ಲಿಂಬೆ ಅಭಿವೃದ್ಧಿ ಮಂಡಳಿ ಉತ್ತೇಜನಕ್ಕೆ ವಿವಿಧ ಸೌಲಭ್ಯ ಕಲ್ಪಿಸಲು ತೋಟಗಾರಿಕೆ ಸಚಿವರಿಗೆ ಮನವಿ

Public TV
3 Min Read
r shankar

ವಿಜಯಪುರ: ಇಂಡಿಯಲ್ಲಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಗೆ ಸ್ವತಂತ್ರವಾದ ಕಟ್ಟಡ (ಟ್ರೈನಿಂಗ್ ಸೆಂಟರ್, ಮಾರ್ಕೆಟಿಂಗ್, ಮಣ್ಣು ನೀರು ಪರಿಶೀಲನಾ ಲ್ಯಾಬೋರೆಟರಿ ಕೇಂದ್ರ) ನಿರ್ಮಿಸಲು 5 ಕೋಟಿ ಅನುದಾನ ನೀಡಲು ಹಾಗೂ ಇನ್ನಿತರ ಬೇಡಿಕೆಗಳ ಬಗ್ಗೆ ಲಿಂಬೆ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಅಶೋಕ್ ಎಸ್ ಅಲ್ಲಾಪೂರ್ ಅವರು ತೋಟಗಾರಿಕೆ ಹಾಗೂ ರೇಷ್ಮೆ ಖಾತೆ ಸಚಿವ ಆರ್. ಶಂಕರ ಅವರಿಗೆ ಬುಧವಾರ ಬೆಂಗಳೂರನಲ್ಲಿ ಮನವಿ ಸಲ್ಲಿಸಿದ್ದಾರೆ.

R Shankar medium

ಭಾರತವು ಲಿಂಬೆ ಹಣ್ಣಿನ ಉತ್ಪಾದನೆಯಲ್ಲಿ ಪ್ರಪಂಚದಲ್ಲಿಯೇ 3ನೇ ಸ್ಥಾನ ಪಡೆದಿದ್ದು, ಮೊದಲನೇ ಸ್ಥಾನದಲ್ಲಿ ಚೈನಾ ಇದ್ದರೆ, ಎರಡನೇ ಸ್ಥಾನದಲ್ಲಿ ಮೆಕ್ಸಿಕೊ ಇದೆ. ಕರ್ನಾಟಕವು ದೇಶದ ಲಿಂಬೆ ಉತ್ಪಾದನೆಯಲ್ಲಿ 4ನೇ ಸ್ಥಾನದಲ್ಲಿದ್ದು, ಆಂಧ್ರಪ್ರದೇಶ, ಮಹಾರಾಷ್ಟ್ರ ಹಾಗೂ ಗುಜರಾತ್ ರಾಜ್ಯಗಳು ಮುಂಚೂಣಿಯಲ್ಲಿದೆ. ಕರ್ನಾಟಕದಲ್ಲಿ ಸುಮಾರು 21,660 ಹೆಕ್ಟೆರ್ ಪ್ರದೇಶದಲ್ಲಿ ಲಿಂಬೆ ಬೆಳೆಯನ್ನು ಬೆಳೆಯುತ್ತಿದ್ದು, ಲಿಂಬೆ ಒಂದು ಪ್ರಮುಖ ವಾಣಿಜ್ಯ ಬೆಳೆಯಾಗಿದೆ.

i lemon

ಕರ್ನಾಟಕದಲ್ಲಿ ಬೆಳೆಯುವ ಲಿಂಬೆ ವಿಶೇಷವಾಗಿ ವಿಜಯಪುರ ಜಿಲ್ಲೆಯಲ್ಲಿ ಬೆಳೆಯುವ ‘ಖಾಗಜಿ’ ತಳಿಯ ಲಿಂಬೆಯು ಉತ್ತರ ಭಾರತ ಹಾಗೂ ಗಲ್ಫ್ ದೇಶಗಳಲ್ಲಿ ಹೆಚ್ಚಿನ ಬೇಡಿಕೆ ಹೊಂದಿರುತ್ತದೆ. ಆದರೆ, ಇತ್ತೀಚಿನ ದಿನಗಳಲ್ಲಿ ಲಿಂಬೆ ಬೆಳೆಗಾರರಿಗೆ ಮಾರುಕಟ್ಟೆಯ ಅನಿಶ್ಚಿತ ದರದಿಂದ ಮಧ್ಯವರ್ತಿಗಳ ಹಾವಳಿಯಿಂದ ಹಾಗೂ ನೀರಿನ ಅಭಾವದಿಂದ ಸಂಕಷ್ಟಕ್ಕೆ ಸಿಲುಕಿಕೊಂಡಿದ್ದಾರೆ. ಇದನ್ನೆಲ್ಲ ಮನಗೊಂಡ ಘನತೆಯುಕ್ತ ಕರ್ನಾಟಕ ಸರಕಾರ 2017 ರಲ್ಲಿ ಲಿಂಬೆ ಬೆಳೆಗಾರರಿಗೆ ಅನುಕೂಲವಾಗಲು ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಯನ್ನು ಇಂಡಿಯಲ್ಲಿ ಸ್ಥಾಪಿಸಿದ್ದು, ಸದರಿ ಮಂಡಳಿಯ ಬೇಡಿಕೆಗಳು ಈ ಕೆಳಗಿನಂತೆ ಮಾನ್ಯ ಸಚಿವರ ಗಮನಕ್ಕೆ ತಂದಿದ್ದಾರೆ.

lemon2

* ಲಿಂಬೆ ಹಣ್ಣನ್ನು ಬೆಂಬಲ ಬೆಲೆಯೊಂದಿಗೆ ಖರೀದಿಸಿ, ಲಿಂಬೆ ಬೆಳೆಗಾರರನ್ನು ಪ್ರೋತ್ಸಾಹಿಸಬೇಕು.
* ಇಂಡಿ, ಸಿಂಧಗಿ ಮತ್ತು ಬಿಜಾಪುರ ತಾಲ್ಲೂಕಿಗೆ ಒಂದರಂತೆ ಪ್ರತ್ಯೇಕವಾಗಿ ಮೂರು ಶಿಥಲ ಘಟಕಗಳನ್ನು ನಿರ್ಮಿಸುವುದು.
* ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಹಾಪ್‍ಕಾಮ್ಸ್ ಮಳಿಗೆಗಳನ್ನು ಸ್ಥಾಪಿಸುವುದು.
* ಇಂಡಿಯಲ್ಲಿ ಕರ್ನಾಟಕ ರಾಜ್ಯ ಲಿಂಬೆ ಅಭಿವೃದ್ಧಿ ಮಂಡಳಿಗೆ ಸ್ವತಂತ್ರವಾದ ಕಟ್ಟಡ (ಟ್ರೈನಿಂಗ್ ಸೆಂಟರ್, ಮಾರ್ಕೆಟಿಂಗ್, ಮಣ್ಣು ನೀರು ಪರಿಶೀಲನಾ ಲ್ಯಾಬೋರೆಟರಿ ಕೇಂದ್ರ) ನಿರ್ಮಿಸಲು 5.00 ಕೋಟಿ ಅನುದಾನ ನೀಡುವುದು.
* ಇಂಡಿ, ಸಿಂಧಗಿ ಮತ್ತು ವಿಜಯಪುರ ತಾಲೂಕಿಗಳಿಗೆ ಪ್ರೋಸೆಸಿಂಗ್ ಘಟಕಗಳನ್ನು ನಿರ್ಮಿಸಲು ತಲಾ 20 ಎಕರೆಯಂತೆ ಸರ್ಕಾರದ ಜಮೀನು ನೀಡುವುದು.
* ವಿಜಯಪುರ ಜಿಲ್ಲೆಯ ಲಿಂಬೆ ಹಣ್ಣು ವಿಶೇಷ ಗುಣವನ್ನು ಹೊಂದಿದ್ದು, ಕೆಲವೇ ದಿನಗಳಲ್ಲಿ ಜಿ.ಐ. ಟ್ಯಾಗ್ ಹೊಂದಲಿದ್ದು, ವಿಶ್ವವ್ಯಾಪ್ತಿ ಪರಿಚಯಿಸಲಿದೆ. ಇದರ ಉಪ ಉತ್ಪನ್ನಗಳ ಮೌಲವರ್ದಿತ ಬೆಲೆ ಸಿಗಲು ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಾದ ಬಿಸಿಯೂಟ, ಶಾಲಾಕಾಲೇಜುಗಳ ಹಾಸ್ಟೆಲ್ ಹಾಗೂ ರಾಜ್ಯದ ರೇಷನ್ ಪಡಿತರಿದಾರರಾದ ಎ.ಪಿ.ಎಲ್, ಹಾಗೂ ಬಿ.ಪಿ.ಎಲ್. ಕಾರ್ಡ್‍ದಾರರಿಗೆ ಪಿಕಲ್ ಇಂಡಸ್ಟ್ರೀಸ್‍ಗಳನ್ನು ನಿರ್ಮಿಸಿ, ಇಂದಿನ ಕೊರೊನಾಗೆ ಔಷಧಿಯ ಬೂಸ್ಟರ್ ರೀತಿಯಲ್ಲಿ ಬಳಸಿ, ಲಿಂಬೆ ಬೆಳೆಗಾರರಿಗೆ ಲಾಭ ಸಿಗುವಂತೆ ತಕ್ಷಣವೇ ಕ್ರಮಕೈಗೊಳ್ಳುವುದು.
* ರಬ್ಬರ್, ಕಾಫಿ, ತೆಂಗು, ಮಾವು, ಸಾಂಬರ್ ಅಭಿವೃದ್ಧಿ ಮಂಡಳಿಯಂತೆ ಸಮಾನ ಸ್ಥಾನಮಾನವನ್ನು ನೀಡಿ, ಕಂಪನಿ ಆಕ್ಟ್ ನಲ್ಲಿ ರಿಜಿಸ್ಟರ್ ಮಾಡಿಸಿ, ಪ್ರತ್ಯೇಕ ಕಾಯ್ದೆಯನ್ನು ಪಾಸ್ ಮಾಡಿಸಿ, ವಿಶೇಷ ಸೌಲಭ್ಯಗಳನ್ನು ದೊರಕುವಂತೆ ಆಗಬೇಕು.
* ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಯಾದ (ODOP) ಒಂದು ಜಿಲ್ಲೆ ಒಂದು ಬೆಳೆ ಕಿರು ಉದ್ದಿಮೆದಾರರಿಗೆ, ಸಣ್ಣ ಗುಡಿಕೈಗಾರಿಕೆಗಳಿಗೆ ಹೆಚ್ಚಿನ ಉತ್ತೇಜನ ನೀಡಿ ಸರ್ಕಾರದಿಂದಲೂ ಆರ್ಥಿಕ ಸಹಾಯ ನೀಡಿ ಕೈಗಾರಿಕೆಗಳನ್ನು ಸ್ಥಾಪಿಸಬೇಕು.
* ಪ್ರಸ್ತುತ ವರ್ಷ 2021-22ನೇ ಸಾಲಿಗೆ 500 ಲಕ್ಷಗಳ ಅನುದಾನ ನೀಡಿದ್ದಲ್ಲಿ, ಲಿಂಬೆ ಬೆಳೆಗಾರರಿಗೆ KSOCA ಸಂಸ್ಥೆ ವತಿಯಿಂದ ಸಾವಯವ ಪ್ರಮಾಣೀಕರಣ ಪತ್ರ, ಸಹಾಯಧನ ರೂಪದಲ್ಲಿ Citrus Special, ಸಣ್ಣ ಪ್ರಮಾಣದ ಸತ್ಯೋತ್ಪಾದನೆ ಘಟಕಗಳು, FPO ಗಳ ರಚನೆ, ಯಾಂತ್ರಿಕರಣ, ಲಿಂಬೆ ಬೆಳೆಯ ಪ್ರಾತ್ಯಕ್ಷತೆ, ಪ್ರಾಥಮಿಕ ಸಂಸ್ಕರಣಾ ಘಟಕ / ಮೌಲ್ಯವರ್ಧನಾ ಘಟಕ ನಿರ್ಮಿಸಿಕೊಳ್ಳುವವರಿಗೆ ಸಹಾಯಧನ, ಲಿಂಬೆ ಖರೀದಿದಾರರ ಮತ್ತು ಮಾರಾಟಗಾರರ ಮೇಳ, ರೈತರಿಗೆ ಒಳ ರಾಜ್ಯ ಮತ್ತು ಹೊರ ರಾಜ್ಯ ಪ್ರವಾಸ ಹಾಗೂ ಲಿಂಬೆ ಬೆಳೆಯಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ರೈತರಿಗೆ ಧನಸಹಾಯ ನೀಡುವ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಅನುಕೂಲವಾಗುವುದು ಎಂದು ಅಶೋಕ್.ಎಸ್ ಅಲ್ಲಾಪೂರ್ ಅವರು ಮನವಿ ಮೂಲಕ ಕೋರಿದ್ದಾರೆ.

Lemons4

ಇಂಡಿ ನಿಂಬೆಹಣ್ಣಿನ ವಿಶೇಷತೆ ಏನು?
ಇಂಡಿ ತಾಲೂಕಿನಲ್ಲಿ ಬೆಳೆಯಲಾಗುತ್ತಿರುವ ನಿಂಬೆ ಹಣ್ಣಲ್ಲಿ ರಸ ಹೆಚ್ಚು. ವಾರಗಟ್ಟಲೆ ಇಟ್ಟರೂ ಒಣಗುವುದಿಲ್ಲ ಮತ್ತು ಹಾಳಾಗುವುದಿಲ್ಲ. ಈ ನಿಂಬೆಯನ್ನು ಬೇರೆ ಕಡೆ ಬೆಳೆದರೂ ಇಲ್ಲಿನ ಗುಣಮಟ್ಟ, ವಿಶೇಷತೆ ಇರುವುದಿಲ್ಲ. ಈ ಪರಿಸರದ ಮಣ್ಣು ಮತ್ತು ಹವಾಗುಣದಿಂದ ಗುಣಮಟ್ಟದ ನಿಂಬೆ ಬೆಳೆಯಲಾಗುತ್ತದೆ. ಇದನ್ನೂ ಓದಿ:ಇಂಡಿ ನಿಂಬೆಗೆ ಜಿಐ ಮಾನ್ಯತೆ ಪಡೆಯಲು ಸದ್ದಿಲ್ಲದೆ ನಡೆಯುತ್ತಿದೆ ಸಿದ್ಧತೆ

 

Share This Article
Leave a Comment

Leave a Reply

Your email address will not be published. Required fields are marked *