– ದೆಹಲಿಗೆ ಹೋಗದೇ ಸಿಎಂ ಪಟ್ಟ
– ಸೋತು ಗೆದ್ದ ಬಿಎಸ್ ಯಡಿಯೂರಪ್ಪ
ಬೆಂಗಳೂರು: ಯಾವುದೇ ಲಾಬಿ ಮಾಡದೇ ಬೆಂಗಳೂರಿನಲ್ಲೇ ಇದ್ದ ಬಸವರಾಜ ಬೊಮ್ಮಾಯಿ ಅವರಿಗೆ ಮುಖ್ಯಮಂತ್ರಿ ಹುದ್ದೆ ಒಲಿದಿದೆ.
ಹೌದು. ಮುಖ್ಯಮಂತ್ರಿ ರೇಸ್‍ನಲ್ಲಿದ್ದ ನಿರಾಣಿ ಮತ್ತು ಬೆಲ್ಲದ್ ಹಲವಾರು ಬಾರಿ ದೆಹಲಿಗೆ ಹೋಗಿದ್ದರು. ಆದರೆ ಹೈಕಮಾಂಡ್ ಯಾವುದೇ ಲಾಬಿ ಮಾಡದ ಬೊಮ್ಮಾಯಿ ಅವರಿಗೆ ಅಂತಿಮವಾಗಿ ಮಣೆ ಹಾಕಿದೆ.
ಬೆಲ್ಲದ್ ಮತ್ತು ನಿರಾಣಿ ದೆಹಲಿಗೆ ಹೋಗಿದ್ದು ಮಾತ್ರವಲ್ಲದೇ ವಾರಣಾಸಿಗೆ ತೆರಳಿ ಗಂಗೆಯಲ್ಲಿ ಸ್ನಾನ ಮಾಡಿ ಕಾಶಿ ವಿಶ್ವನಾಥನ ದರ್ಶನ ಮಾಡಿದ್ದರು. ಹೀಗಾಗಿ ನಿರಾಣಿ ಮತ್ತು ಬೆಲ್ಲದ್ ಮಧ್ಯೆ ಸಿಎಂ ಯಾರಾಗಬಹುದು ಎಂಬ ಕುತೂಹಲ ಮೂಡಿತ್ತು.
ಸೋತು ಗೆದ್ದ ಬಿಎಸ್‍ವೈ:
ಬಸವರಾಜ್ ಬೊಮ್ಮಾಯಿ ಆಯ್ಕೆ ಹಿಂದೆ ಬಿಎಸ್‍ವೈ ತಂತ್ರಗಾರಿಕೆ ನಡೆದಿದೆ. ವಯಸ್ಸಿನ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿ ರಾಜಕೀಯ ಮೇಲಾಟದಲ್ಲಿ ಸೋತಿದ್ದ ಯಡಿಯೂರಪ್ಪ ತಮ್ಮ ಆಪ್ತನಿಗೆ ಅಧಿಕಾರ ಕೊಡಿಸಿ ಚದುರಂಗ ಆಟದಲ್ಲಿ ಗೆದ್ದಿದ್ದಾರೆ. ಈ ಮೂಲಕ ಕುರ್ಚಿ ಕಳೆದುಕೊಳ್ಳಲು ಕಾರಣರಾಗಿದ್ದ ವಿರೋಧಿಗಳಿಗೆ ಬಿಎಸ್‍ವೈ ಶಾಕ್ ನೀಡಿದ್ದಾರೆ. ಇದನ್ನೂ ಓದಿ : ರಾಜ್ಯದಲ್ಲಿ ಸಿಎಂ ಬದಲಾವಣೆ ಆಗಿದ್ದಕ್ಕೆ ಗಡ್ಡ ತೆಗೆದೆ: ಯತ್ನಾಳ್
ತಮ್ಮ ಉತ್ತರಾಧಿಕಾರಿ ಬೊಮ್ಮಾಯಿ ಆಗಬೇಕೆಂದು ವರಿಷ್ಠರಿಗೆ ಬಿಎಸ್‍ವೈ ಸೂಚಿಸಿದ್ದರು. ಲಿಂಗಾಯತ ನಾಯಕನ ಪುನರ್ ಆಯ್ಕೆಯ ಅನಿವಾರ್ಯತೆ ವಿವರಿಸಿದ್ದ ಯಡಿಯೂರಪ್ಪ ಬೊಮ್ಮಾಯಿ ಹೊರತಾದ ನಾಯಕರಿಂದ ಪಕ್ಷಕ್ಕಾಗುವ ಡ್ಯಾಮೇಜ್ ಬಗ್ಗೆ ಮನವರಿಕೆ ಮಾಡಿದ್ದರು. ಹೀಗಾಗಿ ಬಿಎಸ್‍ವೈ ಅಪೇಕ್ಷೆ ಮೇರೆಗೆ ಆಡಳಿತದಲ್ಲಿ ಅನುಭವ ಇದ್ದ ಬೊಮ್ಮಾಯಿಗೆ ಸಿಎಂ ಪಟ್ಟ ಸಿಕ್ಕಿದೆ. ಈ ಮೂಲಕ ತಮ್ಮ ಶಿಷ್ಯನ ಅಧಿಕಾರಕ್ಕೆ ತಂದು ಬಿಎಸ್‍ವೈ ಗೆದ್ದು ಬೀಗಿದ್ದಾರೆ.
ಮಂಗಳವಾರ ರಾತ್ರಿ ಬಿಜೆಪಿ ಕಚೇರಿಯಲ್ಲಿ ಮಾತನಾಡಿದ್ದ ಬೊಮ್ಮಾಯಿ, ನಾನು ಮುಖ್ಯಮಂತ್ರಿ ಸ್ಪರ್ಧೆಯಲ್ಲಿ ಇರಲಿಲ್ಲ. ಪಕ್ಷದ ಹೈಕಮಾಂಡ್ ನನ್ನನ್ನು ಗುರುತಿಸಿ ಅವಕಾಶ ನೀಡಿದ್ದಾರೆ. ನಾನು ದೆಹಲಿಗೆ ಹೋಗಲಿಲ್ಲ. ಅವರೇ ಗುರುತಿಸಿ ಜವಾಬ್ದಾರಿ ನೀಡಿದ್ದಾರೆ. ಹಿರಿಯರ ಮಾರ್ಗದರ್ಶನ ಪಡೆದು ಸಂಪುಟ ರಚಿಸುತ್ತೇನೆ ಎಂದು ಹೇಳಿದ್ದಾರೆ.
"Kingmaker" @BSYBJP pic.twitter.com/WRwWgHoNbl
— M P Renukacharya (@MPRBJP) July 27, 2021
ಯಡಿಯೂರಪ್ಪ ತಂತ್ರಗಾರಿಕೆ ನಡೆದಿದೆ ಎಂಬ ವಾದಕ್ಕೆ ರೇಣುಕಾಚಾರ್ಯ ಅವರು ಮಾಡಿದ ಟ್ವೀಟ್ ಪುಷ್ಟಿ ನೀಡುವಂತಿದೆ. ಬೊಮ್ಮಾಯಿ ಅವರಿಗೆ ಯಡಿಯೂರಪ್ಪ ಹೂಗುಚ್ಛ ನೀಡುತ್ತಿರುವ ಫೋಟೋ ಹಾಕಿ ‘ಕಿಂಗ್‍ಮೇಕರ್’ ಬಿಎಸ್‍ವೈ ಎಂದು ಬರೆದು ರೇಣುಕಾಚಾರ್ಯ ಟ್ವೀಟ್ ಮಾಡಿದ್ದಾರೆ.