ರಾಹುಲ್ ಗಾಂಧಿ ಬಳಿ 1 ತಿಂಗಳ ಸಮಯ ಕೇಳಿದ ಸಿದ್ದರಾಮಯ್ಯ

Public TV
1 Min Read
RAHUL SIDDU

ಬೆಂಗಳೂರು: ದೆಹಲಿಗೆ ದಿಢೀರ್‌ ಭೇಟಿ ನೀಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿಯ ಜೊತೆ 1 ತಿಂಗಳ ಸಮಯ ಕೇಳಿದ್ದಾರೆ.

ರಾಜ್ಯದಲ್ಲಿ ಮೀಸಲಾತಿ ಹೋರಾಟ ತೀವ್ರಗೊಳ್ಳುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಮಂಗಳವಾರ ದೆಹಲಿಗೆ ತೆರಳಿ ರಾಹುಲ್‌ ಗಾಂಧಿಯ ಜೊತೆ ಮಾತುಕತೆ ನಡೆಸಿದ್ದರು. ಈ ವೇಳೆ ಮಾರ್ಚ್‍ನಿಂದಲೇ ಪಕ್ಷದ ನೇತೃತ್ವದಲ್ಲಿ ಬೃಹತ್ ಜಾತಿ ಸಮಾವೇಶಕ್ಕೆ ಸಿದ್ಧತೆ ಮಾಡುವ ಬಗ್ಗೆ ಚರ್ಚೆ ನಡೆಸಿದ್ದಾರೆ ಎಂಬ ವಿಚಾರ ಮೂಲಗಳಿಂದ ಪಬ್ಲಿಕ್‌ ಟಿವಿಗೆ ಲಭ್ಯವಾಗಿದೆ.

rahul gandhi siddaramaiah

ಜಾತಿ ಸಮಾವೇಶಕ್ಕೂ ಮುನ್ನ ತಮ್ಮದೇ ಸರ್ಕಾರದಲ್ಲಿ ಸಿದ್ಧವಾಗಿದ್ದ ಜಾತಿಗಣತಿ ವರದಿ ಬಿಡುಗಡೆ ಮಾಡುವಂತೆ ಸರ್ಕಾರದ ವಿರುದ್ಧ ಹೋರಾಟ ತೀವ್ರಗೊಳಿಸಲು ತೀರ್ಮಾನ ತೆಗೆದುಕೊಂಡಿರುವ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಜಾತಿಗಣತಿ ವರದಿ ಬಹಿರಂಗವಾದರೆ ರಾಜ್ಯದಲ್ಲಿ ಹೊಸ ಜಾತಿ ಸಮೀಕರಣ ಲೆಕ್ಕಾಚಾರವಾಗುತ್ತದೆ. ಜಾತಿಗಣತಿ ವರದಿ ಪ್ರಕಾರ ರಾಜ್ಯದಲ್ಲಿ ಅಹಿಂದ ವರ್ಗಗಳ ಜನಸಂಖ್ಯೆಯೇ ಹೆಚ್ಚು ಎಂಬ ವಿಚಾರ ಈಗಾಗಲೇ ಸೋರಿಕೆಯಾಗಿದೆ. ಹೀಗಾಗಿ ಜಾತಿಗಣತಿ ಆಧರಿಸಿಯೇ ಜಾತಿ ಸಮಾವೇಶದ ರೂಪುರೇಷೆಗೆ ನಿರ್ಧಾರವನ್ನು ಸಿದ್ದರಾಮಯ್ಯ ಮಾಡಿದ್ದಾರೆ. ಈ ಕಾರಣಕ್ಕೆ ರಾಹುಲ್ ಗಾಂಧಿ ಬಳಿ ಸಿದ್ದರಾಮಯ್ಯ ಒಂದು ತಿಂಗಳ ಸಮಯವನ್ನು ಕೇಳಿದ್ದಾರೆ.

KURUBA 2

ಇಲ್ಲಿಯವರೆಗೂ ಸಿದ್ದರಾಮಯ್ಯ ಕುರುಬ ಸಮುದಾಯದ ನಾಯಕರಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಮೀಸಲಾತಿ ಹೋರಾಟದಲ್ಲಿ ಸಿದ್ದರಾಮಯ್ಯ ಅನುಪಸ್ಥಿತಿ ಎದ್ದು ಕಾಣುತ್ತಿದೆ. ಬೆಂಗಳೂರಿನಲ್ಲಿ ನಡೆದ ಸಮಾವೇಶದಲ್ಲೂ ಈಶ್ವರಪ್ಪ ಮತ್ತು ವಿಶ್ವನಾಥ್‌ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದರು.

ಕುರುಬ ಸಮುದಾಯದ ಮೀಸಲಾತಿ ಹೋರಾಟದ ಬಳಿಕ ಸಿದ್ದರಾಮಯ್ಯ ಹಿಂದ(ಹಿಂದುಳಿದ ಮತ್ತು ದಲಿತ) ಸಮಾವೇಶ ನಡೆಸಲು ಸಿದ್ಧತೆ ನಡೆಸಲು ಮುಂದಾಗುತ್ತಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

Share This Article
Leave a Comment

Leave a Reply

Your email address will not be published. Required fields are marked *