ರಾಯಚೂರು: ಗ್ರೀನ್ ಝೋನ್ ಜಿಲ್ಲೆ ರಾಯಚೂರಿನಲ್ಲಿ ಲಾಕ್‍ಡೌನ್ ಸಂಪೂರ್ಣ ಸಡಿಲಿಕೆಯಾಗಿದ್ದರೂ ಜನರ ಜೀವನ ಇನ್ನೂ ಕಷ್ಟದಲ್ಲಿದೆ. ಕೆಲಸವಿಲ್ಲದೆ ಕೆಲವರು ಭಿಕ್ಷಾಟನೆಗೆ ಇಳಿದು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.
ನಗರದ ಆಶಾಪುರ ರಸ್ತೆ ಪದ್ಮಾವತಿ ಕಾಲೋನಿ ಬಳಿ ಬಯಲು ಪ್ರದೇಶದಲ್ಲಿ ಗುಡಿಸಲು ಹಾಕಿಕೊಂಡಿರುವ ಸುಮಾರು 20 ಕುಟುಂಬಗಳ ಪುಟ್ಟ ಪುಟ್ಟ ಮಕ್ಕಳು ಈಗ ಭಿಕ್ಷಾಟನೆ ನಡೆಸಿವೆ. ಆಹಾರಧಾನ್ಯ ಇಲ್ಲದೆ ಬಡ ಕುಟುಂಬಗಳು ಪರದಾಡುತ್ತಿದ್ದು, ಮಕ್ಕಳು ಕೈಯಲ್ಲಿ ಪಾತ್ರೆ ಹಿಡಿದು ಮನೆಮನೆಗೆ ಹೋಗಿ ಅಕ್ಕಿ ಭಿಕ್ಷೆ ಕೇಳುತ್ತಿದ್ದಾರೆ.
ಮೊದಲೆಲ್ಲಾ ವೇಷಹಾಕಿಕೊಂಡು ಬದುಕುತ್ತಿದ್ದ ಕುಟುಂಬಗಳು ಬದುಕು ಕಷ್ಟವಾಗಿ ಗ್ರಾಮೀಣ ಭಾಗದಲ್ಲಿ ನೀರಿನ ಕೊಡ, ಬಟ್ಟೆ, ಬಳೆ ಮಾರಾಟ ಮಾಡಿ ಜೀವನ ನಡೆಸುತ್ತಿದ್ದರು. ಹೇಗೋ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಬದುಕುತ್ತಿದ್ದ ಈ ಕುಟುಂಬಗಳು ಲಾಕ್‍ಡೌನ್‍ನಿಂದ ಕಂಗಾಲಾಗಿವೆ. ಲಾಕ್‍ಡೌನ್ ಸಡಿಲಿಕೆಯಾಗಿದ್ದರಿಂದ ವ್ಯಾಪಾರಕ್ಕೆ ಹೋದರೆ ಹಳ್ಳಿಗಳಲ್ಲಿ ಜನ ಇವರನ್ನ ಊರಿನೊಳಗೆ ಬಿಟ್ಟುಕೊಳ್ಳಯತ್ತಿಲ್ಲ. ಇತ್ತ ಬೇರೆ ಕೆಲಸವೂ ಸಿಗುತ್ತಿಲ್ಲ.
ಒಂದೆರಡು ಬಾರಿ ದಾನಿಗಳು ಆಹಾರ ಕಿಟ್ ವಿತರಿಸಿದ್ದಾರೆ, ಪಡಿತರ ಧಾನ್ಯವೂ ಸಿಕ್ಕಿದೆ. ಆದರೆ 50ಕ್ಕೂ ಹೆಚ್ಚು ಜನರಿರುವ ಇವರಿಗೆ ನಿತ್ಯದ ಊಟಕ್ಕೆ ಆಹಾರಧಾನ್ಯ ಸಾಲುತ್ತಿಲ್ಲ. ಮಕ್ಕಳನ್ನ ಸಾಕುವುದು ಹೆತ್ತವರಿಗೆ ಕಷ್ಟವಾಗುತ್ತಿದೆ. ಹೀಗಾಗಿ ಹೊಟ್ಟೆ ತುಂಬಿಸಿಕೊಳ್ಳಲು ಭಿಕ್ಷಾಟನೆ ನಡೆಸಿದ್ದಾರೆ.