ಶಿವಮೊಗ್ಗ: ಎತ್ತುಗಳಿಗೆ ನೀರು ಕುಡಿಸಲು ವರದಾ ನದಿಗೆ ತೆರಳಿದ್ದ ಯುವಕ ಕಾಲು ಜಾರಿ ಬಿದ್ದು ಮೃತಪಟ್ಟ ಘಟನೆ ಜಿಲ್ಲೆಯ ಸೊರಬ ತಾಲೂಕಿನ ಭದ್ರಾಪುರ ಗ್ರಾಮದಲ್ಲಿ ನಡೆದಿದೆ.
ಮೃತ ಯುವಕನನ್ನು ಮಹೇಶ್(25) ಎಂದು ಗುರುತಿಸಲಾಗಿದೆ. ಮೃತ ಮಹೇಶ್ ಗುರುವಾರ ಸಂಜೆ ಎತ್ತುಗಳಿಗೆ ನೀರು ಕುಡಿಸಲು ವರದಾ ನದಿಗೆ ತೆರಳಿದ್ದಾಗ ಕಾಲು ಜಾರಿ ನದಿಗೆ ಬಿದ್ದಿದ್ದಾರೆ. ಈ ವೇಳೆ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿ, ನದಿಯಲ್ಲಿ ಮುಳುಗಿದ್ದ ಯುವಕನಿಗಾಗಿ ಶೋಧ ಕಾರ್ಯ ಕೈಗೊಂಡಿದ್ದರು. ಆದರೆ ಯುವಕ ಪತ್ತೆಯಾಗಲಿಲ್ಲ.
ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶುಕ್ರವಾರ ಸಹ ಶೋಧ ಕಾರ್ಯ ಮುಂದುವರಿಸಿದ್ದರು. ಶುಕ್ರವಾರ ಮಧ್ಯಾಹ್ನ ಯುವಕನ ಶವ ನದಿಯಲ್ಲಿ ಪತ್ತೆಯಾಗಿದೆ. ಅಗ್ನಿಶಾಮಕ ಸಿಬ್ಬಂದಿ ಮೃತ ಯುವಕನ ಶವವನ್ನು ಹೊರಗೆ ತೆಗೆದಿದ್ದಾರೆ. ಘಟನೆ ಕುರಿತು ಸೊರಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.