– ಲೇಡಿ ಕಾನ್‍ಸ್ಟೇಬಲ್, ಜೈಲು ವಾರ್ಡನ್‍ಗೆ ತಿಳಿದಿತ್ತು
– ವಕೀಲರ ತಂಡ ಭೇಟಿ ನೀಡಿದ ವೇಳೆ ಬಹಿರಂಗ
ಭೋಪಾಲ್: ಐವರು ಪೊಲೀಸರು ಲಾಕಪ್‍ನಲ್ಲಿಯೇ 20 ವರ್ಷದ ಮಹಿಳೆ ಮೇಲೆ ಹತ್ತು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ.
ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಸ್ಟೇಷನ್ ಇನ್‍ಚಾರ್ಜ್ ಸೇರಿ ಐವರು ಪೊಲೀಸರು 10 ದಿನಗಳ ಕಾಲ ಲಾಕಪ್‍ನಲ್ಲಿಯೇ ಮೇಲೆ ನನ್ನ ಮೇಲೆ ನಿರಂತರವಾಗಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಮಹಿಳೆ ಆರೋಪಿಸಿದ್ದಾಳೆ.
ಮಹಿಳೆ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದು ಆಕೆಯನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿತ್ತು. ಆಕ್ಟೋಬರ್ 10ರಂದು ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರು ಹಾಗೂ ವಕೀಲರ ತಂಡ ಜೈಲಿನ ತಪಾಸಣೆಗೆ ತೆರಳಿದಾಗ ಈ ಮಾಹಿತಿ ಬಹಿರಂಗವಾಗಿದೆ.
ಈ ಕುರಿತು ಹೆಚ್ಚುವರಿ ಜಿಲ್ಲಾನ್ಯಾಯಾಧೀಶರ ಮುಂದೆ ಮಹಿಳೆ ಅಳಲು ತೋಡಿಕೊಂಡಿದ್ದು, ಪೊಲೀಸರು ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದಾಳೆ. ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಆದೇಶಿಸಲಾಗಿದೆ.
ತಪಾಸಣೆ ನಡೆಸಲು ಪೊಲೀಸ್ ಠಾಣೆಗೆ ಆಗಮಿಸಿದ ತಂಡಕ್ಕೆ ಮಹಿಳೆ ತಿಳಿಸಿದ್ದು, ಐವರು ಪೊಲೀಸರು ಮೇ 9 ರಿಂದ 21ರ ವೆರೆಗೆ 10 ದಿನಗಳ ಕಾಲ ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ. ಈ ಕುರಿತು ಮಹಿಳಾ ಕಾನ್‍ಸ್ಟೇಬಲ್ ಎದರು ಪ್ರತಿಭಟನೆ ನಡೆಸಿದರೂ ಅವರೂ ತಲೆ ಕೆಡಿಸಿಕೊಳ್ಳಲಿಲ್ಲ ಎಂದು ಆರೋಪಿಸಿದ್ದಾಳೆ.
ಅತ್ಯಾಚಾರದ ಕುರಿತು ಮಹಿಳೆ ಜೈಲು ವಾರ್ಡನ್‍ಗೂ ತಿಳಿಸಿದ್ದು, ಮೂರು ತಿಂಗಳ ಹಿಂದೆ ಅತ್ಯಾಚಾರವಾಗಿರುವುದಾಗಿ ಆರೋಪಿ ತಿಳಿಸಿದ್ದಾಳೆ. ಮಹಿಳೆ ಮೇಲೆ ಅತ್ಯಾಚಾರ ನಡೆದಿರುವುದು ವಾರ್ಡನ್‍ಗೂ ತಿಳಿದಿತ್ತು ಎಂದು ಜೈಲಿಗೆ ಭೇಟಿ ನೀಡಿದ್ದ ಕಾನೂನು ತಂಡದ ವಕೀಲರೊಬ್ಬರು ಮಾಹಿತಿ ನೀಡಿದ್ದಾರೆ. ಮಹಿಳೆಯನ್ನು ಮೇ 21ರಂದು ಬಂಧಿಸಲಾಗಿತ್ತು.