ಚಿಕ್ಕಬಳ್ಳಾಪುರ: ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ಕಾರಿಗೆ ಟಿಪ್ಪರ್ ಲಾರಿ ಡಿಕ್ಕಿ ಹೊಡೆದಿರುವ ಘಟನೆ ಚಿಕ್ಕಬಳ್ಳಾಪುರ ತಾಲೂಕಿನ ದೊಡ್ಡಫ್ಯಾಯಲಗುರ್ಕಿ ಬಳಿಯ ನಲ್ಲಗುಟ್ಟ ಬೆಟ್ಟದ ನಡೆದಿದೆ.
ಟಿಪ್ಪರ್ ಚಾಲಕ ಓವರ್ ಟೇಕ್ ಮಾಡುವ ಭರದಲ್ಲಿ ಹಿಂಬದಿಯಿಂದ ಕಾರಿಗೆ ಡಿಕ್ಕಿ ಹೊಡೆದಿದ್ದು ಕಾರು ಹೆದ್ದಾರಿ ಬದಿ ಸರಿದಿದೆ. ಘಟನೆಯಲ್ಲಿ ಕಾರಿನ ಹಿಂಭಾಗ ಜಖಂಗೊಂಡಿದ್ದು ಕಾರಿನಲ್ಲಿದ್ದ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕಾರಿನಲ್ಲಿದ್ದವರು ಬೆಂಗಳೂರಿನಿಂದ ಹೈದ್ರಾಬಾದ್ ಕಡೆಗೆ ತೆರಳುತ್ತಿದ್ದರು. ಗುಡಿಬಂಡೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಅಪಘಾತ ಪ್ರಕರಣ ನಡೆದಿದೆ.
ಇನ್ನು ರಾಷ್ಟ್ರೀಯ ಹೆದ್ದಾರಿ ಏಳರಲ್ಲಿ ಟಿಪ್ಪರ್ ಲಾರಿಗಳ ಹಾವಳಿ ಅತಿಯಾಗಿದ್ದು, ಅಧಿಕ ಭಾರ ಹೊತ್ತು ಸಾಗೋ ಟಿಪ್ಪರ್ ಲಾರಿಗಳ ಮಿತಿಮೀರಿದ ವೇಗ ಹಿಂಬದಿ ವಾಹನ ಸವಾರರು ಪರದಾಡುವಂತೆ ಮಾಡುತ್ತಿವೆ.
ಜಲ್ಲಿ ಕಲ್ಲು ಹಾಗೂ ಕಲ್ಲುಪುಡಿ ಸಾಗಿಸುವ ಟಿಪ್ಪರ್ ಲಾರಿಗಳಿಂದ ಕಲ್ಲುಪುಡಿ ಹಾಗೂ ಜಲ್ಲಿ ಕಲ್ಲುಗಳು ಹೆದ್ದಾರಿಯ ಮೇಲೆ ಬಿದ್ದು ಹಿಂಬದಿ ಬರುವ ವಾಹನಗಳ ಗಾಜಿನ ಮೇಲೆ ಬೀಳುತ್ತವೆ. ಇದರಿಂದ ಹಲವು ಕಾರುಗಳ ಗಾಜುಗಳು ಕೂಡ ಹಾನಿಯಾಗಿವೆ. ಟಿಪ್ಪರ್ ಲಾರಿಗಳ ಅತಿವೇಗದಿಂದ ಹಲವು ಬಾರಿ ಅಪಘಾತಗಳಾಗಿ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಹೀಗಾಗಿ ಸಂಬಂಧಪಟ್ಟವರು ಟಿಪ್ಪರ್ ಲಾರಿಗಳ ಹಾವಳಿಗೆ ಕಡಿವಾಣ ಹಾಕುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.