ಹುಬ್ಬಳ್ಳಿ: ದೇಶಾದ್ಯಂತ ಹೆಸರುವಾಸಿಯಾಗಿರುವ ಧಾರವಾಡ ಜಿಲ್ಲೆಯ ಕಲಘಟಗಿ ಬಣ್ಣದ ತೊಟ್ಟಿಲು ತನ್ನದೇ ಆದ ಮಹತ್ವವನ್ನು ಹೊಂದಿದೆ. ಇದೀಗ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿಯವರ ಪುತ್ರಿ ಬ್ರಹ್ಮಣಿ ಮಗುವಿಗೆ ಕಲಘಟಗಿ ತೊಟ್ಟಿಲು ಸಿದ್ಧವಾಗುತ್ತಿದೆ. ಇದನ್ನೂ ಓದಿ: ಕಲಘಟಗಿ ತೊಟ್ಟಿಲಿನ ವಿಶೇಷತೆ ಏನು?
ಕಲಘಟಗಿ ಕಲಾವಿದ ಮಾರುತಿ ಬಳಿಯೇ ಸುಮಾರು ಮೂರು ತಿಂಗಳಿನಿಂದ ತೊಟ್ಟಿಲು ತಯಾರಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ತೊಟ್ಟಿಲಿನಲ್ಲಿ ಕೃಷ್ಣನ ಬಾಲ ಲೀಲೆ ಮೂಡಿಬಂದಿರುವುದು ತೊಟ್ಟಿಲಿನ ಮೆರಗನ್ನು ಮತ್ತಷ್ಟು ಹೆಚ್ಚಿಸಿದೆ. ಕಲಘಟಗಿ ತೊಟ್ಟಿಲು ಕಲಾವಿದನ ಕೈ ಚಳಕದಿಂದ ನೋಡುಗರ ಕಣ್ಮನ ಸೆಳೆಯುತ್ತದೆ.
ಹಾವೇರಿ ಜಿಲ್ಲೆಯ ವನಿತಾ ಗುತ್ತಲ ಎಂಬವರು ಜನಾರ್ದನ ರೆಡ್ಡಿ ಮೊಮ್ಮಗುವಿಗೆ ಈ ತೊಟ್ಟಿಲನ್ನು ನೀಡುತ್ತಿದ್ದಾರೆ. ಈಗಾಗಲೇ 40,000 ಮುಂಗಡ ರೂಪಾಯಿಯನ್ನು ನೀಡಲಾಗಿದ್ದು, ಉಳಿದ 50,000 ರೂ.ಹಣವನ್ನು ಇಂದು ಕೊಟ್ಟು ಬೆಂಗಳೂರಿಗೆ ತೆಗೆದುಕೊಂಡು ಹೋಗಲಿದ್ದಾರೆ.
ಅಲ್ಲದೇ ಸಿನಿಮಾ ನಟರು ಕೂಡ ಕಲಘಟಗಿ ಬಣ್ಣದ ತೊಟ್ಟಿಲಿಗೆ ಮಾರು ಹೋಗಿದ್ದು, ಯಶ್-ರಾಧಿಕಾ ಪಂಡಿತ್ ಮಗುವಿಗೂ ಕಲಘಟಗಿ ತೊಟ್ಟಿಲನ್ನು ನೀಡಲಾಗಿದೆ. ರಾಜ್‍ಕುಮಾರ್ ಅವರ ಕುಟುಂಬಕ್ಕೆ ಇವರೇ ತೊಟ್ಟಿಲನ್ನು ನೀಡುವುದು.