ಗಾಂಧಿನಗರ: ಗುಜರಾತಿನ ವಡೋದರ ಪ್ರತಾಪ್ ನಗರ ಶಾಖೆಯ ಬ್ಯಾಂಕ್ ಆಫ್ ಬರೋಡಾದ ಲಾಕರ್ ನಲ್ಲಿ ವ್ಯಕ್ತಿಯೊಬ್ಬ ಇಟ್ಟಿದ್ದ 2 ಲಕ್ಷ ರೂ ಹಣವನ್ನು ಗೆದ್ದಲು ಹುಳು ತಿಂದ ಘಟನೆ ಸಂಬಂಧಿಸಿದಂತೆ ಇದೀಗ ಬ್ಯಾಂಕ್ ಆಫ್ ಬರೋಡಾ ಅಧಿಕೃತವಾಗಿ ಹೇಳಿಕೆ ನೀಡಿದೆ.
ವಡೋದರಾದ ಪ್ರತಾಪ್ ನಗರ ಶಾಖೆಯ ನಮ್ಮ ಬ್ಯಾಂಕಿನಲ್ಲಿ ನಡೆದ ಆಕಸ್ಮಿಕ ಘಟನೆಯಲ್ಲಿ ಒಂದಷ್ಟು ಗ್ರಾಹಕರ ಹಣವನ್ನು ಗೆದ್ದಲುಗಳು ತಿಂದು ಹಾಕಿದ್ದವು. ಈ ಕುರಿತಂತೆ ನಮ್ಮ ಬ್ಯಾಂಕ್ ಆಫ್ ಬರೋಡಾ ಆದಷ್ಟು ಶೀಘ್ರ ಪರಿಸ್ಥಿಯನ್ನು ಸರಿಪಡಿಸಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಗ್ರಾಹಕರಿಗೆ ಭರವಸೆ ನೀಡುತ್ತದೆ ಎಂದು ತಿಳಿಸಿದೆ.
ಅಲ್ಲದೆ ಈ ರೀತಿಯ ಘಟನೆಗಳು ಮತ್ತೆ ಮರುಕಳಿಸದಂತೆ ನೋಡುಕೊಳ್ಳುತ್ತೇವೆ. ನಾವು ಗ್ರಾಹಕರ ದೂರನ್ನು ಪರಿಗಣಿಸಿದ್ದು, ಸಾಧ್ಯವಾದಷ್ಟು ಬೇಗ ಅವರ ಬೇಡಿಕೆಗಳನ್ನ ಪೂರೈಸುತ್ತೇವೆ. ಈ ವಿಚಾರವಾಗಿ ಇನ್ನೂ ಹೆಚ್ಚಿನ ಮಾಹಿತಿಗಾಗಿ ದಯವಿಟ್ಟು ನಮ್ಮನ್ನು ಸಂಪರ್ಕಿಸಿ ಎಂದು ಗ್ರಾಹಕರಲ್ಲಿ ಮನವಿ ಮಾಡಿದ್ದಾರೆ.
ವಡೋದರ ಮೂಲದ ರೆಹನಾ ಕುತುಬ್ದೀನ್ ಎಂಬ ವ್ಯಕ್ತಿ ಪ್ರತಾಪ್ ನಗರ ಶಾಖೆಯ ಬ್ಯಾಂಕ್ ಆಫ್ ಬರೋಡಾ ಲಾಕರ್ ನಲ್ಲಿ ಇಟ್ಟಿದ್ದ 2.20 ಲಕ್ಷ ರೂ ಹಣವನ್ನು ಗೆದ್ದಲು ಹುಳು ತಿಂದು ಹಾಕಿತ್ತು. ಈ ವಿಚಾರವಾಗಿ ಕುತುಬ್ದೀನ್ ಬ್ಯಾಂಕ್ ಮುಖ್ಯಸ್ಥನ ವಿರುದ್ಧ ಪೊಲೀಸ್ ಠಾಣಾ ಮೆಟ್ಟಿಲೇರಿ ಹಣವನ್ನು ಮರುಪಾವತಿಸುವಂತೆ ಬೇಡಿಕೆ ಇಟ್ಟಿದ್ದರು.