ಹಾವೇರಿ: ಜೂನ್ 7ರಿಂದ ಒಂದು ವಾರ ಲಾಕ್‍ಡೌನ್ ವಿಸ್ತರಣೆ ಮಾಡುವುದು ಒಳ್ಳೆಯದು. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು ಕೃಷಿ ಸಚಿವ ಬಿ. ಸಿ. ಪಾಟೀಲ್ ಹೇಳಿದ್ದಾರೆ.
ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕು ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿದ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೊಪ್ಪಳ, ಹಿರೇಕೆರೂರು ಸೇರಿದಂತೆ ಹಲವೆಡೆ ಓಡಾಡಿದ್ದೇನೆ. ಹಿರೇಕರೂರಲ್ಲಿ ಡೆತ್ ರೇಟ್ ಜಾಸ್ತಿ ಇದೆ. ಇನ್ನೊಂದು ವಾರಗಳ ಲಾಕ್‍ಡೌನ್ ವಿಸ್ತರಣೆ ಮಾಡೋದು ಒಳ್ಳೆಯದು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೊರೊನಾ ರಾಜಕೀಯ ಮಾಡಲು ಹೊರಟಿರೋದು ಸರಿಯಲ್ಲ. ಇದು ರಾಜಕಾರಣ ಮಾಡೋ ಸಮಯವಲ್ಲ ಎಂದು ಡಿಕೆಶಿ ವಿರುದ್ಧ ಕಿಡಿಕಾರಿದರು. ಇದನ್ನೂ ಓದಿ: 1200 ರೂಪಾಯಿಗೆ ಡಿಎಪಿ ಗೊಬ್ಬರ – ಜೋಶಿ ಮನವಿಗೆ ಸ್ಪಂದಿಸಿದ ಸರ್ಕಾರ
ನಾನು ಹೀರೋ, ರೀಯಲ್ ಆಗಿ ಹೀರೋ ಅಂತಾ ಸಿ.ಪಿ.ಯೋಗೇಶ್ವರ ಹೇಳಿದ್ದಾರೆ. ನಾನೂ ಅದನ್ನೇ ಹೇಳುತ್ತೇನೆ. ಇದು ರಾಜಕಾರಣದ ಬಗ್ಗೆ ಮಾತನಾಡೋ ಸಮಯವಲ್ಲ. ಅದನ್ನ ನೋಡಿಕೊಳ್ಳೋಕೆ ರಾಜ್ಯದ ನಾಯಕರಿದ್ದಾರೆ. ಕೊರೊನಾದಿಂದ ಜನರು ಸಾಯ್ತಿದ್ದಾರೆ. ಬ್ಲಾಕ್ ಫಂಗಸ್ ಹರಡುತ್ತಿದೆ. ಈ ಟೈಮ್ ರಾಜಕಾರಣ ಮಾಡೋದು ಅಲ್ಲ ಎಂದಿದ್ದಾರೆ. ಇದನ್ನೂ ಓದಿ: ಕೆಲವೊಂದಕ್ಕೆ ವಿನಾಯಿತಿ ನೀಡಿ ಲಾಕ್‍ಡೌನ್ ವಿಸ್ತರಣೆ – ಸಿಎಂ ಬಿಎಸ್‍ವೈ
ಧಾರವಾಡದಲ್ಲೂ ಡಿಎಪಿ ಗೊಬ್ಬರ ಇವತ್ತು ನಾಳೆ ಬರ್ತಾ ಇದೆ. 1600 ಮೆಟ್ರಿಕ್ ಟನ್ ಬರ್ತಾ ಇದೆ. ಗೊಬ್ಬರದ ಕೊರತೆಯಿಲ್ಲ. ಉದ್ದೇಶಪೂರ್ವಕವಾಗಿ ಗೊಬ್ಬರದ ಅಭಾವ ಸೃಷ್ಟಿಸಲು ಎಲ್ಲಿಯಾದ್ರೂ ಗೊಬ್ಬರ ಸಂಗ್ರಹ ಮಾಡಿಟ್ಟಿದ್ದರೆ ರೇಡ್ ಮಾಡಲು ಹೇಳಿದ್ದೇನೆ. ಕೊರೊನಾ ಜಗತ್ತಿಗೆ ಬಂದಿರೋ ಕಷ್ಟ. ರೈತರು ಬೆಳೆದ ಬೆಳೆಯನ್ನ ನಾಶ ಮಾಡಬಾರದು. ಬೆಳೆ ನಾಶ ಮಾಡಿದ ತಕ್ಷಣ ಪರಿಹಾರ ಬರೋದಿಲ್ಲ. ಬೆಳೆ ರೈತರ ಮಕ್ಕಳಿದ್ದಂತೆ. ಅದನ್ನ ನಾವೇ ನಾಶ ಮಾಡೋದು ಸರಿಯಲ್ಲ. ಸ್ವಲ್ಪ ದಿನ ಕಾಯ್ದರೆ ಒಳ್ಳೆಯ ದಿನಗಳು ಬರುತ್ತವೆ. ರೈತರು ಬೆಳೆ ನಾಶ ಮಾಡಬಾರದು ಅಂತಾ ವಿನಂತಿಸಿದ್ದಾರೆ.