ರೈತರ ಅನ್ನದ ತಟ್ಟೆಗೆ ಕೈ ಹಾಕಬೇಡಿ: ಹೆಚ್‍ಡಿಕೆ

Public TV
1 Min Read
hdk bsy

ಬೆಂಗಳೂರು: ಟ್ರ್ಯಾಕ್ಟರ್, ವಾಹನ ಇರುವ ರೈತರು ಬಿಪಿಎಲ್ ಕಾರ್ಡ್ ಹಿಂದಿರುಗಿಸಬೇಕೆಂದು ಸರ್ಕಾರ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿರುವ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ, ರೈತರ ಅನ್ನದ ತಟ್ಟೆಗೆ ಕೈ ಹಾಕಬೇಡಿ ಎಂದು ಕಿಡಿಕಾರಿದ್ದಾರೆ. ಸಾಲು ಸಾಲು ಟ್ವೀಟ್ ಮೂಲಕ ಹೆಚ್.ಡಿ.ಕುಮಾರಸ್ವಾಮಿ ಚಾಟಿ ಬೀಸಿದ್ದಾರೆ.

ಟ್ವೀಟ್ 1: ಟ್ರ್ಯಾಕ್ಟರ್, ವಾಹನ ಇರುವ ರೈತರು ಬಿಪಿಎಲ್ ಕಾರ್ಡ್‍ಗಳನ್ನು ಹಿಂದಿರುಗಿಸಬೇಕು, ಇಲ್ಲವಾದರೆ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ. ಇದು ಮೂರ್ಖತನದ ಸೂಚನೆ. ರೈತರ ಮೇಲೆ ದೌರ್ಜನ್ಯ ಎಸಗುವ, ಗುಂಡಿಕ್ಕುವ, ಕಾನೂನು ಕ್ರಮದ ಅಸ್ತ್ರ ಪ್ರಯೋಗಿಸಲು ಈ ಸರ್ಕಾರ ತುದಿಗಾಲಿನ ಮೇಲೆ ನಿಂತಂತೆ ಕಾಣುತ್ತಿದೆ.

ಟ್ವೀಟ್ 2: ರೈತರಿಗೆ ಬಿಪಿಎಲ್ ಕಾರ್ಡ್ ಹಿಂದಿರುಗಿಸಲು ಹೇಳಿರುವ ಸರ್ಕಾರ ಅದಕ್ಕೆ ಟ್ರ್ಯಾಕ್ಟರ್, ವಾಹನಗಳನ್ನು ಮಾನದಂಡ ಮಾಡಿದೆ. ವೈಜ್ಞಾನಿಕ ಕೃಷಿ, ಟ್ರಾಕ್ಟರ್ ಖರೀದಿಗೆ ಪ್ರೋತ್ಸಾಹ ನೀಡುತ್ತಿರುವುದು ಸರ್ಕಾರಗಳೇ ಅಲ್ಲವೇ? ಟ್ರ್ಯಾಕ್ಟರ್ ಖರೀದಿಸಲು ಹೇಳಿ, ಅದನ್ನೇ ಮುಂದಿಟ್ಟು ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುವುದು ಮೂರ್ಖತನವಲ್ಲವೇ?

ಟ್ವೀಟ್ 3: ಇಂದಿನ ಪೈಪೋಟಿ ಯುಗದಲ್ಲಿ ಕೃಷಿಕ ಯಂತ್ರ, ವಾಹನಗಳನ್ನು ಹೊಂದುವುದು ಅಗತ್ಯ. ಸರ್ಕಾರ ಅದಕ್ಕೆ ಪ್ರೋತ್ಸಾಹ ನೀಡಬೇಕು. ಬಿಪಿಎಲ್ ಕಾರ್ಡ್ ಕಿತ್ತುಕೊಳ್ಳುವ ಬೆದರಿಕೆಯೊಡ್ಡಬಾರದು. ಬಿಪಿಎಲ್ ಕಾರ್ಡ್ ಈಗ ಕೇವಲ ಪಡಿತರಕ್ಕೆ ಮಾತ್ರ ಸೀಮಿತವಲ್ಲ. ಹಲವು ಸವಲತ್ತು, ಸೌಲಭ್ಯಗಳಿಗೆ ಬಿಪಿಎಲ್ ಕಾರ್ಡೇ ಆಧಾರ ಎಂಬುದು ಸರ್ಕಾರದ ಗಮನದಲ್ಲಿರಲಿ.

ಟ್ವೀಟ್ 4: ಅರ್ಹ ಫಲಾನುಭವಿಗಳಿಗೆ ಸವಲತ್ತು ಸಿಗಬೇಕು. ಅದಕ್ಕಾಗಿ ರೈತರ ಅನ್ನದ ತಟ್ಟೆಗೆ ಕೈ ಹಾಕಬಾರದು. ಸಾರ್ವಜನಿಕ ಪಡಿತರ ವಿತರಣೆ ವ್ಯವಸ್ಥೆಯಲ್ಲಿ ದೋಷಗಳಿವೆ. ಪಟ್ಟಭದ್ರ ಹಿತಾಸಕ್ತಿಗಳಿವೆ. ಅದನ್ನು ಮೊದಲು ಹೋಗಲಾಡಿಸಬೇಕು. ಸರ್ಕಾರ ಅದರತ್ತ ಗಮನ ಹರಿಸಲಿ. ಮಾತಿಗೆ ಮೊದಲು ರೈತರ ಕೊರಳು ಹಿಂಡುವ ತನ್ನ ಎಂದಿನ ಅಭ್ಯಾಸವನ್ನು ಸರ್ಕಾರ ತೊರೆಯಲಿ.

Share This Article
Leave a Comment

Leave a Reply

Your email address will not be published. Required fields are marked *