥರು ವಿವಾಹದ ಸಿದ್ಧತೆಯಲ್ಲಿ ಫುಲ್ ಬ್ಯುಸಿಯಾಗಿದ್ದರು. ಈ ಸಂದರ್ಭದಲ್ಲಿ ಆಲಪ್ಪುಳ ಜಿಲ್ಲೆಯ ಓಣಂಪಲ್ಲಿಯ ವರ ಶರತ್ ಹಾಗೂ ಅವರ ತಾಯಿ ಜಿಜಿ ಶಶಿಧರನ್ ಅವರಿಗೆ ಕೊರೊನಾ ಸೋಂಕು ತಗುಲಿತು. ಆದ್ದರಿಂದ ಶರತ್ ಅವರೊಂದಿಗೆ ತಾಯಿ ಸಹ ಆಸ್ಪತ್ರೆಗೆ ದಾಖಲಾದರು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ನಿಶ್ಚಯವಾದ ದಿನಾಂಕದಂದೇ ವಿವಾಹವಾಗಲು ಜೋಡಿ ನಿರ್ಧರಿಸಿದ್ದು, ಏಪ್ರಿಲ್ 25ರಂದು ಎಲ್ಲ ಕೊರೊನಾ ನಿಯಮಗಳನ್ನು ಪಾಲಿಸುವ ಮೂಲಕವೇ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
Advertisement
Advertisement
ವಧು ಅಭಿರಾಮಿ ಅವರು ಆಲಪ್ಪುಳದ ವಡಕ್ಕನಾರ್ಯಡ್ ನವರಾಗಿದ್ದು, ವಿವಾಹವಾಗಲು ರಂಗು ರಂಗಿನ ಸೀರೆ, ಒಡವೆಯ ಬದಲು ಕೇವಲ ಒಂದು ಜೊತೆ ಲಿವಿಯೊಲೆ ಮಾತ್ರ ಹಾಕಿಕೊಂಡು, ಪಿಪಿಇ ಕಿಟ್ ಧರಿಸಿ ಫುಲ್ ಪ್ಯಾಕ್ ಆಗಿ ಆಸ್ಪತ್ರೆಗೆ ತೆರಳಿದ್ದು, ವರ ಶರತ್ ಸಹ ಒಂದು ನೀಲಿ ಅಂಗಿ ಹಾಗೂ ಬಿಳಿ ಲುಂಗಿ ಮೇಲೆಯೇ ವಿವಾಹವಾಗಿದ್ದಾರೆ. ಶರತ್ ಅವರ ತಾಯಿಯ ಸಮ್ಮುಖದಲ್ಲಿ ಹಾರ ಬದಲಿಸಿಕೊಂಡು ವಿವಾಹ ಜೀವನಕ್ಕೆ ಕಾಲಿಟ್ಟಿದ್ದಾರೆ.
ಶರತ್ ಕತಾರ್‍ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷ ಸಹ ಅವರು ಕತಾರ್‍ನಿಂದ ಸಮಯಕ್ಕೆ ಸರಿಯಾಗಿ ಮರಳದ ಕಾರಣ ವಿವಾಹವನ್ನು ಮುಂದೂಡಲಾಗಿತ್ತು. ಹೀಗಾಗಿ ಎರಡನೇ ಬಾರಿಯೂ ವಿವಾಹವನ್ನು ಮುಂದೂಡುವುದು ಬೇಡ ಎಂದು ಕುಟುಂಬದವರು ನಿರ್ಧರಿಸಿ ವರನಿಗೆ ಕೊರೊನಾ ಸೋಂಕು ತಗಲಿದರೂ ಆಸ್ಪತ್ರೆಯಲ್ಲೇ ಮದುವೆ ಮಾಡಿಸಿದ್ದಾರೆ. ಹಿಂದೆಯೇ ಗುರುತಿಸಿದಂತೆ ಭಾನುವಾರ ಒಳ್ಳೆಯ ಮುಹೂರ್ತಕ್ಕೆ ತಾಳಿ ಕಟ್ಟಿಸಿದ್ದಾರೆ. ಮತ್ತೆ ಮುಂದೂಡಿದರೆ ತಡವಾಗುತ್ತದೆ ಎಂಬ ಆತಂಕದಿಂದ ಇದೇ ಮುಹೂರ್ತದಲ್ಲಿ ವಿವಾಹ ಮಾಡಲು ನಿರ್ಧರಿಸಿದೆವು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
ಶರತ್ ಅವರು ಮಾರ್ಚ್ 22ರಂದು ಕತಾರ್‍ನಿಂದ ಕೇರಳಕ್ಕೆ ಹಿಂದಿರುಗಿದ್ದು, 10 ದಿನಗಳ ಹೋಮ್ ಕ್ವಾರಂಟೈನ್ ಬಳಿಕ ಸಹ ಅವರ ವರದಿ ನೆಗೆಟಿವ್ ಬಂದಿತ್ತು. ಬಳಿಕ ಏಪ್ರಿಲ್ 21ರಂದು ವಿವಾಹಕ್ಕಾಗಿ ಎಲ್ಲ ತಯಾರಿ ಮಾಡಿಕೊಂಡ ಬಳಿಕ ಶರತ್ ಹಾಗೂ ಅವರ ತಾಯಿ ಜಿಜಿಯವರಿಗೆ ಉಸಿರಾಟದ ಸಮಸ್ಯೆ ಕಾಡಿದೆ. ಬಳಿಕ ಟೆಸ್ಟ್ ಮಾಡಿಸಿದಾಗ ಕೊರೊನಾ ಪಾಸಿಟಿವ್ ಬಂದಿದೆ. ಹೀಗಾಗಿ ಆಲಪ್ಪುಳ ಮೆಡಿಕಲ್ ಕಾಲೇಜ್ ಹಾಗೂ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ ಶರತ್ ಅವರಿಗೆ ಬೇರೆ ಯಾವುದೇ ತೊಂದರೆ ಇಲ್ಲ, ಗುಣಮುಖರಾದ ಬಳಿಕ ಒಂದು ವಾರದ ನಂತರ ಡಿಸ್ಚಾರ್ಜ್ ಆಗಲಿದ್ದಾರೆ ಎನ್ನಲಾಗಿದೆ.
ವರ, ವಧುವಿನ ಜೊತೆಗೆ ಜಿಜಿ ಹಾಗೂ ಅಭಿರಾಮಿ ಅವರ ಚಿಕ್ಕಪ್ಪ ಆಸ್ಪತ್ರೆ ವಾರ್ಡ್‍ನಲ್ಲಿ ನಡೆದ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಶರತ್ ಅವರ ತಂದೆ ಶಶಿಧರನ್ ಹಾಗೂ ಇಬ್ಬರು ಸಹೋದರಿಯರು ಹೋಮ್ ಕ್ವಾರಂಟೈನ್‍ನಲ್ಲಿದ್ದಾರೆ.
ಈ ಕುರಿತು ಕುಟುಂಬಸ್ಥರು ಪ್ರತಿಕ್ರಿಯಿಸಿದ್ದು, ನಿಗದಿತ ದಿನಾಂಕದಂದು ವಿವಾಹ ನಡೆಸಲು ಎನ್‍ಸಿಪಿ ನಾಯಕ ಥಾಮಸ್ ಕೆ, ಆಲಪ್ಪುಳ ಡಿಸಿ ಎ ಎಲೆಕ್ಸಾಂಡರ್, ಎಂಸಿಎಚ್ ಸುಪರಿಂಟೆಂಡೆಂಟ್ ಹಾಗೂ ಇತರರು ಸಹಾಯ ಮಾಡಿದ್ದಾರೆ ಎಂದು ತಿಳಿಸಿದರು.
ಕುಟುಂಬಸ್ಥರು ವಾರ್ಡ್‍ನಲ್ಲಿನ ಎಲ್ಲ ಕೊರೊನಾ ಸೋಂಕಿತರು ಹಾಗೂ ಆಸ್ಪತ್ರೆ ಸಿಬ್ಬಂದಿಗೆ ವಿವಾಹದ ಭೋಜನವನ್ನು ಸಹ ಹಾಕಿಸಿದ್ದಾರೆ. ವಿವಾಹದ ಬಳಿಕ ವಧು ಅಭಿರಾಮಿ ಮನೆಗೆ ಹಿಂದಿರುಗಿದ್ದು, ಕುಟುಂಬದ ಯಾವುದೇ ಸದಸ್ಯರು ವಿವಾಹದಲ್ಲಿ ಭಾಗವಹಿಸದ ಕಾರಣ ಸ್ವಲ್ಪ ದುಃಖವಾಯಿತು, ಆದರೆ ಅದಕ್ಕಿಂತ ಹೆಚ್ಚಾಗಿ ಖುಷಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.