ನವದೆಹಲಿ: ಲಾಕ್‍ಡೌನ್ ಅವಧಿಯ ಸಾಲ ಮರುಪಾವತಿ ವಿಚಾರಕ್ಕೆ ಸಂಬಂಧಿಸಿದಂತೆ ಅಂತಿಮ ನಿರ್ಧಾರ ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಸುಪ್ರೀಂಕೋರ್ಟ್ ಎರಡು ವಾರಗಳ ಕಾಲಾವಕಾಶ ನೀಡಿದ್ದು, ಇದು ಕೊನೆಯ ಅವಕಾಶ ಎಂದು ಹೇಳಿದೆ.
ಇಂದು ವಿಚಾರಣೆ ಮುಂದುವರಿಸಿದ ಸುಪ್ರೀಂಕೋರ್ಟ್ ನ್ಯಾಯಪೀಠ, ಇನ್ನೂ ಎರಡು ವಾರಗಳಲ್ಲಿ ಏನಾಗುತ್ತದೆ ಎಂದು ಕಾದುನೋಡಲು ನಾವು ಕೇಂದ್ರಕ್ಕೆ ಸಮಯ ನೀಡುತ್ತಿದ್ದೇವೆ. ಕೇಂದ್ರ ಹಾಗೂ ಆರ್ ಬಿಐ ಸೂಕ್ತ ಯೋಜನೆಯೊಂದಿಗೆ ಸಮಸ್ಯೆಯನ್ನು ಬಗೆಹರಿಸಲು ಇದೊಂದು ಕೊನೆಯ ಅವಕಾಶವಾಗಿದೆ ಎಂದು ಎಚ್ಚರಿಸಿದೆ.
Advertisement
Advertisement
ಇಂದು ಕೇಂದ್ರ ಸರ್ಕಾರ ಹಾಗೂ ಆರ್ ಬಿಐ ಪರ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಈಗಾಗಲೇ ಎರಡರಿಂದ ಮೂರು ಸುತ್ತುಗಳ ಸಭೆಗಳನ್ನು ನಡೆಸಲಾಗಿದೆ. ಸಾಲ ಮರು ಪಾವತಿ ಅಂತಿಮ ದಿನಾಂಕದ ಬಗ್ಗೆ ಗೊಂದಲಗಳು ವ್ಯಕ್ತವಾಗಿದೆ. ಅದನ್ನು ಪರಿಶೀಲಿಸಲಾಗುತ್ತದೆ. ಇದಕ್ಕಾಗಿ ಎರಡು ವಾರಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು.
Advertisement
Advertisement
ಮನವಿಗೆ ಸ್ಪಂದಿಸಿದ ಸುಪ್ರೀಂಕೋರ್ಟ್, ಮುಂದಿನ ಹಂತಗಳಲ್ಲಿ ವಿಚಾರಣೆ ಮುಂದೂಡುವುದಿಲ್ಲ. ಕೇಂದ್ರ ಮತ್ತು ಆರ್ ಬಿಐ ಸಲಹೆ ಆಧರಿಸಿ ಸೂಕ್ತ ಆದೇಶವನ್ನು ನೀಡಲಿದ್ದೇವೆ ಎಂದು ಪೀಠ ಹೇಳಿದೆ.
ಲಾಕ್‍ಡೌನ್ ಅವಧಿಯಲ್ಲಿ ಮುಂದೂಡಲ್ಪಟ್ಟ ಇಎಂಐಗಳ ಮೇಲಿನ ಬಡ್ಡಿಯ ಮೇಲಿನ ಬಡ್ಡಿ ಪ್ರಶ್ನಿಸಿ ಸಲ್ಲಿಸಿದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುತ್ತಿದೆ. ಇದೇ ವೇಳೆ ಸಾಲ ಮರುಪಾವತಿಗೆ ಅಗಸ್ಟ್ 31 ಕ್ಕೆ ಆರ್‍ಬಿಐ ನೀಡಿದ್ದ ವಿನಾಯಿತಿ ಮುಕ್ತಾಯವಾಗಿದ್ದು, ಆರ್ಥಿಕ ಸಂಕಷ್ಟದ ನಡುವೆ ಸಾಲ ಮರು ಪಾವತಿ ಬಗ್ಗೆ ಕೋರ್ಟ್ ವಿಚಾರಣೆ ನಡೆಸುತ್ತಿದೆ.