ಚಿಕ್ಕಬಳ್ಳಾಪುರ: ಜಿಲ್ಲಾ ಕಾಂಗ್ರೆಸ್‍ನಿಂದ ನಗರದಲ್ಲಿ ವಿಶೇಷಚೇತನರ ವಾಹನಗಳಿಗೆ ಉಚಿತವಾಗಿ ಫುಲ್ ಟ್ಯಾಂಕ್ ಪೆಟ್ರೋಲ್ ಹಾಕಿಸುವ ಮೂಲಕ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಿಲಾಗಿದೆ.
ನಗರದ ಹೊರವಲಯದ ಡಿಸಿ ಕಚೇರಿ ಪಕ್ಕದಲ್ಲಿನ ಇಂಡಿಯನ್ ಆಯಿಲ್ ಪೆಟ್ರೋಲ್ ಬಂಕ್ ಬಳಿ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ವತಿಯಿಂದ 80ಕ್ಕೂ ಹೆಚ್ಚು ಮಂದಿ ವಿಶೇಷಚೇತನರ ವಾಹನಗಳಿಗೆ ಉಚಿತವಾಗಿ ಪೆಟ್ರೋಲ್ ಹಾಕಿಸುವ ಮೂಲಕ ರಾಹುಲ್ ಗಾಂಧಿಯವರ ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲಯಿತು. ಈ ವೇಳೆ ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾನವ ಹಕ್ಕುಗಳ ವಿಭಾಗದ ಕೆ.ಎನ್.ರಘು ಮಾತನಾಡಿ, ರಾಹುಲ್ ಗಾಂಧಿಯವರ 50ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ವಿಶೇಷಚೇತನರ ವಾಹನಗಳಿಗೆ ಉಚಿತವಾಗಿ ಪೆಟ್ರೋಲ್ ವಿತರಣೆ ಮಾಡುತ್ತಿದ್ದೇವೆ ಎಂದರು.
ಪೆಟ್ರೋಲ್, ಡಿಸೇಲ್ ಮತ್ತು ದಿನ ಬಳಕೆಯ ಸಾಮಾಗ್ರಿಗಳ ಬೆಲೆ ಏರಿಕೆಯಾಗಿದ್ದು, ಬಡವರು, ಜನ ಸಾಮಾನ್ಯರು ಜೀವನ ನಡೆಸುವುದು ಕಷ್ಟಕರವಾಗಿದೆ. ಇದರಲ್ಲಿ ಒಂದು ಭಾಗ ಈ ವಿಶೇಷಚೇತನರು, ಇವರಿಗೆ ದುಡಿಮೆ ಕಡಿಮೆ, ಓಡಾಟಕ್ಕೆ ಗಾಡಿ ಇದ್ದು, ಬೆಲೆ ಏರಿಕೆಯಿಂದ ಪೆಟ್ರೋಲ್ ಹಾಕಿಸಿಕೊಳ್ಳುವುದು ಕಷ್ಟಕರವಾಗಿದೆ. ಕೇಂದ್ರ ಸರ್ಕಾರ ತೆರಿಗೆ ಹೇರಿದ್ದರಿಂದ ಪೆಟ್ರೋಲ್ ಬೆಲೆ ಗಗನಕ್ಕೇರಿದೆ. ಹೀಗಾಗಿ ಪೆಟ್ರೋಲ್ ಮೇಲೆ ವಿಧಿಸಿರುವ ತೆರಿಗೆ ಇಳಿಸಬೇಕು, ಇಲ್ಲವಾದರೆ ಜನಸಾಮಾನ್ಯರ ಗತಿ ಏನು? ಈ ಸರ್ಕಾರಕ್ಕೆ ಮಾನವೀಯತೆ ಇಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡುವ ವೈಫಲ್ಯಗಳ ಕಾರಣದಿಂದ ಜನ ಕಷ್ಟ ಅನುಭವಿಸುವಂತಾಗಿದೆ. ಮುಂದಿನ ದಿನಗಳಲ್ಲಿ ಜನ ಇವರಿಗೆ ಬುದ್ಧಿ ಕಲಿಸಬೇಕು ಎಂದರು. ಇದೇ ವೇಳೆ ಕೊರೊನಾ ಸಂಕಷ್ಟದಲ್ಲಿರುವ ಶಿಕ್ಷಕಿಯರಿಗೆ ಉಚಿತ ಆಹಾರದ ಕಿಟ್ ಕೂಡ ವಿತರಿಸಲಾಯಿತು.