ರಾಂಚಿ: ಭಾನುವರ ರಾತ್ರಿ ನಕ್ಸಲರು ಜಾರ್ಖಂಡ್ ರಾಜ್ಯದ ಚಕ್ರಧರ್ಪುರ ವ್ಯಾಪ್ತಿಯಲ್ಲಿ ರೈಲ್ವೇ ಹಳಿಯನ್ನ ಸ್ಫೋಟಿಸಿದ್ದಾರೆ. ಲೋಟಾಪಹಾಡ್ ಬಳಿಯಲ್ಲಿ ನಕ್ಸಲರು ರೈಲು ಹಳಿಯನ್ನ ಸ್ಫೋಟಿಸಿದ್ದು, ಈ ಮಾರ್ಗದ ಎಲ್ಲ ರೈಲುಗಳ ಸಂಚಾರವನ್ನ ಸ್ಥಗಿತಗೊಳಿಸಲಾಗಿದೆ. ಕೆಲ ರೈಲುಗಳ ಮಾರ್ಗ ಬದಲಾವಣೆ ಮಾಡಲಾಗಿದೆ.
ಸ್ಫೋಟದ ಪರಿಣಾಮ ಹೌರಾ-ಮುಂಬೈ ಮಾರ್ಗ ಸಂಪೂರ್ಣ ಸ್ಥಗಿತಗೊಂಡಿದೆ. ಚಕ್ರಧರ್ಪುರ, ಟಾಟಾ ನಗರ, ಸಿನಿ, ಸುನೌ, ಗೋಯಿಲೆಕೆರಾ, ಮನೋಹರ್‍ಪುರ ನಿಲ್ದಾಣದಲ್ಲಿಯೇ ರೈಲುಗಳು ನಿಂತಿದ್ದು, ಪ್ರಯಾಣಿಕರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಆದ್ರೆ ದೂರದ ಪ್ರಯಾಣಿಕರು ಅನಿವಾರ್ಯವಾಗಿ ರೈಲಿನಲ್ಲಿಯೇ ಕಾಯುವಂತಾಗಿದೆ.
Advertisement
Advertisement
ನಕ್ಸಲರು ಅಜಾದ್ ಹಿಂದ್ ಎಕ್ಸ್ ಪ್ರೆಸ್ ರೈಲು ಗುರಿಯಾಗಿಸಿ ಹಳಿ ಸ್ಫೋಟಿಸಿದ್ದರು ಎಂದು ವರದಿಯಾಗಿದೆ. ಅದೃಷ್ಟವಷಾತ್ ಯಾವುದೇ ರೈಲುಗಳು ಮಾರ್ಗದಲ್ಲಿ ಸಂಚರಿಸಲ್ಲ. ನಕ್ಸಲರ ನಿರ್ಮೂಲನೆಗಾಗಿ ಸರ್ಕಾರ ಕೈಗೊಂಡಿರುವ ಆಪರೇಷನ್ ಪ್ರಹಾರಕ್ಕೆ ವಿರೋಧ ವ್ಯಕ್ತಪಡಿಸಿ, ಇಂದು ಭಾರತ್ ಬಂದ್ ಗೆ ಕರೆ ನೀಡಿದ್ದರು.
Advertisement
Advertisement
ರೈಲು ಹಳಿಯ ಸ್ಫೋಟದ ವಿಷಯ ತಿಳಿಯುತ್ತಿದ್ದಂತೆ ಪೊಲೀಸರು ಮತ್ತು ಅಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಘಟನಾ ಸ್ಥಳದ ವ್ಯಾಪ್ತಿಯಲ್ಲಿಯ ಗ್ರಾಮಸ್ಥರಿಂದಲೂ ಮಾಹಿತಿ ಕಲೆ ಹಾಕುತ್ತಿದ್ದಾರೆ. ಇತ್ತ ಹಳಿಯ ಜೋಡಣೆ ಕಾರ್ಯವನ್ನ ಸಿಬ್ಬಂದಿ ಆರಂಭಿಸಿದ್ದು, ಮಾರ್ಗದ ಪರಿಶೀಲನೆ ನಡೆಸಲಾಗುತ್ತಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.